ಕೋಲಾರ

ಪ್ರತಿ ಗ್ರಾಮದಲ್ಲೂ ನಮೋ ಟೀ ಸ್ಟಾಲ್

Published On :

ಮಾಲೂರು: ನರೇಂದ್ರ ಮೋದಿ ಟೀ ಅಂಗಡಿಯನ್ನು ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿ ಗ್ರಾಮದಲ್ಲೂ ಪ್ರಾರಂಭಿಸಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್ ಹೇಳಿದರು. ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ಹೋಬಳಿ ಅಧ್ಯಕ್ಷ ಗುರನಾಥರೆಡ್ಡಿ ನೇತೃತ್ವದಲ್ಲಿ ಪ್ರಾರಂಭಿಸಲಾಗಿರುವ ಒಂದು ರು.ಗೆ ಒಂದು ಚಹಾ ನೀಡುವ ಟೀ ಅಂಗಡಿಗೆ ಚಾಲನೆ ನೀಡಿ ಮಾತನಾಡಿದರು. ಬಿ.ಆರ್. ವೆಂಕಟೇಶ್ ಇದ್ದರು.

ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
ಚಿಂತಾಮಣಿ: ಜಾತಿ ಆದಾರದ ಮೇಲೆ ಮಾದಿಗ ಜನಾಂಗದ ಮೀಸಲಾತಿ ಹೆಚ್ಚಿಸಬೇಕೆಂದು ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಜಂಗಮ ಶೀಗಹಳ್ಳಿ ದೇವರಾಜ್ ಆಗ್ರಹಿಸಿದ್ದಾರೆ. ತಾಲೂಕಿನ ಮುರುಗಮಲ್ಲಾ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಸತಿ ನಿಲಯದ ಸಮುದಾಯ ಭವನದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಮಾದಿಗರ ಸಮುದಾಯ ಹೆಚ್ಚಾಗಿದ್ದು, ಓಟ್ಬ್ಯಾಂಕ್ಗಾಗಿ ಜನಾಂಗವನ್ನು ಬಳಸಿಕೊಂಡು ನಂತರ ಮೀಸಲಾತಿ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲಗೊಂಡಿವೆ ಎಂದು ಆರೋಪಿಸಿದರು. ರಾಜ್ಯ ಜಂಟಿ ಕಾರ್ಯದರ್ಶಿ ಕಲ್ಲಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ದಲಿತರಿಗೆ ನ್ಯಾಯಯುತವಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಕಿಡಿ ಕಾಡಿದರು. ಕೋಲಾರ ತಾಲೂಕು ನರಸಾಪುರದ ದೊಡ್ಡವಲ್ಲಬ್ಬಿಯಲ್ಲಿ ಕಳೆದ ವಾರ ಅಂಬೇಡ್ಕರ್ ಶಿಲಾ ಫಲಕಕ್ಕೆ ಸಗಣಿ ಎರಚಿ ಅವಮಾನ ಮಾಡಿರುವ ಕೃತ್ಯಕ್ಕೆ ಕಾರಣರಾದ ಕಿಡಿಕೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪಿ.ವಿ. ವೆಂಕಟರವಣಪ್ಪ ಆಗ್ರಹಿಸಿದರು. ಸಮಿತಿಯ ಜಯಚಂದ್ರ, ರವಿ, ನರಸಿಂಹಮೂರ್ತಿ ಇದ್ದರು.

ವಿವೇಕಾನಂದರ ಕನಸು ನನಸು ಮಾಡಿ: ಪೂರ್ಣಾನಂದಸ್ವಾಮಿ
ಚಿಕ್ಕಬಳ್ಳಾಪುರ: ಸ್ವಾಮಿ ವಿವೇಕಾನಂದರ ಕನಸನ್ನು ನನಸು ಮಾಡಲು ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಒಳ್ಳೆಯ ವಿಚಾರಧಾರೆಗಳನ್ನು ಬೆಳೆಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕೆಲಸವಾಗಬೇಕೆಂದು ಶ್ರೀ ರಾಮಕೃಷ್ಣವಿವೇಕಾನಂದ ಆಶ್ರಮದ ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಪೂರ್ಣಾನಂದಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಪೋಶೆಟ್ಟಿಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಸಮಾರೋಪ ಸಮಾರಂಭ ಹಾಗೂ ಪ್ರತಿಭೋತ್ಸವ 2013 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತಿದ್ದು ಇವುಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಯುವ ಜನರಲ್ಲಿ ಬೆಳೆಸಬೇಕು ಎಂದರು.
ಗೌರಿಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹನುಮಂತರೆಡ್ಡಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಗುಣಮಟ್ಟದ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ರೂಪುಗೊಳ್ಳಬೇಕು ಎಂದರು. ಜಿಪಂ ಪ್ರಗತಿಪರಿಶೀಲನಾ ಸದಸ್ಯ ವೆಂಕಟೇಶ್ ಪ್ರಸಾದ್ ಮಾತನಾಡಿದರು. ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಸಂಸ್ಥೆಯ ಅಧ್ಯಕ್ಷ ನಾರಾಯಣಸ್ವಾಮಿ ಬಹುಮಾನ ವಿತರಿಸಿ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಭರತ ನಾಟ್ಯ, ಕೋಲಾಟ, ಜಾನಪದ ನೃತ್ಯ, ವಿವೇಕಾನಂದರ ವೇಷಾವಳಿಯಲ್ಲಿ ಚಿಕಾಗೋ ಉಪನ್ಯಾಸ ನೆರೆದಿದ್ದ ಜನರ ಗಮನ ಸೆಳೆಯಿತು.

ತಂಬಿಹಳ್ಳಿಯಲ್ಲಿ ಮಧ್ವನವಮಿ
ಕೋಲಾರ: ಮಧ್ವನವಮಿ ಅಂಗವಾಗಿ ತಾಲೂಕು ತಂಬಿಹಳ್ಳಿ ಶ್ರೀಮನ್ಮಾಧವತೀರ್ಥ ಮೂಲ ಮಹಾಸಂಸ್ಥಾನದಲ್ಲಿ ಮುಖ್ಯಪ್ರಾಣದೇವರಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ಜಿ.ಕೆ. ಗೋವಿಂದರಾವ್ ವಿಶೇಷ ಪೂಜೆ ಅಲಂಕಾರದ ಪೌರೋಹಿತ್ಯ ವಹಿಸಿದ್ದರು. ಶ್ರೀಮಠದ ಪೀಠಾಧಿಪತಿ ವಿದ್ಯಾಸಾಗರ ಮಾಧವತೀರ್ಥ ಸ್ವಾಮಿಜಿ ಸಾನ್ನಿಧ್ಯದಲ್ಲಿ ಬಿ.ಎಲ್. ರಾಘವೇಂದ್ರರಾವ್ ಅಧ್ವರ್ಯತನದಲ್ಲಿ ಪವಮಾನ ಹೋಮ ನಡೆಯಿತು. ಕೋಲಾರ, ಮುಳಬಾಗಿಲು, ಬೆಂಗಳೂರಿನ ಭಕ್ತರು ಭಾಗವಹಿಸಿದ್ದರು.

ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ
ಮಾಲೂರು: ತಾಲೂಕಿನಾದ್ಯಂತ ತೀವ್ರವಾಗಿರುವ ನೀರಿನ ಸಮಸ್ಯೆ ಬಗೆ ಹರಿಸಲು 300 ಕೊಳವೆ ಬಾವಿಯನ್ನು ಕೊರೆಸಲಾಗಿದ್ದು, ಅವಶ್ಯವಿದ್ದಲಿ ಇನ್ನೂ ಹೆಚ್ಚಿನ ಕೊಳವೆ ಬಾವಿ ಕೊರೆಸಲಾಗುವುದು ಎಂದು ಶಾಸಕ ಕೆ.ಎಸ್. ಮಂಜುನಾಥ್ ಗೌಡ ಹೇಳಿದರು. ತಾಲೂಕಿನ ಮಡಿವಾಳ ಗ್ರಾಪಂ ವ್ಯಾಪ್ತಿಯ ಪಂಚಾಯ್ತಿಗಳಲ್ಲಿ ಜನತೆಯ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ನದಿ, ಜಲಾಶಯವಿಲ್ಲದ ನಮ್ಮ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳೇ ನೀರಿನ ಮೂಲವಾಗಿದೆ. ಸುವರ್ಣ ಭೂಮಿ ಯೋಜನೆಯಲ್ಲಿ ಆಯ್ಕೆಯಾಗಿರುವ ಮಡಿವಾಳ ಹಾಗೂ ಚೂಕ್ಕಂಡಹಳ್ಳಿಯಲ್ಲಿ ಶೀಘ್ರದಲ್ಲೇ ಮೂಲ ಸೌಕರ್ಯಗಳ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ನಂಜೇಗೌಡ, ಸೋಮಣ್ಣ, ಪಂಚಾಯ್ತಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷ ಮುನಿರಾಜು, ಸದಸ್ಯ ಚಂದ್ರಶೇಖರ್ ಇದ್ದರು.

ಇಂದು ಆದಿಜಾಂಬವ ಜಯಂತಿ
ಕೋಲಾರ: ಮಾದಿಗ ಸಮುದಾಯದವರಿಂದ ಶ್ರೀನಿವಾಸಪುರ ನಗರದಲ್ಲಿ ಫೆ.10 ಸೋಮವಾರ ಬೆಳಿಗ್ಗೆ 11ಗಂಟೆಗೆ ಶ್ರೀ ಗುರು ಆದಿಜಾಂಭವಂತಸ್ವಾಮಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಶ್ರೀಗುರು ಆದಿಜಾಂಭವಂತ ಸ್ವಾಮಿ ಜಯಂತಿಯನ್ನು ಪ್ರತಿವರ್ಷ ಜ.14 ರಂದು ನಡೆಸಲು ನಿರ್ಧರಿಸಿದ್ದು ಕಾರಣಾಂತರಗಳಿಂದ ನಾಳೆ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ 5 ಸಾವಿರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾದಿಗ ಸಮುದಾಯದ ಮುಖಂಡರು ತಿಳಿಸಿದ್ದಾರೆ.

ಮನೆ ನಿರ್ಮಾಣದ ಅನುದಾನಕ್ಕೆ ಒತ್ತಾಯ
ಕೋಲಾರ: ಮನೆ ನಿರ್ಮಾಣ ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತರಿಗೆ ಸರ್ಕಾರದಿಂದ ಮನೆ ನಿರ್ಮಾಣಕ್ಕೆಂದು 1.25 ಲಕ್ಷ ರು. ಮಂಜೂರು ಮಾಡಿದ್ದು ಪಲಾನುಭವಿಗಳಿಗೆ 2 ಕಂತು ಹಣ ಬಿಡುಗಡೆ ಮಾಡಿದ್ದು 3 ನೇ ಕಂತಿನ ಹಣ ಬಿಡುಗಡೆ ಮಾಡದೆ ಪಂಚಾಯತಿ ಅಧಿಕಾರಿಗಳು ಪಲಾನುಭವಿಗಳನ್ನು ವಂಚಿಸುತ್ತಿದ್ದು ಪಂಚಾಯತಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘ ಒತ್ತಾಯಿಸಿದೆ. ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ ಮಾತನಾಡಿ, ಫಲಾನುಭವಿಗಳಿಗೆ ಮೂರು ಕಂತುಗಳಲ್ಲಿ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಆದೇಶವಿದ್ದರೂ ಗ್ರಾಪಂ ಅಧಿಕಾರಿಗಳು, ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು 2 ಕಂತಿನ ಹಣವನ್ನು ಬಿಡುಗಡೆ ಮಾಡಿ 3ನೇ ಕಂತಿನ ಹಣ ಬಿಡುಗಡೆ ಮಾಡದೆ ಮನೆ ನಿರ್ಮಾಣ ಪೂರ್ಣಗೊಂಡರೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸಾಲ ಸೂಲ ಮಾಡಿ ಮನೆ ನಿರ್ಮಾಣ ಪೂರ್ಣಗೊಳಿಸಿ ನಂತರ ಹಣ ಬಿಡುಗಡೆ ಮಾಡುವಂತೆ ಪಂಚಾಯತಿ  ಕಾರ್ಯಾಲಯಕ್ಕೆ ಹೋದರೆ ನಿಮ್ಮ ಹೆಸರನ್ನು ಕಪ್ಪು ಪಟ್ಟಿಗೆ ಸೆರಿಸಲಾಗಿದ್ದು ನಿಮಗೆ ಹಣ ಬುಡುಗಡೆ ಮಾಡಲಾಗುವುದಿಲ್ಲ ಎಂದು ಅಧಿಖಾರಿಗಳ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು. ಇದರಿಂದ ಫಲಾನುಭವಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಒ ಮಧ್ಯೆ ಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿ ರಾಜ್ಯ ರೈತ ಸಂಘದ ಚೌಡೇಗೌಡ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ವೀರಾಪುರ ಮಂಜುನಾಥ್, ಅಗ್ರಾರ ಸೋಮೇನಹಳ್ಳಿ ನಾರಾಯಣಸ್ವಾಮಿ, ಚಂದ್ರಪ್ಪ ಮತ್ತು ದೊಡ್ನಹಳ್ಳಿ ಕೃಷ್ಣಪ್ಪ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.