ಕೋಲಾರ

ಮೀಟರ್ ಇಲ್ಲದೆ ಆಟೋ ಪ್ರಯಾಣ ದರ ಏರಿಕೆ ಇಲ್ಲ

Published On :

ಕೋಲಾರ: ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಸಂಚರಿಸುವ ಆಟೋ ರಿಕ್ಷಾಗಳಲ್ಲಿ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು, ಯಾವ ಆಟೋಗಳಲ್ಲಿ ಮೀಟರ್ ಇರುತ್ತದೋ ಅಂತಹ ಆಟೋಗಳಲ್ಲಿ ಪ್ರಯಾಣಿಸುವವರಿಂದ ಪರಿಷ್ಕೃತ ಕನಿಷ್ಠ ಪ್ರಯಾಣ ದರ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚಿಸಿದರು.
ಮಂಗಳವಾರ ನಡೆದ ಆರ್.ಟಿ.ಎ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಯಾಣಿಕರನ್ನು ಕೆಲ ಆಟೋ ಚಾಲಕರು ವಂಚಿಸುತ್ತಿದ್ದಾರೆ. ಕಡಿಮೆ ಅಂತರದ ಜಾಗಕ್ಕೂ 25 ರು. ವಸೂಲಿ ಮಾಡುತ್ತಿದ್ದಾರೆ. ಮೀಟರ್ ಅಳವಡಿಸಿದರೆ ಆಟೋ ಚಾಲಕರಿಗೆ ಮತ್ತು ಪ್ರಯಾಣಿಕರಿಬ್ಬರಿಗೂ ಅನುಕೂಲವಾಗುತ್ತದೆ ಎಂದರು.
ಶೇರು ಆಟೋಗಳನ್ನು ಚಾಲನೆಗೆ ತರಬೇಕು ಇಲ್ಲವೇ ಆಟೋಗಳಿಗೆ ಮೀಟರ್ ಅಳವಡಿಸಿದರೆ ಪ್ರಯಾಣಿಕರ ಶೋಷಣೆ ತಪ್ಪುತ್ತದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಒತ್ತಾಯಿಸಿದರು.
ಶೇರು ಆಟೋಗಳಿಗೆ ಅನುಮತಿ ನೀಡಿದರೆ ಇತರರಿಗೆ ಅನ್ಯಾಯವಾಗುತ್ತದೆ. ಅನೇಕರು ಬಡವರಿದ್ದಾರೆ. ಮೀಟರ್ ಅಳವಡಿಸಿ ಪರಿಷ್ಕೃತ ದರ ಪಡೆಯಲಿ, ಒಂದು ತಿಂಗಳು ಮೀಟರ್ ಅಳವಡಿಸಿಕೊಳ್ಳುವುದಕ್ಕೆ ಕಾಲಾವಕಾಶ ನೀಡುವಂತೆ ಆರ್.ಟಿ.ಓ ಚಂದ್ರಶೇಖರ್ ಅವರಿಗೆ ಸೂಚಿಸಿದರು.
ಆಟೋ ಚಾಲಕರು ಮೀಟರ್ ಅಳವಡಿಸಿಕೊಳ್ಳುವುದಕ್ಕೆ 3000 ರಿಂದ 3500 ರು.ಖರ್ಚು ಮಾಡಬೇಕಾಗುತ್ತದೆ, ಬಡವರಿಗೆ ಇದು ಕಷ್ಟ. ಕನಿಷ್ಠ ಎರಡು ತಿಂಗಳು ಅವಕಾಶ ನೀಡುವಂತೆ ಆಟೋ ಯೂನಿಯನ್ ಮುಖಂಡ ಸುರೇಶ್‌ಕುಮಾರ್ ಮನವಿ ಮಾಡಿದರಾದರೂ ಇದಕ್ಕೆ ಒಪ್ಪದ ಜಿಲ್ಲಾಧಿಕಾರಿಗಳು ಒಂದು ತಿಂಗಳೊಳಗೆ ಮೀಟರ್ ಅಳವಡಿಸಿಕೊಳ್ಳಬೇಕು, ಅಲ್ಲಿಯವರೆಗೆ ಪ್ರಯಾಣಿಕರಿಂದ ಕನಿಷ್ಠ 20 ರು.ಗಳನ್ನೇ ಪಡೆಯಲಿ, ಯಾರೂ ಬೇಗನೆ ಮೀಟರ್ ಅವಳಡಿಸಿಕೊಳ್ಳುತ್ತಾರೋ ಅಂತಹ ಚಾಲಕರು ಪರಿಷ್ಕೃತ ದರ ಪಡೆಯಬಹುದೆಂದು ತಿಳಿಸಿದರು.
ನಗರ ನಿವಾಸಿ ನರಸರಾಜು ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಅಂತರ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಚೆನ್ನೈಗೆ ಕೋಲಾರ (ವೋಲ್ವೋ ಹೊರತುಪಡಿಸಿ) ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಕಡ್ಡಾಯವಾಗಿ ಕೋಲಾರ ಬಸಸ್ನಿಲ್ದಾಣಕ್ಕೆ ಬಂದು ಹೋಗಬೇಕೆಂದು ಆದೇಶವಿದ್ದರೂ ಬಹುತೇಕ ಬಸ್‌ಗಳು ಆದೇಶ ಪಾಲಿಸದೆ ಬೈಪಾಸ್ ಮೂಲಕ ಹೋಗುತ್ತಿರುವುದರಿಂದ  ನಗರದ ನಾಗರೀಕರಿಗೆ ಅನಾನುಕೂಲವಾಗಿದೆ ಎಂದು ದೂರಿದರು.
ಇದಕ್ಕೆ ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್, ನಾಗರಿಕ ಹಿತ ರಕ್ಷಣೆ ವೇದಿಕೆಯ ನಾಗರಾಜ ಶಣೈ ಇತರರು ದನಿಗೂಡಿಸಿದಾಗ  ಇಂದಿನಿಂದಲೇ ಎಲ್ಲ ಬಸ್‌ಗಳ ಚಾಲಕರು, ನಿರ್ವಾಹಕರಿಗೆ ನೋಟಿಸ್ ನೀಡಿ ಬಸ್ಸುಗಳು ನಿಲ್ದಾಣಕ್ಕೆ ಬರುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಆರ್.ಟಿ.ಓ ಚಂದ್ರಶೇಖರ್ ಅವರಿಗೆ ಆದೇಶಿಸಿದರು.
ಈ ಕೂಡಲೇ ಅಂತರ ರಾಜ್ಯ ಬಸ್‌ಗಳು ಕೋಲಾರದ ಕೆಎಸ್ಸಾರ್ಟಿಸಿ  ಬಸ್‌ನಿಲ್ದಾಣಕ್ಕೆ ಕಡ್ಡಾಯವಾಗಿ ಬರಬೇಕು. ಯಾವ ಬಸ್‌ಗಳು ಬರುವುದಿಲ್ಲವೋ ಅಂತಹ ಮಾರ್ಗಗಳ ಪರವಾಗಿ ರದ್ದುಪಡಿಸಿ  ಖಾಸಗಿಯವರಿಗೆ ಪರವಾನಗಿ ನೀಡೋಣ ಎಂದು ಆರ್‌ಟಿಒಗೆ  ಸೂಚಿಸಿದ ಜಿಲ್ಲಾಧಿಕಾರಿಗಳು, ತಕ್ಷಣದಿಂದ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ವ್ಯವಸ್ಥೆ ಮಾಡುವಂತೆಯೂ ತಾಕೀತು ಮಾಡಿದರು.  ಶಾಲಾ ಕಾಲೇಜುಗಳಿಗೆ ಬಂದು ಹೋಗುವ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಶೆಟಲ್ ಬಸ್‌ಗಳ ಸಂಖ್ಯೆ ಕಡಿಮೆ, ಅಂತಾರಾಜ್ಯ ಬಸ್, ವೇಗದೂತ ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲವೆಂದು ತ್ಯಾಗರಾಜ್ ಮತ್ತು ನಾಗರಾಜ ಶೆಣೈ ದೂರಿದರು.
ಇದಕ್ಕೆ ಉತ್ತರಿಸಿದ ಕೋಲಾರ ಡಿಪೋ ಸಹಾಯಕ ಸಂಚಾರ ನಿಯಂತ್ರಾಣಾಧಿಕಾರಿ  ಚಂದ್ರಶೇಖರ್ ಕೋಲಾರಕ್ಕೆ  ಸೇರಿದ ಎಲ್ಲ ಬಸ್‌ಗಳ ಬೋರ್ಡ್‌ಗಳಲ್ಲಿ ಸಮಯದವಿವರಗಳನ್ನು ಸಮರೋಪಾದಿಯಲ್ಲಿ ಒಂದು ವಾರದೊಳಗೆ ಬರೆಸುತ್ತೇವೆ. ಇತರೆ ಜಿಲ್ಲೆಗಳ ಬಸ್‌ಗಳ ಬಗ್ಗೆ ನಾವು ಕ್ರಮ ಕೈಗೊಳ್ಳಲಾಗದು. ಅಂತಾರಾಜ್ಯ ಬಸ್ ಹೊರತುಪಡಿಸಿ ವೇಗದೂರ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಎಸ್ಪಿ ಡಾ. ರಾಮನಿವಾಸ್ ಸಪಟ್, ಆರ್‌ಟಿಒ ಅಧಿಕಾರಿ ಚಂದ್ರಶೇಖ,ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.