ಕೋಲಾರ

ಸಕ್ಕಿಂಗ್ ಯಂತ್ರ ಖರೀದಿಗೆ ಅನುಮೋದನೆಯಿಲ್ಲ

Published On :

ಕೋಲಾರ: ಈ ಹಿಂದಿನ ಜಿಪಂ ಸಿಇಒ ಸಾಮಾನ್ಯ ಸಭೆ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಅನುಮೋದನೆ ಇಲ್ಲದೆ ಸಕ್ಕಿಂಗ್ ಮಿಷನ್ಗಳನ್ನು ಖರೀದಿ ಮಾಡುವ ಮೂಲಕ ಅವ್ಯವಹಾರವೆಸಗಿದ್ದಾರೆಂದು ಜಿಪಂ ಮಾಜಿ ಅಧ್ಯಕ್ಷೆ, ಸದಸ್ಯೆ ಚೌಡೇಶ್ವರಿ ಆರೋಪಿಸಿದರು.
ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು 13ನೇ ಹಣಕಾಸು ಯೋಜನಡಿ ಖರೀದಿಸಿರುವ ಸಕ್ಕಿಂಗ್ ಮಿಷನ್ಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಸಿಇಒ ಸರ್ವಾಧಿಕಾರಿಯಾಗಿ ವರ್ತಿಸಿ ಸರ್ಕಾರಕ್ಕೆ ವಂಚಿಸಿರುವುದರಿಂದ ಪ್ರಕರಣವನ್ನು ಸಿಒಡಿ ಅಥವಾ ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.
13ನೇ ಹಣಕಾಸು ಯೋಜನಡಿ ಸುಮಾರು 2 ಕೋಟಿ ವೆಚ್ಚದಲ್ಲಿ ತಾಲೂಕಿಗೊಂದು ಸಕ್ಕಿಂಗ್ ಮಿಷನ್ ಖರೀದಿ ಮಾಡಿರುವ ಬಗ್ಗೆ ಮಾತನಾಡಿದ ಅವರು, ಸಭೆಗೆ ತರದೆ ಖರೀದಿಗೆ ಅನುಮೋದನೆ ನೀಡಿರುವುದರ ಮೂಲಕ ಈ ಹಿಂದಿನ ಸಿಇಒ ಝುಲ್ಫಿಖಾರ್ ಉಲ್ಲಾ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಝುಲ್ಪಿಖಾರ್ ಉಲ್ಲಾ ಇಂದಿಗೂ ಅಧಿಕಾರ ಕೋಲಾರ ಜಿಪಂನಲ್ಲಿ ತಮ್ಮ ಹಸ್ತಕ್ಷೇಪದ ಮೂಲಕ ಸಾಕಷ್ಟು ಗೊಂದಲಗಳನ್ನು ಉಂಟು ಮಾಡುತ್ತಿದ್ದಾರೆ. ಹೊಸ ಸಿಇಒರವರು ಅಧಿಕಾರ ವಹಿಸಿಕೊಂಡಿದ್ದರೂ ಅನೇಕ ಅಧಿಕಾರಿಗಳು ಹಿಂದಿನ ಸಿಇಒ ಹೇಳಿದಂತೆ ಕೆಲಸ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ನೂತನ ಸಿಇಒ ವಿನೋತ್ ಪ್ರಿಯಾ ಜ.21 ರಂದು ಅಧಿಕಾರ ವಹಿಸಿಕೊಂಡರು. ಆದರೆ ಗ್ರಾಪಂ ಕಾರ್ಯದರ್ಶಿಗಳ ಬಡ್ತಿಯ ಆದೇಶದ ಪ್ರತಿಗೆ ಜ.24 ರಂದು ಜುಲ್ಪಿಕಾರ ಉಲ್ಲಾ ಸಹಿ ಮಾಡಿರುವುದನ್ನು ಇಲ್ಲಿನ ಅಧಿಕಾರಿಗಳು ಪೋಸ್ಟ್ ಮಾಡಿದ್ದಾರೆ ಎಂದು ದೂರಿದರು.
ಕಡತಗಳು ಮಾಯಕ್ಕೆ ಆಕ್ರೋಶ: ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅವರು ಸದಸ್ಯೆ ಚೌಡೇಶ್ವರಿಯವರ ಗಂಭೀರ ಆರೋಪಗಳನ್ನು ಪರಿಗಣಿಸಿ ಸಕ್ಕಿಂಗ್ ಮಿಷನ್ ಖರೀದಿಯ ಕಡತವನ್ನು ಕೂಡಲೇ ಸಭೆಗೆ ಹಾಜರುಪಡಿಸುವಂತೆ ಜಿಪಂ ಉಪಕಾರ್ಯದರ್ಶಿ ಬದನೂರ್ ಅವರಿಗೆ ಸೂಚಿಸಿದರು.
ಆದರೆ, ಕಡತ ಇಲ್ಲ, ನಾಪತ್ತೆಯಾಗಿದೆ ಎಂದು ಬದನೂರು ತಿಳಿಸಿದಾಗ ಇದರಿಂದ ಆಕ್ರೋಶಗೊಂಡ ಜಿಪಂ ಸದಸ್ಯ ಡಿ.ವಿ. ಹರೀಶ್ ಕುಪಿತರಾಗಿ ಜಿಪಂನಲ್ಲಿ ಕಡತ ನಾಪತ್ತೆಯಾಗಿರುವುದು ನಾಚಿಕೇಡಿನ ವಿಚಾರ. ಇಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಕಂಡು ಜನ ನಿಮ್ಮ ಪಾಲು ಎಷ್ಟು ಎಂದು ನಮ್ಮನ್ನು ಪ್ರಶ್ನಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಕಾರ್ಯದರ್ಶಿ, ಪಿಡಿಒಗಳ ಬಡ್ತಿಯಲ್ಲಿ ಇಲ್ಲಿನ ಅಧಿಕಾರಿಗಳು ಕಾನೂನನ್ನು ಉಲ್ಲಂಘನೆ ಮಾಡಿರುವುದರಿಂದ ಸಂಪೂರ್ಣ ತನಿಖೆ ನಡೆಸಬೇಕು ಒತ್ತಾಯಿಸಿದ ಅವರು, ತನಿಖೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ದೂರವಿಡುವಂತೆ ಆಗ್ರಹಿಸಿದರು.  ಉಪಕಾರ್ಯದರ್ಶಿ ಬದನೂರು ಮಾತನಾಡಿ, ಸಕ್ಕಿಂಗ್ ಮಿಷನ್ ಖದೀಗೆ ಸಂಬಂಧಿಸಿದ ಕಡತಗಳು ನಮ್ಮ ಬಳಿ ಇಲ್ಲ, ಈ ಹಿಂದಿನ ಸಿಇಒರನ್ನು ಕೇಳಲಾಗಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆಂದರು.
ಸದಸ್ಯ ರಾಮಸ್ವಾಮಿ ಮಾತನಾಡಿ, ಸಿಇಒ ಜುಲ್ಪಿಕಾರ್ ಉಲ್ಲಾ ವರ್ಗಾವಣೆಗೊಂಡು 20 ದಿನ ಕಳೆದರೂ ಇಂದಿಗೂ ಕಡತ ವಿಲೇವಾರಿ ಮಾಡಿಲ್ಲ ಎಂದರೆ, ಹೊಸ ಸಿಇಒರವರಿಗೆ ಚಾರ್ಜ ನೀಡಿದ್ದೀರಾ ಎಂದು ಕುಹಕವಾಡಿದರು. ಸಕ್ಕಿಂಗ್ ಖರೀದಿಯ ಕಡತ ನಾಪತ್ತೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಮಾಡಬೇಕೆಂದು ಜಿಪಂ ನೂತನ ಸಿಇಒ ಅವರನ್ನು ಸದಸ್ಯ ಕಿಟ್ಟಪ್ಪ ಒತ್ತಾಯಿಸಿದರು. ಸದಸ್ಯೆ ಚೌಡೇಶ್ವರಿ ಮಾತನಾಡಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಕಡತ ನಾಪತ್ತೆ ಮತ್ತು ಸಕ್ಕಿಂಗ್ ಮಿಷನ್ ಅವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಇಲ್ಲದಿದರೆ ತಾವು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮಾನನಷ್ಟ ಮೊಕದ್ದಮೆ: ಈ ಹಿಂದಿನ ಸಭೆಯಲ್ಲಿ ತಾವು ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿರುವುದಾಗಿ ಜಿಪಂ ಉಪಕಾರ್ಯದರ್ಶಿ ಬದನೂರು ಸರ್ಕಾರಕ್ಕೆ ದೂರು ನೀಡಿದ್ದಾರೆ. ಇರುವುದರಿಂದ ನನ್ನ ವರ್ಚ್ಚಸ್ಸಿಗೆ ಧಕ್ಕೆಯಾಗಿರುವುದರಿಂದ ಮಾನನಷ್ಟ ಮೊಕದ್ದಮೆ ಹೂಡಲು ಚಿಂತಿಸುತ್ತಿರುವುದಾಗಿ ಚೌಡೇಶ್ವರಿ ತಿಳಿಸಿದರು.
ಅಧಿನಿಯಮದ ಪ್ರಕಾರ ಕೋಲಾರ ಜಿಪಂ ನಡೆಯುತ್ತಿಲ್ಲ, ಜಿಪಂ ಅಧ್ಯಕ್ಷರು ಹೆಡ್ ಆಫ್ ದಿ ಜಿಪಂ ಸಿಇಒ ಸೇರಿದಂತೆ ಇಲ್ಲಿನ ಎಲ್ಲಾ ಅಧಿಕಾರಿಗಳು ಅಧ್ಯಕ್ಷರ ವ್ಯಾಪ್ತಿಗೆ ಒಳಪಡುತ್ತಾರೆ. ಆದರೆ, ನಿಮಯ ಪಾಲನೆ ಆಗುತ್ತಿಲ್ಲವೆಂದು ಜಿಪಂ ನಿಯಮಾವಳಿಯ ಪುಸಕ್ತವನ್ನು ತೋರಿಸಿದರು.
ಸದಸ್ಯ ಎಂ.ಎಸ್. ಆನಂದ್ ಅಕ್ಷೇಪ ವ್ಯಕ್ತಪಡಿಸಿ, ಅಧ್ಯಕ್ಷರಾದವರು ಈ ರೀತಿ ಹೇಳಬಾರದು ನಿಮ್ಮ ಕೈಯಲ್ಲಿ ಅಧಿಕಾರ ನಡೆಸುವುದಕ್ಕೆ ಆಗದ್ದಿದರೆ ರಾಜಿನಾಮೆ ಕೊಡಿ ಎಂದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಆಲವೇಲಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೀಮೋಲ್ ಮೋಹನ್, ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ಆನಂದ್, ಜಿಪಂ ಸಿಇಒ ವಿನೋತ್ ಪ್ರಿಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.