ಹೆಚ್ಚುತ್ತಿರುವ ಸರಗಳವು, ಕರಗದ ಆತಂಕ
ಕನ್ನಡಪ್ರಭ ವಾರ್ತೆ ಕೋಲಾರ ಫೆ.10
ನಗರದಲ್ಲಿ ಫೆಬ್ರವರಿ ತಿಂಗಳ 10ರೊಳಗೆ ಮೂರು ಸರಗಳ್ಳತನ ಪ್ರಕರಣಗಳು ನಡೆದಿದ್ದು ಜನತೆ ಆತಂಕಗೊಂಡಿದ್ದಾರೆ. ಹಾಡು ಹಗಲೇ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಹೆಂಗಸರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರಗಳನ್ನು ದೋಚಿ ಪರಾರಿ ಆಗುತ್ತಿದ್ದಾರೆ.
ಅಂಗಡಿಗೆ ಹೋಗುವಾಗ, ಮನೆ ಮುಂದೆ ನಿಂತಿದ್ದಾಗ, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳರು ಹಿಂಬಾಲಿಸಿ ಬಂದು ಕೃತ್ಯವೆಸಗುತ್ತಿದ್ದು ಕಳೆದ ತಿಂಗಳಲ್ಲೂ ನಗರದಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದರೂ ಕಳ್ಳರನ್ನು ಹಿಡಿಯಲು ಪೊಲೀಸರು ವಿಫಲ ಯತ್ನ ನಡೆಸುತ್ತಿರುವುದರಿಂದ ಜನತೆಯಲ್ಲಿ ಆತಂಕ ಕರಗದಂತಾಗಿದೆ.
ಕಳ್ಳರನ್ನು ಹಿಡಿಯಲು ಪೊಲೀಸರು ಇಲಾಖೆಯ ಬೈಕ್‌ಗಳ ಮೇಲೆ ಗಸ್ತು ತಿರುಗುತ್ತಿದ್ದರೂ ಖದೀಮರು ಪೊಲೀಸರ ಕಣ್ಣಿಗೆ ಬೀಳದೆ ಚೆಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ಫೆ.3ರಂದು ನಗರದ ಬೈರೇಗೌಡ ಬಡಾವಣೆಯಲ್ಲಿ ಉಮಾದೇವಿ ಎಂಬುವರು ಅಂಗಡಿಗೆ ಬರುತ್ತಿದ್ದಾಗ ಕಳ್ಳರು ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ದೋಚಿದ್ದಾರೆ. ಫೆ.7 ರಂದು ಕಮಲಮ್ಮ ಎಂಬುವರು ಸೋಮಶೇಖರ್ ಜೊತೆ ಬೈಕ್‌ನಲ್ಲಿ ಜಾಲಪ್ಪ ಆಸ್ಪತ್ರೆಯಿಂದ ಬರುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.
ಫೆ.10 ರಂದು ಸೋಮವಾರ ಬೆಳಿಗ್ಗೆ ಕೋಲಾರ ನಗರದ ಸಪ್ತಗಿರಿ ಬಡಾವಣೆಯಲ್ಲಿ ಜಯಮ್ಮ ಎಂಬುವರು ತಮ್ಮ ಮನೆ ಮುಂದೆ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಯುವಕನೊಬ್ಬ ಮನೆ ವಿಳಾಸ ಕೇಳುವ ನೆಪದಲ್ಲಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ.
ಸರ ಕಳೆದುಕೊಂಡ ಮಹಿಳೆ ಬೈಕ್ ನಂಬರ್ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳ ನಂ-5777 ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದು ಕೃತ್ಯವೆಸಗಿದ್ದಾನೆ. ಗಲ್ ಪೇಟೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಎರಡು ಪ್ರಕರಣಗಳನ್ನು ಹಾಗೂ ನಗರಠಾಣೆ ಪೊಲೀಸರು ಈ ತಿಂಗಳಲ್ಲಿ ನಡೆದ ಒಂದು ಪ್ರಕರಣವನ್ನು ಪತ್ತೆ ಮಾಡಲು ಹರ ಸಾಹಸ ಮಾಡುತ್ತಿದ್ದಾರೆ.
ಇದಲ್ಲದೇ ಕೋಲಾರ ಜಿಲ್ಲೆಯ ವಿವಿಧ ಕಡೆ ಕಳ್ಳರು ದೇವಾಲಯ, ಮೊಬೈಲ್ ಅಂಗಡಿ, ಮನೆಗಳಲ್ಲೂ ಕಳ್ಳತನ ಮಾಡಿ ಪೊಲೀಸರ ನಿದ್ದೆಗೆಡಿಸಿದ್ದಾರೆ. ಸಪ್ತಗಿರಿ ಬಡಾವಣೆಯಲ್ಲಿ ಸೋಮವಾರ ನಡೆದ ಘಟನೆಗೆ ಬಳಸಿರುವ ಬೈಕ್ ನಂಬರ್ ನಕಲಿ ಎನ್ನಲಾಗಿದೆ. ಇತ್ತೀಚೆಗೆ ನಗರದಲ್ಲಿ ಅನೇಕ ಯುವಕರು ನಂಬರ್ ಪ್ಲೇಟ್ ಇಲ್ಲದೆ ಗಾಡಿ ಓಡಿಸುತ್ತಿದ್ದು ಪೊಲೀಸರು ಇಂತಹ ಗಾಡಿಗಳನ್ನು ಹಿಡಿದು ದಂಡ ವಿಧಿಸುತ್ತಿದ್ದರೂ ಕೃತ್ಯಗಳು ಕಡಿಮೆ ಆಗಿಲ್ಲ.
ಮಹಿಳೆಯರೇ ಎಚ್ಚರ: ಇನ್ನು ಹೆಂಗಸರು ತಮ್ಮ ಕತ್ತಿಗೆ ಧರಿಸುವ ಚಿನ್ನಾಭರಣಗಳು ಎಲ್ಲರ ಕಣ್ಣಿಗೆ ಬೀಳದ ರೀತಿಯಲ್ಲಿ ಜೋಪಾನಪಡಿಸಿಕೊಳ್ಳುವುದು ಸೂಕ್ತವೆಂದು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಮನವಿ ಮಾಡಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಅಪರಿಚಿತರ ಬಗ್ಗೆ ನಿಗಾ ವಹಿಸಬೇಕು, ಅನುಮಾನ ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ತಿಳಿಸಿಬೇಕು, ವಾರ್ಡುಗಳಲ್ಲಿನ ಯುವಕರು ತಂಡ ಮಾಡಿಕೊಂಡು ದುಷ್ಕರ್ಮಿಗಳ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಬೇಕು, ಸಂಘ ಸಂಸ್ಥೆಗಳ ಮುಖಂಡರು ತಮ್ಮ ವಾರ್ಡುಗಳಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕೆ ಕಾರ್ಯಕ್ರಮ ಹಾಕಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ದೇವಸ್ಥಾನ, ಸಿನಿಮಾ ಮಂದಿರ, ಪೇಟೆಗೆ ಹೋಗುವಾಗ ಎಚ್ಚರವಹಿಸಬೇಕು, ಶಾಲಾ-ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು ಬಂಗಾರದ ಒಡವೆ ಬದಲು ರೋಲ್‌ಗೋಲ್ಡ್ ಆಭರಣಗಳನ್ನು ಧರಿಸುವುದು ಒಳ್ಳೆಯದು. ಯಾರಾದರೂ ನಂಬರ್ ಪ್ಲೇಟ್ ಇಲ್ಲದೆ ಬೈಕ್ ಓಡುಸುತ್ತಿದ್ದರೆ ಅಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು, ಅದಷ್ಟು ರಾತ್ರಿ ವೇಳೆ ಮನೆಯಿಂದ ಹೊರ ಬರುವುದನ್ನು ಕಡಿಮೆ ಮಾಡಿ ಇಲ್ಲವೇ ಜೊತೆಗೆ ಮನೆಯಲ್ಲಿನ ಗಂಡಸರನ್ನು ಕರೆತನ್ನಿ, ನಿಮ್ಮ ವಾರ್ಡುಗಳಲ್ಲಿ ಬೀದಿ ದೀಪ ಕೆಟ್ಟಿದ್ದರೆ ವಾರ್ಡಿನ ಸದಸ್ಯರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ದುರಸ್ತಿ ಮಾಡಿಸಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

