ಮಂಜೂರಾದ ರೇಲ್ವೆ ಯೋಜನೆಗಳಿಗೆ ಚಾಲನೆ ಸಿಗಲಿ
-ಪಾ.ಶ್ರೀ. ಅನಂತರಾಮ್
ಕೋಲಾರ: ಕೇಂದ್ರ ಸರ್ಕಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಬಾರಿಯ ರೇಲ್ವೆ ಬಜೆಟ್ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಿದರೆ ಬೇಡವೆನ್ನುವವರು ಯಾರು ಇಲ್ಲ. ಆದರೆ, ಈ ಹಿಂದೆ ಮಂಜೂರಾಗಿರುವ ಯೋಜನೆಗಳಿಗೆ ಅದಷ್ಟು ಬೇಗನೆ ಚಾಲನೆ ಸಿಗಬೇಕೆಂಬುದು ಎಲ್ಲರ ಒತ್ತಾಸೆ.
ಕರ್ನಾಟಕದವರೇ ಆದ ಕಂಠಿ, ಜಾಫರ್ ಷರೀಫ್, ಕೆ.ಎಚ್. ಮುನಿಯಪ್ಪ ಅವರು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಪ್ರಸ್ತುತ ರೇಲ್ವೆ ಇಲಾಖೆಯ ಸಾರಥ್ಯ ವಹಿಸಿರುವ ಮಲ್ಲಿಕಾರ್ಜುನಖರ್ಗೆಯವರು ನಮ್ಮ ರಾಜ್ಯದವರೇ ಆಗಿದ್ದು ಈ ಹಿಂದೆ ಮಂಜೂರಾಗಿರುವ ಯೋಜನೆಗಳು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಬರುವುದಕ್ಕೆ ರೇಲ್ವೆ ಮಂಡಳಿಯನ್ನು ಚುರುಕುಗೊಳಿಸಬೇಕಾಗಿದೆ.
2012-13ನೇ ಸಾಲಿನಲ್ಲಿ ಘೋಷಣೆಯಾಗಿರುವ ರೇಲ್ವೆ ಕೋಚ್ ಘಟಕ, ಕೋಲಾರ-ವೈಟ್ ಫೀಲ್ಡ್ ನಡುವೆ ಹೊಸ ರೈಲು ಮಾರ್ಗ, ಚಿತ್ತೂರು-ಮುಳಬಾಗಿಲು-ಬಂಗಾರಪೇಟೆಯ ಹೊಸ ರೈಲು ಮಾರ್ಗ, ಶ್ರೀನಿವಾಸಪುರ-ಮದನಪಲ್ಲಿ ರೈಲು ಮಾರ್ಗ, ಕೆಜಿಎಫ್ನ ಮಾರಿಕುಪ್ಪಂ-ಆಂಧ್ರಪ್ರದೇಶದ ಕುಪ್ಪಂ ನಡುವಿನ ರೈಲು ಮಾರ್ಗದ ಕಾಮಗಾರಿಗಳಿಗೆ ಅನುಮತಿ ಸಿಕ್ಕಿದ್ದರೂ ಯೋಜನೆಗೆ ಚಾಲನೆ ಸಿಗುವುದು ವಿಳಂಬವಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಬಳಿ ಸುಮಾರು 1,100 ಎಕರೆ ಪ್ರದೇಶದಲ್ಲಿ 1,460 ಕೋಟಿ ವೆಚ್ಚದಲ್ಲಿ ರೇಲ್ವೆ ಕೋಚ್ ಘಟಕ ನಿರ್ಮಾಣಕ್ಕೆ 2012ರಲ್ಲೇ ಯೋಜನೆ ಪ್ರಕಟಿಸಲಾಗಿದೆ. ರಾಜ್ಯ ಸರ್ಕಾರ ಯೋಜನೆಗೆ ಬೇಕಾದ ಭೂಮಿಯನ್ನು ನೀಡಲು ರೇಲ್ವೆ ಮಂಡಳಿಯ ಜೊತೆ 2014ರ ಜನವರಿ 30ರಂದು ಒಪ್ಪಂದ ಮಾಡಿಕೊಂಡಿದೆ.
ಈ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಬರಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡಿಸಬೇಕಾದ ಜವಾಬ್ದಾರಿ ರೇಲ್ವೆ ಮಂಡಳಿ ಅಧಿಕಾರಿಗಳ ಮೇಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಅಧಿಕಾರಿಗಳ ಮೇಲೆ ಒತ್ತಡವೇರದಿದ್ದರೆ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಜಿಲ್ಲೆಯ ಸಂಸದರು ಆಗಿರುವ ಕೆ.ಎಚ್. ಮುನಿಯಪ್ಪ ಹೆಚ್ಚಿನ ಆಸಕ್ತಿ ವಹಿಸಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಗಮನ ನೀಡದಿದ್ದರೆ ಇವರ ಕನಸಿನ ಯೋಜನೆಗೆ ಹಿನ್ನಡೆಯಾಗಬಹುದು. ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಮಂಡಿಸಲಿರುವ ರಾಜ್ಯ ಬಜೆಟ್ನಲ್ಲಿ ರೇಲ್ವೆ ಕೋಚ್ ಘಟಕಕ್ಕೆ ಬೇಕಾದ ಅಗತ್ಯ ಅನುದಾನ ದೊರಕುವಂತೆ ಮಾಡುವುದು ಮುನಿಯಪ್ಪ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಕರ್ತವ್ಯವೂ ಹೌದು.
ಇದೇ ರೀತಿ ಕದರಿಯಿಂದ ಮುಳಬಾಗಿಲು-ಬಂಗಾರಪೇಟೆಯವರೆಗೆ ರೈಲು ಮಾರ್ಗ ಯೋಜನೆಗೆ ಈ ಹಿಂದೆಯೇ ಮಂಜೂರಾತಿ ಸಿಕ್ಕಿದೆ. ಕದರಿಯಿಂದ ಚಿತ್ತೂರಿನವರೆಗೆ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಮುಳಬಾಗಿಲು-ಬಂಗಾರಪೇಟೆ ಮಾರ್ಗಕ್ಕೆ ಬೇಕಾದ ಭೂಮಿಯನ್ನು ಪಡೆಯಲು ಇನ್ನು ಪ್ರಕ್ರಿಯೆ ಆರಂಭವಾಗಿಲ್ಲ. ರಾಜ್ಯ ಸರ್ಕಾರ ಮತ್ತು ರೇಲ್ವೆ ಇಲಾಖೆಯು ಜಂಟಿಯಾಗಿ ಕಾರ್ಯಕ್ರಮ ರೂಪಿಸಿ ಅಗತ್ಯ ಭೂಮಿಯನ್ನು ರೈತರಿಂದ ಪಡೆಯಲು ಆಸಕ್ತಿ ತೋರದಿದ್ದರೆ ಯೋಜನೆ ನೆನಗುದಿಗೆ ಬೀಳಲಿದೆ.
ಇನ್ನು ಕೋಲಾರ-ವೈಟ್ ಫೀಲ್ಡ್ ನಡುವೆ ರೈಲು ಮಾರ್ಗಕ್ಕೆ ಕೆ.ಎಚ್. ಮುನಿಯಪ್ಪ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾಗಲೇ ಮಂಜೂರಾತಿ ಸಿಕ್ಕಿದ್ದರೂ ಭೂಮಿ ಸ್ವಾಧೀನಕ್ಕೆ ಪರಿಣಾಮಕಾರಿ ಕ್ರಮಗಳು ಆಗದಿರುವುದರಿಂದ ವಿಳಂಬವಾಗುತ್ತಿದೆ. ಕೆಲವು ರೈತರು ಭೂಮಿಯನ್ನು ರೇಲ್ವೆ ಇಲಾಖೆಗೆ ಕೊಡಲು ಒಪ್ಪುತ್ತಿಲ್ಲ. ಈ ರೈತರನ್ನು ಮನವೊಲಿಸುವ ಕೆಲಸ ಚುರುಕುಗೊಂಡಿಲ್ಲ, ಜಿಲ್ಲೆಯ ಜನರಿಗೆ ಪ್ರಯೋಜನವಾಗುವ ಯೋಜನೆಗೆ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಪ್ರಯತ್ನಿಸದಿರುವುದು ಗಮನಿಸಿದರೆ ರಾಜಕೀಯ ಸೋಂಕಿನಿಂದಾಗಿ ಯೋಜನೆ ಕೈತಪ್ಪಿ ಹೋಗುವ ಶಂಕೆ ವ್ಯಕ್ತವಾಗುತ್ತಿದೆ. 2012ರಲ್ಲಿ ಶ್ರೀನಿವಾಸಪುರ-ಮದನಪಲ್ಲಿ ನಡುವೆ ಹೊಸ ರೈಲು ಮಾರ್ಗಕ್ಕೆ ಬಜೆಟ್ನಲ್ಲಿ ಘೋಷಣೆ ಆಗಿತ್ತು. 2013ರ ಬಜೆಟ್ನಲ್ಲಿ ರೈಲು ಮಾರ್ಗಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತು ಮುಂದಿನ ಕ್ರಮಕ್ಕೆ ರೇಲ್ವೆ ಮಂಡಳಿಗೆ ಕಡತ ಹೋಗಿದ್ದರೂ ಕಾಮಗಾರಿ ಆರಂಭವಾಗಿಲ್ಲ.
ಕೆಜಿಎಫ್ನ ಮಾರಿಕುಪ್ಪಂನಿಂದ ಆಂಧ್ರ ಪ್ರದೇಶದ ಕುಪ್ಪಂ ನಡುವೆ ರೈಲು ಮಾರ್ಗ ಆರಂಭಕ್ಕೂ ಅನುಮತಿ ಸಿಕ್ಕಿದೆ. ಆದರೆ, ಯೋಜನೆಗೆ ಚಾಲನೆ ಸಿಕ್ಕಿಲ್ಲ. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ರೇಲ್ವೆ ಸಚಿವರು ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆಗಳು ಆರಂಭಕ್ಕೆ ಬದ್ಧತೆ ತೋರಬೇಕಾಗಿದೆ.
ಇನ್ನು ಕೋಲಾರ-ಚಿಕ್ಕಬಳ್ಳಾಪುರ ನಡುವೆ ಬ್ರಾಡ್ ಗೇಜ್ ರೈಲು ಮಾರ್ಗ ಆರಂಭವಾಗಿದ್ದರೂ ಕೋಲಾರ ಜನತೆಗೆ ಪ್ರಯೋಜನವಾಗುತ್ತಿಲ್ಲ. ಬೆಂಗಳೂರಿನಿಂದ ಬೆಳಿಗ್ಗೆ 8.45ಕ್ಕೆ ಹೊರಟು ಕೋಲಾರಕ್ಕೆ ಮಧ್ಯಾಹ್ನ 1ಗಂಟೆಗೆ ತಲುಪುತ್ತಿರುವ ರೈಲು ಮತ್ತೆ 1.45ಕ್ಕೆ ಕೋಲಾರದಿಂದ ನಿರ್ಗಮಿಸುತ್ತಿದೆ. ಕೋಲಾರದ ರೈತರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ರೈಲು ವೇಳಾ ಪಟ್ಟಿ ಪರಿಷ್ಕರಣೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಬೇಕಾಗಿದೆ.
ಕೋಲಾರದಿಂದಲೇ ಬೆಳಿಗ್ಗೆ 8ಗಂಟೆಗೆ ರೈಲು ಚಿಕ್ಕಬಳ್ಳಾಪುರಕ್ಕೆ ತೆರಳಿದರೆ ಶ್ರೀನಿವಾಸಪುರ,ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ರೇಲ್ವೆ ಬಜೆಟ್ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಹಳೆಯ ಯೋಜನೆಗಳ ಫಲಶೃತಿಯ ಬಗ್ಗೆ ಆತ್ಮಾವಲೋಕನೆ ನಡೆದರೆ ಜನತೆ ಬಜೆಟ್ ಬಗ್ಗೆ ಹೊಂದಿರುವ ಆಶಯಗಳಿಗೆ ಕಿಮ್ಮತ್ತು ಸಿಕ್ಕಂತಾಗುತ್ತದೆ.
ಕೋಲಾರ-ಚಿಕ್ಕಬಳ್ಳಾಪುರಕ್ಕೆ ರೇಲ್ವೆ ಇಲಾಖೆಯಿಂದ ಸಾಕಷ್ಟು ಯೋಜನೆಗಳು ಸಿಕ್ಕಿವೆ. ಹೊಸ ಯೋಜನೆಗಳಿಗಿಂತ ಹಳೆ ಯೋಜನೆಗಳು ತ್ವರಿತಗತಿಯಲ್ಲಿ ಚಾಲನೆಗೆ ಬರುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯವಶ್ಯಕ. ರೇಲ್ವೆ ಕೋಚ್ ಘಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮತ್ತು ರೇಲ್ವೆ ಮಂಡಳಿಯ ನಡುವೆ ಒಪ್ಪಂದವಾಗಿದೆ, ಈ ಯೋಜನೆಗೆ ಬೇಗನೆ ಚಾಲನೆ ಸಿಕ್ಕರೆ ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ, ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಯೋಜನೆ ಬೇಗನೆ ಜಾರಿಗೆ ಬರುವಂತಾಗಲು ಕೇಂದ್ರ ರೇಲ್ವೆ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳ ಬಳಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಕೆಜಿಎಫ್ನ ಮಾರಿಕುಪ್ಪಂ ಹಾಗೂ ಆಂಧ್ರದ ಕುಪ್ಪಂ ನಡುವೆ ರೈಲು ಮಾರ್ಗ ಅದಷ್ಟು ಬೇಗನೆ ಆದರೆ ಉತ್ತಮ, ಶ್ರೀನಿವಾಸಪು-ಮದನಪಲ್ಲಿ ಮಾರ್ಗಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ, ರೇಲ್ವೆ ಮಂಡಳಿಯವರು ಕೆಲಸ ಬೇಗನೆ ಪ್ರಾರಂಭಿಸಬೇಕು. ರೈತರು ಸಹಕಾರ ನೀಡಿದರೆ ಮುಳಬಾಗಿಲು-ಬಂಗಾರಪೇಟೆ, ಕೋಲಾರ ವೈಟ್ ಫೀಲ್ಡ್ ರೈಲು ಮಾರ್ಗ ಬೇಗನೆ ಆರಂಭಿಸಬಹುದು.
-ಕೆ.ಎಚ್. ಮುನಿಯಪ್ಪ, ಕೇಂದ್ರ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

