ಅಂಚೆ ಬಟವಾಡೆ ಬೇಜವಾಬ್ದಾರಿ: ಸಾರ್ವಜನಿಕರಿಂದ ದೂರು
ಗುಡಿಬಂಡೆ: ಸ್ಥಳೀಯ ಅಂಚೆ ಕಚೇರಿಯಲ್ಲಿ ಪತ್ರ ಬಟವಾಡೆ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ. ಪರಸ್ಥಳಗಳಿಂದ ಪಟ್ಟಣದ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರಿಗೆ ಅಂಚೆ ಮೂಲಕ ಬರುವ ದೂರವಾಣಿ ಬಿಲ್ ಜಮಾ ಇಲಾಖೆಗೆ ಸಂಬಂಧಿಸಿದ ಪತ್ರಗಳು ಬ್ಯಾಂಕ್ ವ್ಯವಹಾರದ ಪತ್ರಗಳು ಮತ್ತು ವಿವಿಧ ವಿಳಾಸಗಳಿಗೆ ಸಾಮಾನ್ಯ ಅಂಚೆಯಲ್ಲಿ ಬಂದಿರುವಂತಹ ಪತ್ರಗಳು ಸೇರಿದಂತೆ ಬಹಳಷ್ಟು ಅಂಚೆ ಲಕೋಟೆಗಳು ಸಕಾಲಕ್ಕೆ ಸಾರ್ವಜನಿಕರಿಗೆ ತಲುಪುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿನೀಡುವಂತೆ ಪಟ್ಟಣದ ಅಂಚೆ ಕಚೇರಿಗೆ ಸಮೀಪದ ಇಸ್ತ್ರಿ ಅಂಗಡಿ ಒಂದರಲ್ಲಿ ಪತ್ತೆಯಾದ ಅಂಚೆ ಮುದ್ರೆ ಒತ್ತಿದ ಆದರೆ ಬಟವಾಡೆಯಾಗದ ಕಾಗದ ಪತ್ರಗಳ ಕಟ್ಟು ಕಂಡುಬಂದಿರುವುದು ಸಾಕ್ಷಿಯಾಗಿದೆ.
ನಿವೃತ್ತ ಶಿಕ್ಷಕ ಎನ್.ವಿ.ಹನುಮಂತು, ತಾವು ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯ ಸಮೀಪದ ಇಸ್ತ್ರಿ ಅಂಗಡಿಗೆ ತೆರಳುತ್ತಿದ್ದಾಗ ಕಾಗದ ಪತ್ರಗಳ ಕಟ್ಟೊಂದನ್ನು ಗಮನಿಸಿ ಅಂಗಡಿಯವನನ್ನು ಈ ಬಗ್ಗೆ ವಿಚಾರಿಸಿದ್ದಾರೆ.
ಆದರೆ ಆತ ತಾನು ಆಚೆ ತೆರಳಿದ್ದ ಸಂದರ್ಭದಲ್ಲಿ ಯಾರೋ ಇದನ್ನು ಇಲ್ಲಿ ಇಟ್ಟಿರಬಹುದು, ನಾನು ಸಹ ಈಗಲೆ ಇದನ್ನು ಕಂಡಿದ್ದಾಗಿ ಹೇಳಿದ್ದಾನೆ. ನಂತರ ಅಂಚೆ ಕಚೇರಿಗೆ ಅದನ್ನು ಒಯ್ದ ಹನುಮಂತು, ಪರಿಶೀಲಿಸಿದಾಗ ಜ.13 ರಂದು ಅಂಚೆ ಮುದ್ರೆ ಒತ್ತಿ ಪಟ್ಟಣದಲ್ಲಿ ಬಟವಾಡೆಗಾಗಿ ಸಿದ್ದ ಪಡಿಸಿ ಇಟ್ಟಿದ್ದ ಪತ್ರಗಳೆಂದು ತಿಳಿದು ಬಂದಿದೆ. ಬಳಿಕ ಇಲಾಖೆ ಮೇಲಾಧಿಕಾರಿಗೆ ವಿಷಯ ತಿಳಿಸಲಾಗಿ ಶೀಘ್ರವೇ ಈ ಕುರಿತು ಪರಿಶೀಲಿಸಲಾಗುವುದೆಂದಿದ್ದಾರೆ.
ಅಂಚೆ ಪೇದೆ ಹೇಳಿಕೆ: ಅಂಚೆ ವಿತರಣೆಯಾಗದಿರುವ ಬಗ್ಗೆ ಅಂಚೆ ಪೇದೆ ನರಸಿಂಹಪ್ಪನನ್ನು ವಿಚಾರಿಸಲಾಗಿ, ಜನವರಿ 13 ರಂದು ನನಗೆ ಈಗ ಸಿಕ್ಕಿರುವ ಕಾಗದ ಪತ್ರಗಳನ್ನು ಬಟವಾಡೆ ಮಾಡಲು ನೀಡಿರಲಿಲ್ಲ. ಇವು ಹೇಗೆ ಅಂಗಡಿಯಲ್ಲಿ ಸಿಕ್ಕವೋ ಗೊತ್ತಿಲ್ಲ. ನನ್ನ ಮೇಲೆ ತಪ್ಪು ಹೊರಿಸುವ ಸಲುವಾಗಿ ಯಾರೋ ಪಿತೂರಿ ಮಾಡಿದ್ದಾರೆ ಎಂದಿದ್ದಾನೆ.
ಹಣ ಬಟವಾಡೆಗೆ ಲಂಚ: ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಮುಂತಾದವನ್ನು ಫಲಾನುಭವಿಗಳಿಗೆ ವಿತರಿಸುವಾಗ ಅಂಚೆ ಪೇದೆಗಳು ಅವರಿಂದ ಹಣ ಕೇಳುತ್ತಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಆದರೆ ತಮಗೆ ಸಿಗುವ ಸೌಲಭ್ಯಗಳಿಗೆ ಎಲ್ಲಿ ಧಕ್ಕೆ ಆಗುತ್ತದೆಯೋ ಎಂಬ ಭೀತಿಯಿಂದ ಅಧಿಕಾರಿಗಳಿಗೆ ಲಿಖಿತ ದೂರನ್ನು ನೀಡಲು ಮುಂದೆ ಬರುತ್ತಿಲ್ಲವೆಂದು ಜನ ನುಡಿಯುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕಾದ ಅವಶ್ಯಕತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

