ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಬೇಡ: ಜಿವಿಎಸ್
ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಹುನ್ನಾರ ತಡೆಯಬೇಕು ಎಂದು ಸಿಪಿಎಂ ರಾಜ್ಯ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಹೇಳಿದರು.
ನಗರದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಸಿಐಟಿಯು ಸಂಘಟನೆ ಆಯೋಜಿಸಿದ್ದ ತಾಯಂದಿರು ಮತ್ತು ಮಕ್ಕಳ ಆಹಾರದ ಹಕ್ಕು ಉಳಿಸಿ, ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಿ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಪರ ಆಡಳಿತ ನೀಡುವುದರ ಬದಲಿಗೆ ಜನರಿಗೆ ತೊಂದರೆಯಾಗುವ ನೀತಿಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಜೀವನ ನಡೆಸಲು ಪರದಾಡುತ್ತಿದ್ದು ಕೂಲಿ ಕಾರ್ಮಿಕರ ಆರ್ಥಿಕ ಸಂಕಷ್ಟ ಹೇಳತೀರದಾಗಿದೆ. ಇಷ್ಟಾದರೂ ಸರ್ಕಾರಗಳು ಜನರ ಸಮಸ್ಯೆಗಳ ಬಗ್ಗೆ ಯೋಚಿಸದೆ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ಮತ್ತು ಮಕ್ಕಳ ಸಂಖ್ಯೆ, ಆರೋಗ್ಯ, ನಿರ್ವಹಣೆ ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಆದರೆ, ಅವರ ಕೆಲಸಕ್ಕೆ ಅನುಗುಣವಾಗಿ ವೇತನ ನೀಡದೇ ಸರ್ಕಾರ ಕೆಲಸ ಮಾಡಿಸಿಕೊಳ್ಳುತ್ತಿದೆ. ಇದರ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ಮಾಡಿ ಕನಿಷ್ಠ ವೇತನ, ಸೇವಾಭದ್ರತೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದರೂ ಇವರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ.
ಇದರ ಭಾಗವಾಗಿ ಹಂತ ಹಂತವಾಗಿ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸುತ್ತಿದೆ. ಇದರಿಂದ ಕಾರ್ಯ ನಿರ್ವಹಣೆಯಲ್ಲಿ ಲೋಪದೋಷಗಳು ಎದುರಾಗುತ್ತಿವೆ ಎಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ರಾಜ್ಯದಲ್ಲಿ ಸುಮಾರು 68 ಲಕ್ಷಕ್ಕೂ ಹೆಚ್ಚು ಮಕ್ಕಳು ಅಂಗನವಾಡಿ ಕೇಂದ್ರಗಳಿಂದ ನೆರವನ್ನು ಪಡೆಯುತ್ತಿದ್ದು ಅಪೌಷ್ಠಿಕತೆ ಸಮಸ್ಯೆ ಕಾಡುತ್ತಿದೆ. ಇದರ ನಡುವೆ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕಾದ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಅಪೌಷ್ಠಿಕತೆಯನ್ನು ದೂರ ಮಾಡಬೇಕೆಂಬ ಉದ್ದೇಶದಿಂದ ಜಾರಿಗೆ ತಂದ ಐಸಿಡಿಎಸ್ ಯೋಜನೆಯು ಖಾಸಗೀಕರಣಗೊಳ್ಳುತ್ತಿದ್ದು ಇದು ಅಂಗನವಾಡಿ ಕಾರ್ಯಕರ್ತೆಯರಲ್ಲಿ ಆತಂಕ ಮೂಢಿಸಿದೆ ಎಂದರು.
ಸಿಪಿಎಂ ಮುಖಂಡ ಗೋಪಿನಾಥ್, ಎಂ.ಪಿ. ಮುನಿವೆಂಕಟಪ್ಪ, ಸಿದ್ದಗಂಗಪ್ಪ, ಚನ್ನರಾಯಪ್ಪ, ಬಿ.ಎನ್. ಮುನಿಕೃಷ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

