ಕೋಲಾರ

ಶಿಷ್ಟಾಚಾರ ಪಾಲಿಸಲು ಜಿಪಂ ಅಧ್ಯಕ್ಷರ ತಾಕೀತು

Published On :

ಕೋಲಾರ: ಶಾಸಕರಿಗೆ ಕೊಡಬೇಕಾದ ಗೌರವ ನೀಡುವುದಕ್ಕೆ ನಮ್ಮ ಅಕ್ಷೇಪಣೆ ಇಲ್ಲ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಪಂಗೆ ಬರುವ ಅನುದಾನ, ಕಾರ್ಯಕ್ರಮಗಳ ಅನುಷ್ಠಾನ ವಿಚಾರದಲ್ಲಿ ಜಿಪಂ ಸದಸ್ಯರ ಅಭಿಪ್ರಾಯ ಮತ್ತು ಸಲಹೆಗಳಿಗೆ ಮಾನ್ಯತೆ ನೀಡಬೇಕೆಂದು ಜಿಪಂ ಅಧ್ಯಕ್ಷೆ ತೂಪಲ್ಲಿ ನಾರಾಯಣಸ್ವಾಮಿ ಅದಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿ ಶಾಸಕರ ಮಾತನ್ನು ಕೇಳಬೇಕು ಅಥವಾ ಜಿಪಂ ಸದಸ್ಯರ ಮಾತನ್ನೇ ಕೇಳಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆಯೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ಗ್ರಾಮೀಣ ಭಾಗದ ಕುಡಿಯವ ನೀರಿನ ವೆಚ್ಚವನ್ನು ಜಿಪಂ ಸಂಪೂರ್ಣವಾಗಿ ಭರಿಸುತ್ತಿದ್ದರೂ ಆಯಾ ಭಾಗದ ಜಿಪಂ ಸದಸ್ಯರು ಕಡೆಗಣಿಸಿ ಶಾಸಕರಿಗೆ ಮಣೆ ಹಾಕುತ್ತಿರುವ ಇಇ ಮತ್ತು ಎಇಇಗಳು ತಮ್ಮ ನಿಲುವುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ಸದಸ್ಯ ಅಮರ್ನಾಥ್ ಮಾತನಾಡಿ, ಕುಡಿಯುವ ನೀರಿಗೆ ಸಂಪೂರ್ಣವಾಗಿ ಜಿಪಂ ವತಿಯಿಂದಲೇ ಅನುದಾನ ಬಿಡುಗಡೆಯಾಗಲಿದೆ. ಕ್ರಿಯಾಯೋಜನೆ ತಯಾರು ಮಾಡಲು ಮತ್ತು ಅನುಮೋದನೆ ನೀಡಲು ಜಿಪಂ ಸದಸ್ಯರು ಬೇಕು. ಆದರೆ ಕಾಮಗಾರಿಗಳ ಚಾಲನೆ ಮತ್ತು ಉದ್ಘಾಟನೆ, ಪೂಜೆ, ಪುನಸ್ಕಾರಗಳಿಗೆ ಸದಸ್ಯರು ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ಜಿಪಂಗೆ ಸೇರಿದರೂ ಹೆಸರು ಮಾತ್ರ ಶಾಸಕರಿಗೆ ಹೋಗತ್ತಿದೆ, ಈ ಬಗ್ಗೆ ಸ್ಥಳೀಯ ಜನತೆ ನಿಮ್ಮ ಕೊಡುಗೆ ಏನೆಂದು ಪ್ರಶ್ನೆ ಮಾಡುತ್ತಿದ್ದು, ಜನರಿಗೆ ಉತ್ತರ ಕೊಡಲು ನಮ್ಮಿಂದ ಆಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಕುಡಿಯುವ ನೀರಿನ ವಿಚಾರಕ್ಕೂ ಜಿಪಂ ಸದಸ್ಯರಿಗೂ ಯಾವುದೇ ಸಂಬಂಧವಿಲ್ಲವೆಂಬ ನೀತಿ ಇದ್ದರೆ ತಿಳಿಸಿ ನಾವು ನಿಮ್ಮ ತಂಟೆಗೆ ಬರುವುದಿಲ್ಲವೆಂದು ಜಿಪಂ ಎಂಜನಿಯರಿಂಗ ವಿಭಾಗದ ಇಇ ದೇವರಾಜ್ ಅವರಿಗೆ ತಿಳಿಸಿದರು. ನಾನು ಜಿಪಂ ಸದಸ್ಯರನ್ನು ಕಡೆಗಣಿಸುತ್ತಿಲ್ಲ, ಶಿಷ್ಟಾಚಾರ ಪಾಲಿಸುವಂತೆ ಎಲ್ಲ ಎಇಗಳಿಗೆ ಸೂಚಿಸಿದ್ದೇನೆ, ಇನ್ನು ಮುಂದೆ ಶಿಷ್ಟಾಚಾರ ಪಾಲನೆ ಕಡ್ಡಾಯಗೊಳಿಸುವುದಾಗಿ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಆಯಾ ಭಾಗದ ಜಿಪಂ ಸದಸ್ಯರಿಗೆ ಕೊಳವೆ ಬಾವಿ ಕೊರೆತ, ಪಂಪ್ ಮೋಟಾರ್ ಅಳವಡಿಕೆ ಸೇರಿದಂತೆ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದ ವಿಷಯಗಳು ಸದಸ್ಯರ ಗಮನಕ್ಕೆ ಬರಬೇಕು ಇಲ್ಲದಿದ್ದರೆ ಇದಕ್ಕೆ ನೇರವಾಗಿ ಇಇ ಮತ್ತು ಎಇಇಗಳಿಗೆ ಹೊಣೆಯಾಗಲಿದ್ದಾರೆ ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದರು.
ಜಿಪಂ ಸದಸ್ಯ ಕಿಟ್ಟಪ್ಪ ಮಾತನಾಡಿ, ಮುಳಬಾಗಲು ಶಾಸಕರು ಕುಡಿಯುವ ನೀರು ಜಿಪಂ ವ್ಯಾಪ್ತಿಗೆ ಬರುವುದಿಲ್ಲ, ನೀವು ಹೊರಗೆ ಹೋಗಿ ಎಇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಆಯಾ ಜಿಪಂ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳ ಮೇಲೆ ಸದಸ್ಯರ ಹೆಸರನ್ನು ಹಾಕುವಂತೆ ತಿಳಿಸಿದರೂ ಈವರೆಗೂ ಇಇಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂದು ಸದಸ್ಯ ಅಮರ್ನಾಥ್ ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.