ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಗುರುಸ್ಪಂದನ ನಡೆಸಿ
ಕೋಲಾರ: ಪ್ರಾಥಮಿಕ ಶಾಲಾ ಶಿಕ್ಷಕರ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಲ್ಕುಮಾರ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್ ಅವರಲ್ಲಿ ಒತ್ತಾಯಿಸಿದರು.
ಶಿಕ್ಷಕರ ಶೈಕ್ಷಣಿಕ ಉನ್ನತಿ, ವಾರ್ಷಿಕ ವೇತನ ಬಡ್ತಿ, ನಾಮಿನಿ ಮತ್ತಿತರ ಅಂಶಗಳನ್ನು ಸೇವಾ ಪುಸ್ತಕದಲ್ಲಿ ದಾಖಲಿಸುವಲ್ಲಿ ವಿಳಂಬ ಮತ್ತು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ತಮ್ಮ ಸೇವಾ ಪುಸ್ತಕದಲ್ಲಿ ತಮ್ಮ ಕಾರ್ಯ, ಬಡ್ತಿ, ನಾಮಿನಿ, ರಜೆಯಲ್ಲಿ ಬಿಸಿಯೂಟದ ಕೆಲಸ, ಮತದಾರರ ಪಟ್ಟಿ ಪರಿಷ್ಕರಣೆ, ರಜೆ ಅವಧಿಯಲ್ಲಿ ಪಡೆದ ತರಬೇತಿಗೆ ಗಳಿಕೆ ರಜೆ ಮತ್ತಿತರ ಅಂಶಗಳು ದಾಖಲಾಗಿದೆಯೋ, ಇಲ್ಲವೋ ಎಂಬುದು ಶಿಕ್ಷಕರನ್ನು ನಿರಂತರವಾಗಿ ಕಾಡುತ್ತಿರುವ ಸಮಸ್ಯೆಯಾಗಿರುವುದರಿಂದ ಇಲಾಖೆ ಗುರುಸ್ಪಂದನಾ ಕಾರ್ಯಕ್ರಮದ ಮೂಲಕ ಶಿಕ್ಷಕರ ಆತಂಕ ಕೊನೆ ಮಾಡಲು ಕೋರಲಾಯಿತು.
ಪ್ರತಿ ಹೋಬಳಿ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಇಲಾಖೆಯ ಲಿಪಿಕ ಸಿಬ್ಬಂದಿ ಖುದ್ದು ಹಾಜರಿದ್ದು, ಶಿಕ್ಷಕರ ಸೇವಾ ಪುಸ್ತಕಗಳನ್ನು ಶಿಕ್ಷಕರಿಗೆ ತೋರಿಸಿ ಅವರ ಆತಂಕ ನಿವಾರಣೆ ಮಾಡುವಂತೆ ಮನವಿ ಮಾಡಲಾಯಿತು.
ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಸಕಾಲದಲ್ಲಿ ವೇತನ, ಶಿಕ್ಷಕರಿಗೆ ಸಿಗುವಂತಹ ಭವಿಷ್ಯನಿಧಿ, ಕೆಜಿಐಡಿ ಸಾಲಸೌಲಭ್ಯಗಳು ಸಮರ್ಪಕವಾಗಿ ಸಕಾಲದಲ್ಲಿ ಸಿಗುವಂತೆ ಮಾಡಬೇಕೆಂದು ಕೋರಿದರು.
ಶಿಕ್ಷಕರಿಗೆ ಬಾಕಿ ಇರುವ 25 ಮತ್ತು 30 ವರ್ಷದ ವೇತನ ಬಡ್ತಿಯನ್ನು ಈ ಕೂಡಲೇ ಮಾಡುವುದು, ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಮೊತ್ತವನ್ನು ವಿಳಂಬಕ್ಕೆ ಅವಕಾಶ ನೀಡದೇ ಜೇಷ್ಠತೆ ಅನುಸಾರ ಅರ್ಹ ಶಿಕ್ಷಕರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಲಾಯಿತು.
ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್ ಪ್ರತಿ ಶನಿವಾರ ಒಂದೊಂದು ಹೋಬಳಿಯಂತೆ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಶ್ವತ್ಥನಾರಾಯಣ, ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣಸ್ವಾಮಿ, ಖಜಾಂಚಿ ಬಿ. ಸತೀಶ್, ಸಹಕಾರ್ಯದರ್ಶಿ ಸವಿತಾ, ಸಂಘಟನಾ ಕಾರ್ಯದರ್ಶಿ ವರಲಕ್ಷ್ಮಮ್ಮ, ಪ್ರತಿನಿಧಿಗಳಾದ ರೆಡ್ಡಪ್ಪ, ಬಾಬು, ರಾಜೇಶ್, ಭಾರತಿ, ಗಾಯತ್ರಿ, ನೌಕರರ ಸಂಘದ ಪ್ರತಿನಿಧಿಗಳಾದ ಚಂದ್ರಪ್ಪ, ಶ್ರೀರಾಂ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

