ನೀರಿನ ಸಮಸ್ಯೆ: ಸಚಿವರೊಂದಿಗೆ ಇಂದು ಚರ್ಚೆ
ಕೋಲಾರ: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಎಲ್ಲ ಗ್ರಾಮಗಳಿಗೆ ಡಿಫ್ಲೋರೈಡ್ ಘಟಕ ಸ್ಥಾಪಿಸಲು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಲು ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಸೋಮವಾರ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಲಿದೆ.
ಬೆಂಗಳೂರಿನ ವಿಕಾಸಸೌಧದ 308 ನೇ ಕೊಠಡಿಯಲ್ಲಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕರೆದಿದ್ದ ಸಭೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಗಳೊಂದಿಗೆ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದ ನಂತರ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಪರಿಹಾರಕ್ಕೆ ಒತ್ತಾಯಿಸಿಲು ನಿರ್ಧರಿಸಲಾಯಿತು.
ಶಾಸಕ ಕೆ.ಆರ್. ರಮೇಶ್‌ಕುಮಾರ್ ಮಾತನಾಡಿ, ಜಿಲ್ಲೆಯ ಜನರಿಗೆ ನೀರಿಲ್ಲ, ವಸತಿ ಇಲ್ಲ, ಅನ್ನ ಇಲ್ಲ ಇಂತಹ ಕಷ್ಟ ಪರಿಸ್ಥಿತಿಯಲ್ಲಿ ಜನರು ವಾಸಿಸುತ್ತಿದ್ದಾರೆ. ನಾವು ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಮಾತನಾಡಿಸುವುದಕ್ಕೂ ಆಗುತ್ತಿಲ್ಲ. ಜಿಲ್ಲೆಯ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್ ಲವಣಾಂಶ ಹೆಚ್ಚಾಗಿದೆ. ಇಂತಹ ನೀರನ್ನು ಕುಡಿದು ಎಷ್ಟು ದಿನ ಬದುಕಲು ಸಾಧ್ಯ ಎಂದು ಸಚಿವರ ಗಮನ ಸೆಳೆದರು.
ಕುಡಿಯುವ ನೀರಿಗೆ ಜಿಲ್ಲೆಗೆ 5 ಕೋಟಿ ನೀಡುತ್ತಿದ್ದು ಈ ಹಣ ನಮಗೆ ಬೇಡವೇ ಬೇಡ. ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಹೆಚ್ಚು ಅನುದಾನ ಬಿಡುಗಡೆ ಮಾಡಲು ಚರ್ಚಿಸೋಣವೆಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ನದಿ ನಾಲೆಗಳು ಇಲ್ಲ. ಅಧಿಕಾರಿಗಳು ಬೇಸಿಗೆ ಕಾಲದಲ್ಲಿ ನೀರಿಗೆ ಸಮಸ್ಯೆ ಬರುತ್ತದೆ ಎಂಬುದು ತಿಳಿದು ಯೋಜನೆ ರೂಪಿಸಿಲ್ಲ, ಸಭೆಗಳಿಗೆ ಹಾಜರಾಗಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ ಎಂದ ಅವರು, ಅಧಿಕಾರಿಗಳಿಗೆ ಶುದ್ಧ ಕುಡಿಯುವ ನೀರಿದೆ, ವಸತಿ ಇದೆ, ಹಣವಿದೆ. ಅವರಿಗೆ ಗ್ರಾಮೀಣ ಜನರ ನೋವು ಗೊತ್ತಾಗುತ್ತಿಲ್ಲವೆಂದು ದೂರಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಬೆಂಗಳೂರಿನ ನೀರನ್ನು ಎಲೆಮಲ್ಲಪ್ಪನ ಕೆರೆಗೆ ಹರಿಸುವ ಮೂಲಕ ಗ್ರಾವಿಟೇಷನ್ ಮೇಲೆ ಪಾಲರ್ ಬೇಸಿನ್ ಕೆರೆಗಳನ್ನು ತುಂಬಿಸುವುದು ಸೂಕ್ತ. ಈ ಸಂಬಂಧ ಡಿಪಿಆರ್ ಸಿದ್ಧವಾಗಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಶಾಸಕ ಕೆ.ಆರ್. ರಮೇಶ್‌ಕುಮಾರ್ ಮಾತನಾಡಿ ಎಲೆಮಲ್ಲಪ್ಪನಕೆರೆ ಅನುಮೋದನೆಗೊಂಡರೆ ಕೇವಲ 9 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಇದಕ್ಕೆ 300 ಕೋಟಿ ಸಾಕು. ಇದರಿಂದ ಎರಡು ಮೂರು ತಾಲೂಕುಗಳಿಗೆ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.
ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ ವರ್ತೂರು ಕೆರೆಯಿಂದ ಹರಿಯುವ ನೀರನ್ನು ಪೈಪ್‌ಲೈನ್ ಮೂಲಕ ತರಲು ಡಿ.ಪಿ.ಆರ್ ಆಗಿದೆ. ಸಂಪುಟ ಸಭೆಗೆ ಬಂದಿತ್ತು. ಅದನ್ನು ಅನುಮೋದನೆ ಮಾಡಬೇಕು.ಪಟ್ಟಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. 2.50 ಕೋಟಿ ಬಿಡುಗಡೆ ಮಾಡಬೇಕು ಎಂದು ತಿಳಿಸಿದರಲ್ಲದೆ, ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ, ಹಣ ಮಂಜೂರು ಮಾಡಲು ಸಹಾ ತಡ ಮಾಡುತ್ತಿದ್ದಾರೆ ಎಂದು ಆರೋಪಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಣ್ಣ ನೀರಾವರಿ ಸಚಿವರಿಗೆ ಪತ್ರ ಬರೆದು ಪುನ ಸಂಪುಟದ ಸಭೆ ಮುಂದೆ ಕಡತ ತರಲು ಪತ್ರ ಬರೆಯುವುದಾಗಿ ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ಡಾ. ಎಸ್.ಆರ್. ಲೀಲಾ ಮಾತನಾಡಿ, ಜಿಲ್ಲೆಗೆ ದೊಡ್ಡ ಯೋಜನೆಗಳು ರೈತರ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ.ತ್ವರಿತವಾಗಿ ಪೂರ್ಣಗೊಳಿಸುವಂತಹ ಯೋಜನೆಗಳು ಬೇಕಾಗಿದೆ. ಬೆಂಗಳೂರಿನಿಂದ ಹರಿಯುವ ನೀರನ್ನು ಎಲೆಮಲ್ಲಪ್ಪನ ಕೆರೆಗೆ ಹರಿಸಿ ಆ ಮೂಲಕ ರೈತರಿಗೆ ನೀರು ಕೊಡುವ ಸಣ್ಣ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿಯವರು ಶ್ರೀನಿವಾಸಪುರಕ್ಕೆ ಫೆ. 23 ರಂದು ಭೇಟಿ ನೀಡಲಿದ್ದು ಹಲವು ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಕಾಮಗಾರಿಗಳು ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡಿದ್ದರೆ ಮಾತ್ರ ಶಂಕು ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ಸೂಚ್ಯವಾಗಿ ಎಚ್ಚರಿಕೆ ನೀಡಿದರು.
ಜಿ.ಪಂ. ಅಧ್ಯಕ್ಷ ಆರ್. ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ಮುಳಬಾಗಲು ಶಾಸಕ ಕೊತ್ತನೂರು ಮಂಜುನಾಥ್, ಕೆ.ಜಿ.ಎಫ್ ಶಾಸಕಿ ರಾಮಕ್ಕ, ಜಿ.ಪಂ. ಸಿಇಒ ವಿನೋತ್‌ಪ್ರಿಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಕೆ.ನಾಗರಾಜ, ಜಿ.ಪಂ.ಸದಸ್ಯ ಎಸ್.ಎಂ. ಆನಂದ್, ಸಿಮೋಲ್ ಮೋಹನ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

