ನಗರಸಭೆ ಆಯುಕ್ತರಿಗೆ ಹೈ ತರಾಟೆ
ಬೆಂಗಳೂರು: ಲೋಕಾಯುಕ್ತ ಇಲಾಖೆಯನ್ನು ಕೆಲ ಅಧಿಕಾರಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಲೋಕಾಯುಕ್ತ ಸಂಸ್ಥೆ ಗಂಭೀರವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಕಿವಿಮಾತು ಹೇಳಿದೆ.
ಮೆಸ್ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧ ಕ್ರಮ ತೆಗೆದುಕೊಳ್ಳಿ ಎಂದು ಉಪಲೋಕಾಯುಕ್ತರು ಮಾಡಿದ ದೂರವಾಣಿ ಕರೆಯನ್ನೇ ಆದೇಶ ಎಂದು ಬಿಂಬಿಸಿ ಮಾಲೀಕರಿಗೆ ನೋಟಿಸ್ ನೀಡಿ ತೆರವಿಗೆ ಒತ್ತಡ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ನಗರ ಸಭೆ ಆಯುಕ್ತರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮೆಸ್ ಕುರಿತು ಸಲ್ಲಿಕೆಯಾದ ದೂರಿಗೆ ಸಂಬಂಧಿಸಿದಂತೆ ಕಾನೂನು ಬದ್ಧ ಕ್ರಮ ತೆಗೆದುಕೊಳ್ಳುವಂತೆ ಉಪಲೋಕಾಯುಕ್ತರ ಕರೆಯನ್ನು ಆದೇಶ ಎಂದು ಬಿಂಬಿಸಿ ಆಯುಕ್ತರು ಮೆಸ್ ಮಾಲಿಕರನ್ನು ಬೆದರಿಸಲು ಮುಂದಾಗಿದ್ದಾರೆ. ಇದು ಸಾಂವಿಧಾನಿಕ ಸಂಸ್ಥೆಯ ಹೆಸರಿನ ದುರುಪಯೋಗ. ಇಂತಹ ಬೆಳವಣಿಗೆಯನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾ.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ ತರಾಟೆಗೆ ತೆಗೆದುಕೊಂಡಿತು.
ಆಯುಕ್ತರು ಅನಾವಶ್ಯಕವಾಗಿ ಲೋಕಾಯುಕ್ತ ಸಂಸ್ಥೆಯ ಹೆಸರನ್ನು ಪ್ರಸ್ತಾಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತಮ್ಮ ವೈಯುಕ್ತಿಕ ಉದ್ದೇಶ ಸಾಧನೆಗೆ ಆಯುಕ್ತರು ಲೋಕಾಯುಕ್ತ ಸಂಸ್ಥೆಯನ್ನು ತಮ್ಮ ಅಧಿಕಾರ ಮೀರಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಆಯುಕ್ತರು, ತಾವು ಉಪಲೋಕಾಯುಕ್ತರ ಕರೆ ಬಂದ ನಂತರ ತಲ್ಲಣದಲ್ಲಿ ಅವರ ಸಂದೇಶವನ್ನು ಆದೇಶ ಎಂದು ಬಿಂಬಿಸಿ, ಮೆಸ್ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ತಮ್ಮ ವಕೀಲರು ಮೂಲಕ ಕ್ಷಮೆಯಾಚಿಸಿದರು.
ತಮ್ಮ ನಡೆಯ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಆದೇಶಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.
ಸಾರ್ವಜನಿಕ ಅಹವಾಲು ಸ್ವೀಕರಿಸಬಹುದೇ?: ಲೋಕಾಯುಕ್ತ ಇಲಾಖೆ ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ನಡೆಸುತ್ತಿರುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಪೀಠ, ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದೆ. ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ದ್ವೇಷದ ಪ್ರಕರಣದಲ್ಲಿ ಉಪಲೋಕಾಯುಕ್ತರು ಮಧ್ಯಪ್ರವೇಶಿಸಿ, ನಗರಸಭಾ ಆಯುಕ್ತರಿಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಹೇಳಲು ಕಾನೂನಿನಲ್ಲಿ ಅವಕಾಶವಿದೆಯೇ? ಇಂತಹ ಘಟನೆಗಳಿಂದ ಲೋಕಾಯುಕ್ತ ಸಂಸ್ಥೆಯ ಬೆಲೆ ಕಡಿಮೆಯಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಿವಾದವೇನು?: ಕೋಲಾರದಲ್ಲಿ 2013ರ ಅಕ್ಟೋಬರ್‌ನಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಎಸ್.ವಿ.ಮೆಸ್‌ನಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಅದನ್ನು ಮುಚ್ಚಿಸಬೇಕು ಎಂದು ಕಟ್ಟಡದ ಮಾಲೀಕರು ದೂರು ನೀಡಿದ್ದರು.
ಇದರಲ್ಲಿ ಭಾಗಿಯಾಗಿದ್ದ ಉಪಲೋಕಾಯುಕ್ತ ನ್ಯಾ. ಸುಭಾಷ್.ಬಿ.ಅಡಿ ಅವರು ತಾವು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ನಂತರ ಡಿಸೆಂಬರ್‌ನಲ್ಲಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ ಮಾಲಿಕರು, ಮೆಸ್ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಕೋಲಾರ ನಗರ ಸಭೆಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ದೂರಿನ ಸಂಬಂಧ ಶೀಘ್ರದಲ್ಲೇ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಆದರೆ, ಆಯುಕ್ತರು ಮೆಸ್ ಮಾಲಿಕರಿಗೆ ನೀಡಿದ್ದ ನೋಟಿಸ್‌ನಲ್ಲಿ, ಉಪಲೋಕಾಯುಕ್ತರು ಮೆಸ್ ತೆರವಿಗೆ ಆದೇಶಿಸಿದ್ದಾರೆ ಎಂದು ಉಲ್ಲೇಖಿಸಿದ್ದರು. ಇದನ್ನು ಪ್ರಶ್ನಿಸಿ ಮೆಸ್ ಮಾಲಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ಸಂದರ್ಭದಲ್ಲಿ ಉಪಲೋಕಾಯುಕ್ತರ ದೂರವಾಣಿ ಕರೆ ಕುರಿತು ಪೀಠ, ಆಯುಕ್ತರಿಗೆ ಪ್ರಮಾಣಪತ್ರ ಕೇಳಿತ್ತು. ಆದರೆ, ಪ್ರಮಾಣಪತ್ರ ಸಲ್ಲಿಸಿದ ಆಯುಕ್ತರು, ತಮಗೆ ಉಪಲೋಕಾಯುಕ್ತರಿಂದಲ್ಲ, ಅವರ ಕಚೇರಿಯಿಂದ ಕರೆ ಬಂದಿತ್ತು ಎಂದು ಹೇಳಿಕೆ ನೀಡಿದ್ದರು. ಈ ಗೊಂದಲ ಹೇಳಿಕೆಯ ಪರಿಣಾಮವಾಗಿ ಪೀಠ, ಲೋಕಾಯುಕ್ತ ಕಚೇರಿಯಿಂದ ವಿವರಣೆ ಕೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

