ಕೋಲಾರ

ಪಾತಪಾಳ್ಯ ಗ್ರಾಪಂ ಅವ್ಯವಹಾರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Published On :

ಬಾಗೇಪಲ್ಲಿ: ತಾಲೂಕಿನ ಪಾತಪಾಳ್ಯ ಗ್ರಾಪಂನಲ್ಲಿ ನಡೆದಿರುವ ಸುಮಾರು 2 ಕೋಟಿ ಮೌಲ್ಯದ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಬೇಕು ಒತ್ತಾಯಿಸಿ ಗ್ರಾಮಸ್ಥರು ಗ್ರಾಪಂ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮದ ಮುಖಂಡ ಚಂದ್ರಮೋಹನ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಪಾತಪಾಳ್ಯ ಗ್ರಾಪಂ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಕೇಂದ್ರದಲ್ಲಿನ ಬಸ್‌ನಿಲ್ದಾಣ, ನಾಡಕಚೇರಿ, ಅಂಗನವಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿರುವ ಗ್ರಾಮ ಠಾಣಾ ಖಾಲಿ ನಿವೇಶನಗಳನ್ನು ವಸತಿ ಹೀನರಿಗೆ ನೀಡಬೇಕಾದ ಗ್ರಾಪಂ ಅಧಿಕಾರಿಗಳು, ಅರ್ಹರಲ್ಲದ ಭೂಮಾಲೀಕರಿಗೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಕೆಲವು ಗ್ರಾಪಂ ಸದಸ್ಯರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಾನೂನಿಗೆ ವಿರುದ್ಧವಾಗಿ ತಮಗೆ ಬೇಕಾದವರನ್ನು ಕರ ವಸೂಲಿಗಾರರನ್ನು ನೇಮಕ ಮಾಡುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಜನರಿಂದ ವಸೂಲಿ ಮಾಡಿರುವಂತಹ ಹಣವನ್ನು ಕರವಸೂಲಿಗಾರರು ಗ್ರಾಪಂ ಖಾತೆಗೆ ಜಮಾ ಮಾಡುವ ಬದಲಿಗೆ ತಮ್ಮ ಸ್ವಂತಕ್ಕೆ ಹಣ ಬಳಸಿಕೊಳ್ಳುವ ಮೂಲಕ ಜನರಿಗೆ ಮತ್ತು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ದೂರಿದರು.
ಇದೇ ವೇಳೆ ಪಾತಪಾಳ್ಯ ಗ್ರಾಪಂ  ಅಧ್ಯಕ್ಷ ಎಂ.ವೆಂಕಟರಾಮರೆಡ್ಡಿ ಬಣದ ಕೆಲವರು ಪ್ರತಿಭಟನಾಕಾರರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಪರಿಣಾಮ, ಎರಡು ಬಣದವರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವಾರಣ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪನ್ನು ಚದುರಿಸಲು ಲಘುಲಾಠಿ ಪ್ರಹಾರ ಮಾಡಿದರು.
ಗ್ರಾಮದ ಮುಖಂಡರಾದ ಬಾಷ, ನರಸಿಂಹಮೂರ್ತಿ, ವೆಂಕಟೇಶ್, ಸುಭಾನ್, ಮಂಜುಳಮ್ಮ, ಯಶೋಧ, ನರಸಮ್ಮ, ಸೀತಮ್ಮ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.