ಕೋಲಾರ

ಸಮ್ಮೇಳನಗಳು ಶೋಷಣೆ ತಡೆಯುವ ಅಸ್ತ್ರವಾಗಲಿ...

Published On :

-ಪಾ.ಶ್ರೀ. ಅನಂತರಾಮ್
ಕೋಲಾರ: ಸಾಹಿತ್ಯ ಸಮ್ಮೇಳನಗಳು ಜಾತ್ರೆ ರೀತಿಯಲ್ಲಿ ನಡೆದರೆ ಸಾಲದು, ಭೂಮಿ ತಾಯಿಯ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆ, ಶೋಷಣೆ ತಡೆಗಟ್ಟುವ ಅಸ್ತ್ರವಾಗಬೇಕು.
ಈ ರೀತಿ ಹೇಳಿದ್ದು 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಪರಿಸರ ಪ್ರೇಮಿ, ವಿಚಾರ ಸಾಹಿತಿ ಆಗಿರುವ ಡಾ.ವಿ. ಚಂದ್ರಶೇಖರ ನಂಗಲಿಯವರು.
ಫೆ.12 ಮತ್ತು 13 ರಂದು ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮಾನವನಲ್ಲಿ ಇರುವ ಸ್ವಾರ್ಥ, ದುರಾಸೆ ಹೋಗಲಾಡಿಸಿ, ನಮ್ಮ ಪೂರ್ವಿಕರ ಆಶಯದಂತೆ ನಾಡು ಕಟ್ಟಲು ಜನತೆಯನ್ನು ಸಂಘಟಿತರಾಗದಿದ್ದರೆ ಸಾಹಿತ್ಯ ಸಮ್ಮೇಳನಗಳಿಗೆ ಅರ್ಥವಿಲ್ಲ.
ಪ್ರಕೃತಿಯ ವಿನಾಶ ತಪ್ಪಿಸಿ ಎಲ್ಲ ವರ್ಗದ ಜನತೆ ಸಮಷ್ಠಿಯಿಂದ ಬದುಕುವಂತಾದರೆ ಮಾತ್ರ ನೆಲ-ಜಲ, ನಾಡು-ನುಡಿ ಉಳಿಯುತ್ತದೆ ಎಂದು ಪ್ರತಿಪಾದಿಸಿದರು.
ಕೋಲಾರ ಜಿಲ್ಲೆ ಒಂದು ಕಾಲದಲ್ಲಿ ನಂದನ ವನವಾಗಿತ್ತು. ಈಗ ಮನುಷ್ಯನ ತಪ್ಪುಗಳಿಂದಾಗಿ ಮರುಭೂಮಿ ಆಗುತ್ತದೆ.
 ನಮ್ಮಲ್ಲಿನ ಚಿತ್ರಾವತಿ, ಕೌಂಡಿನ್ಯ, ಪಾಲರ್, ಪೆನ್ನಾರ್ ನದಿಗಳಲ್ಲಿ ದಟ್ಟವಾದ ಮೂರು ರೀತಿಯ ಮರಳು ಪದರಗಳಿದ್ದ ಕಾರಣ ಕೋಲಾರ ನಂದನ ವನವಾಗಿತ್ತು, ಈಗ ಮರಳು ಪದರಗಳನ್ನು ನಾಶ ಮಾಡಿರುವುದರಿಂದ ಜಲ ಮೂಲಗಳು ಬತ್ತಿ ಹೋಗಿರುವುದರಿಂದ ಮರಳುಗಾಡಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಲಾರ ನಂದನವನವಾಗಿತ್ತು: ಮಧ್ಯಪ್ರದೇಶದಲ್ಲಿ ರಾಜೇಂದ್ರಸಿಂಗ್ ಎಂಬ ಪರಿಸರ ಪ್ರೇಮಿ, ಹೋರಾಟಗಾರನ ಪ್ರಯತ್ನದಿಂದಾಗಿ ಮರಳು ಭೂಮಿ ನಂದನವಾಗುತ್ತಿದೆ. ಕೋಲಾರಕ್ಕೂ ರಾಜೇಂದ್ರಸಿಂಗ್ ರೀತಿಯ ಚಳವಳಿಗಾರ ಬೇಕಾಗಿದ್ದಾನೆಂದು ಆಶಿಸಿದರು. ಅಂತರ್ಜಲ ಸಮಸ್ಯೆ ಎದುರಾಗಲು ನಾವೇ ಕಾರಣ, ನಿಸರ್ಗ ನಿರ್ಮಿತ ನೀರಿನ ಸೆಲೆಗಳನ್ನು ಹಾಳು ಮಾಡಿದ್ದೇವೆ, ಪ್ರಾಕೃತಿಕವಾಗಿ ಭೂಮಿಯಲ್ಲಿ ನಿರ್ಮಾಣಗೊಂಡಿದ್ದ ಮರಳಿನ ಅಣೆಕಟ್ಟುಗಳನ್ನು ಅಗೆದು ಬಗೆದು ಹಣಕ್ಕಾಗಿ ಮಾರಿಕೊಂಡಿದ್ದೇವೆ.  
 ಇದರಿಂದಾಗಿರುವ ಪರಿಣಾಮಗಳ ಬಗ್ಗೆ ಭಾಷಣ ಬಿಗಿದರೆ ಪ್ರಯೋಜನವಿಲ್ಲ, ಪ್ರತಿಯೊಬ್ಬರು ಸಂಘಟಿತರಾಗಿ ಭೂಮಿತಾಯಿಯ ರಕ್ಷಣೆ ಮಾಡಲು ಪ್ರಾಮಾಣಿಕ ಸಂಕಲ್ಪವಾಗಬೇಕಾಗಿದ್ದು ಇದು ಸಾಹಿತ್ಯ ಸಮ್ಮೇಳನಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಲ್ಲಿ ಮಾತ್ರ ಕೋಲಾರವನ್ನು ಮತ್ತೆ ನಂದನ ವನವನ್ನಾಗಿ ಮಾಡಲು ಸಾಧ್ಯ.
ಭೂಮಿತತ್ವ ಉಳಿಯಲಿ: ಕೋಲಾರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಬೇಕೆಂಬುದು ಸತ್ಯ. ಆದರೆ, ಇದಕ್ಕೆ ಬೇಕಾಗಿರುವ ಇಚ್ಛಾಶಕ್ತಿ ಕಾಣುತ್ತಿಲ್ಲ. ಕೆರೆ,ಕಲ್ಯಾಣಿಗಳನ್ನು ಉಳಿಸದೆ, ಕೇವಲ ಬೇಡಿಕೆಗಳನ್ನು ಮಂಡಿಸಿದರೆ ಪ್ರಯೋಜನವಿಲ್ಲ, ಶಾಶ್ವತ ನೀರಾವರಿ ಎಂಬುದು ಕನ್ನಡಿಯ ಗಂಟಾಗಿದೆ, ಇದಕ್ಕೆ ಬದಲು ಜನತೆ ಇಬ್ಬನಿ ಮತ್ತು ಮಳೆ ನೀರನ್ನು ಸಂರಕ್ಷಣೆ ಮಾಡಲು ಗಮನ ನೀಡಿದರೆ ಭೂಮಿಯಲ್ಲಿನ ನೈಸರ್ಗಿಕ ಅಣೆಕಟ್ಟುಗಳು ಭರ್ತಿಯಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದರಲ್ಲಿ ಅನುಮಾನವಿಲ್ಲ.
ನಮ್ಮ ರೈತರು ಕಷ್ಟ ಜೀವಿಗಳು, ಅಂತರ್ಜಲ ಸಮಸ್ಯೆಯಿದ್ದರೂ ಬದುಕು ಸಾಗಿಸುತ್ತಿದ್ದಾರೆ, ನಮ್ಮನ್ನು ಆಳುವ ಪ್ರಭುಗಳು ಮಧ್ಯಪ್ರದೇಶದ ಪರಿಸರ ಹೋರಾಟಗಾರ ರಾಜೇಂದ್ರ ಸಿಂಗ್ ನಂತೇ ಬದಲಾಗಬೇಕು, ಆಗ ರೈತರ ಸಮಸ್ಯೆ ನಿವಾರಣೆ ಆಗುತ್ತದೆ.
ಇಸ್ರೇಲಲ್ಮಾದರಿಯಲ್ಲಿ ಹನಿ ನೀರಾವರಿ ಯೋಜನೆ ಕಡ್ಡಾಯಗೊಳಿಸಬೇಕು, ಅರಣ್ಯ ನಾಶ ಮಾಡಿದವರಲ್ಲಿ ಕೋಲಾರದವರೇ ಮೊದಲಿಗರಾಗಿದ್ದೇವೆ, ಮತ್ತೆ ಅರಣ್ಯವನ್ನು ಸಂರಕ್ಷಣೆ ಮಾಡಬೇಕಾಗಿದೆ, ಜಿಲ್ಲೆಯಲ್ಲಿ ಅತಿ ಹೆಚ್ಚು ದಲಿತರು ಇದ್ದಾರೆ, ಇವರೇ ಈ ಜಿಲ್ಲೆಯ ನಿಜವಾದ ಭೂ ಮಾಲೀಕರು ಎಂಬುದರಲ್ಲಿ ಸಂಶಯವಿಲ್ಲ. ಆದರೆ, ದಲಿತ ಎಂದರೆ ಜಾತಿ ಅನ್ನೋ ಅಭಿಪ್ರಾಯ ಹೋಗಬೇಕು, ಭೂಮಿಯ ತತ್ವ ಅರಿತ ಜ್ಞಾನಿಗಳಾಗಬೇಕು, ದೇಶಕ್ಕೆ ಅನ್ನ ನೀಡುವ ಸಮುದಾಯವಾಗಬೇಕೆಂಬ ಅಂಬೇಡ್ಕರ್ ಆಶಯಗಳಿಗೆ ಕಿಮ್ಮತ್ತು ಸಿಗುವಂತಾಗಬೇಕಾದರೆ ದಲಿತರು ಭೂಮಿ ಉಳಿಸುವ ಹೋರಾಟಕ್ಕೆ ನಿಜವಾದ ಸಾರಥಿಗಳಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.