ರೇಷ್ಮೆ ರೈತರ ಸಮಸ್ಯೆಗಳ ಕುರಿತು ಸಭೆ
ಚಿಕ್ಕಬಳ್ಳಾಪುರ: ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಕೇಂದ್ರ ರೇಷ್ಮೆ ಮಂಡಳಿ ನೂತನ ಸದಸ್ಯ ಯಲುವಹಳ್ಳಿ ಎನ್. ರಮೇಶ್ ನೇತೃತ್ವದಲ್ಲಿ ರೈತರು ಸಮಸ್ಯೆಗಳು ಮತ್ತು ಅಗತ್ಯವಿರುವ ನೆರವನ್ನು ಪಡೆದುಕೊಳ್ಳುವುದರ ಕುರಿತು ಚರ್ಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ರೈತರ ಸಭೆಯಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಎನ್. ರಮೇಶ್ ರೇಷ್ಮೆ ಬೆಳೆಗಾರರಿಂದ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಿದರು. ರೈತ ಮುಖಂಡ ಮಳ್ಳೂರು ಶಿವಣ್ಣ ಮಾತನಾಡಿ, ಏಷ್ಯಾದಲ್ಲಿಯೇ ಹೆಚ್ಚಿಗೆ ವಹಿವಾಟನ್ನು ನಡೆಸುವ ರೇಷ್ಮೆ ಮಾರುಕಟ್ಟೆ ಎಂದು ಶಿಡ್ಲಘಟ್ಟ ಮಾರುಕಟ್ಟೆಯನ್ನು ಗುರುತಿಸಲಾಗಿದೆ. ಇಂತಹ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಸಮಸ್ಯೆಗಳಿಂದ ಮುಕ್ತರಾಗಿ ರೇಷ್ಮೆ ಬೆಳೆಯುವುದರಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸರ್ಕಾರ ಹೆಚ್ಚಿಗೆ ಒತ್ತು ಕೊಟ್ಟು ನೆರವು ನೀಡಬೇಕಾಗಿದೆ ಎಂದು ಕೋರಿದರು.
ಈ ಹಿಂದೆ ಕೇಂದ್ರ ಸರ್ಕಾರ ವಿದೇಶಿ ರೇಷ್ಮೆ ಆಮದು ಸುಂಕವನ್ನು ಶೇ.31 ರಿಂದ ಶೇ.5 ಕ್ಕೆ ಇಳಿಕೆ ಮಾಡಿದ ಪರಿಣಾಮ ದೇಶೀಯ ರೇಷ್ಮೆಗೆ ಬೆಲೆ ಕುಸಿದು ರೈತರು ಆರ್ಥಿಕ ನಷ್ಟ ಅನುಭವಿಸಿದರು. ಈ ನಡುವೆ ಅನೇಕ ಬಾರಿ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ ಪರಿಣಾಮ ಆಮದು ಸುಂಕವನ್ನು ಶೇ.31 ಕ್ಕೆ ಏರಿಸಲಾಯಿತು. ಇದರಿಂದ ಇದೀಗ ಮಾರುಕಟ್ಟೆಯಲ್ಲಿ ದೇಶೀಯ ರೇಷ್ಮೆ ಗೂಡು ಕೆ.ಜಿ.ಗೆ ಗರಿಷ್ಟ 460 ರು.ಗಳವರೆಗೂ ಮಾರಾಟವಾಗುತ್ತಿದೆ. ಈ ದರ ಇನ್ನೂ ಹೆಚ್ಚಾಗಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದೇಶಿ ರೇಷ್ಮೆ ಆಮದು ಸುಂಕವನ್ನು ಮತ್ತೆ ಶೇ.15 ಕ್ಕೆ ಇಳಿಸುವ ಪ್ರಸ್ತಾಪವು ಸರ್ಕಾರದ ಮುಂದಿದ್ದು ಯಾವುದೇ ಕಾರಣಕ್ಕೂ ವಿದೇಶಿ ರೇಷ್ಮೆ ಆಮದು ಸುಂಕವನ್ನು ಇಳಿಸಬಾರದು ಎಂದು ಒತ್ತಾಯಿಸಿದರು. ಪ್ರಮುಖವಾಗಿ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡಿ ರಾಜ್ಯದ ಸುಮಾರು 300ಕ್ಕೂ ಹೆಚ್ಚು ರೇಷ್ಮೆ ಇಲಾಖೆಯ ನಿರೀಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಈ ನಿರ್ಧಾರ ಸರಿಯಲ್ಲ. ರೇಷ್ಮೆ ಕೃಷಿಯ ಬಗ್ಗೆ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕವಾಗಿ ಇಲಾಖೆ ಕಾರ್ಯ ನಿರ್ವಹಿಸಬೇಕಲ್ಲದೇ ವರ್ಗಾವಣೆಯಾಗುತ್ತಿರುವ ನಿರೀಕ್ಷಕರ ಸೇವೆ ರೇಷ್ಮೆ ಕೃಷಿಕರಿಗೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದರು.
ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಚೌಡಸಂದ್ರ ಸಮೀಪ ಎರಡು ಎಕರೆ ಜಾಗವಿದ್ದು ಇಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾದರೆ ಅನುಕೂಲಕರವಾಗಿರುತ್ತದೆ ಎಂದರು.
ರೇಷ್ಮೆ ರೀಲರ್ಸ್ ಮುಖಂಡ ರಾಮಕೃಷ್ಣಪ್ಪ ಮಾತನಾಡಿ, ವಿಶ್ವದ ರೇಷ್ಮೆ ರಾಷ್ಟ್ರಗಳ ನಡುವೆ ಪೈಪೋಟಿ ನೀಡುವಂತೆ ರೇಷ್ಮೆಗೂಡಿನ ಗುಣಮಟ್ಟ ಹೆಚ್ಚಿಸಲು ಹೊಸ ರೇಷ್ಮೆ ತಳಿಗಳು ಅಗತ್ಯವಿದ್ದು ಈ ನಿಟ್ಟಿನಲ್ಲಿ ತಳಿಗಳ ಬಗ್ಗೆ ರೈತರಿಗೆ ಪರಿಚಯ ಮಾಡಿಕೊಡಬೇಕಾಗಿದೆ ಎಂದರು. ಸದಸ್ಯ ಎನ್. ರಮೇಶ್ ಮಾತನಾಡಿ, ರೇಷ್ಮೆ ಬೆಳೆಗಾರರು, ರೀಲರ್ಸ್ ಗಳ ಸಮಸ್ಯೆ ಸರ್ಕಾರ ಮುಂದಿಟ್ಟು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸಭೆಯಲ್ಲಿ ಜಿಪಂ ಸದಸ್ಯ ನಾರಾಯಣಸ್ವಾಮಿ, ರೇಷ್ಮೆ ಬೆಳೆಗಾರರಾದ ಯಲುವಹಳ್ಳಿ ಸೊಣ್ಣೇಗೌಡ, ಭೈರೇಗೌಡ, ಹರೀಶ್, ಕೆಂಪರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

