ರಸ್ತೆ ದುರಸ್ತಿಗೊಸಿ
ಮಾಲೂರು ಪಟ್ಟಣದ ಬೆಂಗಳೂರು ರಸ್ತೆಯ ಡಾ. ರಾಜ್ ವೃತ್ತದಲ್ಲಿ ದೊಡ್ಡಹಳ್ಳವಾಗಿದ್ದು, ಇದರಿಂದ ದಿನನಿತ್ಯ ಅಪಘಾತ ಸಂಭವಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾಗಿರುವುದರಿಂದ ಅವರೇ ಸರಿ ಪಡಿಸಲಿ ಎಂದು ಪುರಸಭೆ ಸಮ್ಮನಿರುವುದರಿಂದ ವಾಹನ ಸವಾರರಿಗೆ ಕಷ್ಟವಾಗುತ್ತಿದೆ. ಲೋಕೋಪಯೋಗಿ ಇಲಾಖೆಗೆ ಶಾಸಕರು ಸೂಕ್ತ ಮಾರ್ಗದರ್ಶನ ನೀಡಿ ರಸ್ತೆಯನ್ನು ಸರಿಪಡಿಸುವ ವ್ಯವಸ್ಥೆ ಮಾಡಲಿ.
ಟಿ ರವಿ, ಪೆಟ್ಟಿಗೆ ಅಂಗಡಿ ಮಾಲೀಕ, ಮಾಲೀಕ
ಕಸ ತೆಗೆಯಲು ಮನವಿ
ಕೆಜಿಎಫ್ ಉರಿಗಾಂಪೇಟೆಯ ಶ್ರೀ ಸುಬ್ರಮಣಿ ದೇವಸ್ಥಾನದ ಮುಂಭಾಗ ಕಸದ ರಾಶಿ ತುಂಬಿ ದುರ್ನಾತ ಬೀರುತ್ತಿದ್ದರೂ ನಗರಸಭೆ ಸಿಬ್ಬಂದಿ ಕಸ ವಿಲೇವಾರಿಗೆ ಮುಂದಾಗುತ್ತಿಲ್ಲ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ, ಸುತ್ತಮುತ್ತಲಿನ ಬಡಾವಣೆ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಕೂಡಲೇ ನಗರಸಭೆ ಪೌರಾಯುಕ್ತರು ಇಲ್ಲಿ ಕಸ ಹಾಕದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ..
ಟಿ ಸುರೇಶ್ಕುಮಾರ್, ಉರಿಗಾಂಪೇಟೆ ನಿವಾಸಿ.
ಈ ರಸ್ತೆಗೆ ಮುಕ್ತಿ ಎಂದು?
ಕೋಲಾರ ನಗರಸಭೆಗೆ ಸೇರಿದ 35ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಬೀಡಿ ಕಾಲೋನಿಯ ಜನರು ಒಡಾಡಲು ಸರಿಯಾದ ರಸ್ತೆಗಳು ಇಲ್ಲ. ಕಾಂಕ್ರೀಟ್ ಇಲ್ಲವೇ ಟಾರು ರಸ್ತೆಗಾಗಿ ಅನೇಕ ವರ್ಷಗಳಿಂದ ಇಲ್ಲಿನ ಜನರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಈ ಭಾಗದ ನಗರಸಭೆ ಸದಸ್ಯ ವಾರ್ಡಿಗೆ ಬಂದು ಜನರ ಸಮಸ್ಯೆ ಅಲಿಸಿ ಪರಿಹಾರ ಕಲ್ಪಿಸಲು ವಿಫಲರಾಗಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ನಮ್ಮ ವಾರ್ಡಿಗೆ ನಗರೋತ್ಥಾನ ಕಾಮಗಾರಿಗಳ ವೀಕ್ಷಣೆಗಾಗಿ ಭೇಟಿ ನೀಡಿದ್ದಾಗಲೂ ರಸ್ತೆಯ ಅವ್ಯವಸ್ಥೆ ತಿಳಿಸಿದ್ದೇವೆ.
ರಸ್ತೆಯ ಮಧ್ಯೆ ಇರುವ ಗುಂಡಿಯನ್ನು ಮುಚ್ಚಿ ಕೋಳಚೆ ನೀರು ತಡೆಯಬೇಕು, ರಸ್ತೆಯಲ್ಲಿ ಪ್ಲಾಸ್ಟಿಕ್, ಇನ್ನಿತರ ಕಸ-ಕಡ್ಡಿ ಎಸೆಯುವುದರಿಂದ ಪರಿಸರ ಹಾಳಾಗುತ್ತಿದೆ. ನಗರಸಭೆಯವರು ಕೂಡಲೇ ರಸ್ತೆಯನ್ನು ಅಭಿವೃದ್ಧಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು.
ಟಿ ಫಯಾಜ್, ಬೀಡಿ ಕಾಲೋನಿ,ಕೋಲಾರ
ಚರಂಡಿಯಲ್ಲಿ ಗಿಡಗಂಟೆಗಳು
ಮಳೆ ನೀರು, ಕೊಳಚೆ ನೀರು ಹರಿಯಲು ನಗರಸಭೆಯಿಂದ ನಮ್ಮ ವಾರ್ಡಿನಲ್ಲಿ ಸಾವಿರಾರು ರುಪಾಯಿ ಖರ್ಚು ಮಾಡಿ ಬಾಕ್ಸ್ ಚರಂಡಿಯನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಚರಂಡಿಯನ್ನು ಹೂಳು ತುಂಬಿರುವುದಲ್ಲದೆ, ಗಿಡಗಂಟೆಗಳು ಬೆಳೆದಿರುವುದರಿಂದ ನೀರು ಹರಿಯದೆ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಇಲ್ಲಿನ ಅನೇಕ ಚರಂಡಿಗಳಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ತುಂಬಿರುವುದರಿಂದ ದುರ್ವಾಸನೆ ತಡೆಯಲಾಗದೆ ಜನತೆ ಪರಿತಪಿಸುವಂತಾಗಿದೆ. ನಗರಸಭೆಯ ಸದಸ್ಯರು ವಾರ್ಡಿನ ಜನರ ಕಷ್ಟಕ್ಕೆ ಸ್ಪಂಧಿಸುತ್ತಿಲ್ಲ. ಕೊಳವೆ ಬಾವಿಯಲ್ಲಿ ನೀರಿದ್ದರೂ ಟ್ಯಾಂಕರ್ ಮೂಲಕ ಬೇಕಾಬಿಟ್ಟಿಯಾಗಿ ನೀರು ಸರಬರಾಜು ಮಾಡುವ ಮೂಲಕ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಅಧಿಕಾರಿಗಳು ತಕ್ಷಣ
ಚರಂಡಿಗಳ ಸ್ವಚ್ಛತೆ ಹಾಗೂ ನೀರಿನ ಸಮಸ್ಯೆ ನಿವಾರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಟಿ ಅಯ್ಯೂಬ್ ಖಾನ್, ಕೋಲಾರ
ನೋಡಿ ಸ್ವಾಮಿ ನಮ್ಮೂರ ಬಸ್ಸು
ನಾನು ಇತ್ತೀಚೆಗೆ ಶ್ರೀನಿವಾಸಪುರಕ್ಕೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ತುರ್ತು ಕೆಲಸಕ್ಕಾಗಿ ಪ್ರಯಾಣಿಸಿದ್ದೆ. ಸರ್ಕಾರ ಬೆಂಗಳೂರು ಜನರಿಗೆ ಓಡಾಡಲು ಹೈಟೆಕ್ ಬಸ್ಸುಗಳನ್ನು ಒದಗಿಸಿದೆ. ಕೋಲಾರ ಡಿಪೋ ಮೂಲಕವೂ ಕೆಲವು ಕಡೆ ಒಳ್ಳೆಯ ಬಸ್ಸುಗಳು ಸಂಚರಿಸುತ್ತಿವೆ.ಆದರೆ, ಗ್ರಾಮೀಣ ಪ್ರದೇಶಗಳಿಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದಕ್ಕೆ ಕೋಲಾರ-ಶ್ರೀನಿವಾಸಪುರ ಮಾರ್ಗದಲ್ಲಿ ಸಂಚರಿಸುವ ಕಿತ್ತು ಹೋಗಿರುವ ಸೀಟುಗಳುಳ್ಳ ಬಸ್ಸೇ ಸಾಕ್ಷಿ. ಇದರ ಜೊತೆಗೆ ಅನೇಕ ಶಟಲ್ ಬಸ್ಸುಗಳಲ್ಲಿ ಕಿಟಕಿ ಗಾಜುಗಳು ಒಡೆದು ಹೋಗಿವೆ. ಕೆಲವು ಕಳಚಿಕೊಂಡು ಸಂಗೀತ ಹಾಡುತ್ತೇವೆ. ರಸ್ತೆಯಲ್ಲಿ ಮಾಡುವ ಒಕ್ಕಣೆಯಿಂದಾಗಿ ಬಸ್ಸಿನೊಳಕ್ಕೆ ಧೂಳು ಪ್ರವೇಶಿಸಿ ಜನತೆಯ ನೆಮ್ಮದಿಗೆ ಭಂಗ ಉಂಟಾಗುತ್ತಿದೆ. ಸರ್ಕಾರ ಜಿಲ್ಲೆಗೆ ಹೊಸ ಬಸ್ಸುಗಳನ್ನು ನೀಡಿದ್ದು, ಕೂಡಲೇ ಡಕೋಟಾ ಬಸ್ಸುಗಳನ್ನು ಹಿಂದಕ್ಕೆ ಪಡೆದು ಗ್ರಾಮೀಣ ಜನರಿಗೂ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕ್ಷೇತ್ರದ ಜನರಿಗೆ ಒಳ್ಳೆ ಬಸ್ಸುಗಳಲ್ಲಿ ಓಡಾಡುವ ಅವಕಾಶ ಕಲ್ಪಿಸಲು ಶ್ರೀನಿವಾಸಪುರ ಶಾಸಕರು ಕ್ರಮ ಕೈಗೊಳ್ಳಲಿ.
ಟಿ ಸುದರ್ಶನ್, ಶ್ರೀನಿವಾಸಪುರ
ನೀರಿನ ಘಟಕಕ್ಕೆ ಗ್ರಹಣ
ಪ್ರಯಾಣಿಕರ ಅನುಕೂಲಕ್ಕಾಗಿ ಕೋಲಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ 2001ರಲ್ಲಿ ಸ್ಥಾಪಿಸಿರುವ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಉಪಯೋಗಕ್ಕೆ ಬಾರದೆ ಸ್ಥಗಿತಗೊಂಡಿದೆ. ಕೋಲಾರ ಸಂಸದ ಕೆ.ಎಚ್. ಮುನಿಯಪ್ಪನವರು 1.20 ಲಕ್ಷ ರು.ಗಳನ್ನು ಸಂಸದರ ಅನುದಾನದಲ್ಲಿ ನೀಡಿದ್ದಾರೆ. ರೋಟರಿ ಕ್ಲಬ್ ಈ ನೀರಿನ ಘಟಕದ ನಿರ್ವಹಣೆಯ ಜವಾಬ್ದಾರಿ ಹೊತ್ತಿತ್ತು. ಕೆಎಸ್ಆರ್ಟಿಸಿಯವರು ಮನಸ್ಸು ಮಾಡಿದರೆ ವಾರಕ್ಕೆ ಒಮ್ಮೆ ಟ್ಯಾಂಕರ್ನಲ್ಲಿ ನೀರು ತರಿಸಿಕೊಂಡು ನೀರಿನ ಘಟಕಕ್ಕೆ ತುಂಬಿಸಿ ಅದನ್ನು ಶುದ್ಧೀಕರಿಸಿ ಪ್ರಯಾಣಿಕರಿಗೆ ಪೂರೈಕೆ ಮಾಡಬಹುದು. ಒಂದು ಗ್ಲಾಸ್ ನೀರು ತುಂಬಿರುವ ಪ್ಯಾಕೆಟ್ಗೆ 1ರಿಂದ 2 ರು.ನೀಡಬೇಕಾಗಿದೆ. ಬೇಸಿಗೆ ಆರಂಭವಾಗುತ್ತಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ನೀರಿನ ಘಟಕ ಪುನರಾರಂಭಕ್ಕೆ ರಸ್ತೆ ಸಾರಿಗೆ ನಿಗಮದವರು ಗಮನ ನೀಡಬೇಕು.
ಟಿ ಜಯಕುಮಾರ್, ನರಸಾಪುರ, ಕೋಲಾರ ತಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

