ಜಾತಿ ಪದ್ಧತಿ ಇರುವವರೆಗೆ ಮೀಸಲಾತಿ ಅಗತ್ಯ
ಕೋಲಾರ: ಎಲ್ಲಿಯವರೆಗೂ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆ ಜೀವಂತವಾಗಿರುತ್ತದೋ ಅಲ್ಲಿಯವರೆಗೆ ಹಾಲಿ ಮೀಸಲಾತಿಯನ್ನು ಸರ್ಕಾರಗಳು ಮುಂದುವರೆಸಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ತಿಳಿಸಿದರು.
ಇಲ್ಲಿನ ಟಿ. ಚನ್ನಯ್ಯ ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆಯ ಕೋಲಾರ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೀಸಲಾತಿ ಧರ್ಮಕ್ಕಾಗಿ ನೀಡುವಂತಹದ್ದಲ್ಲ. ಮೀಸಲಾತಿ ಬೇಡ ಎನ್ನುವವರು ಮೊದಲು ನಾಗರಿಕರ ಕಲ್ಯಾಣ ಮತ್ತು ಸಮಾಜದಲ್ಲಿನ ದೊಡ್ಡ ಪಿಡುಗಾಗಿರುವ ಅಸಮಾನತೆಯನ್ನು ಹೋಗಲಾಡಿಸಿ ನಂತರ ಮೀಸಲಾತಿ ಬೇಡವೆಂದು ಪ್ರತಿಪಾದಿಸಬೇಕೆಂದರು.
ಸಮಾಜವನ್ನು ರಾತ್ರೋರಾತ್ರಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನರ ಮನಸ್ಥಿತಿಗಳು ಬದಲಾವಣೆ ಆಗಬೇಕು. ರಾಜಕೀಯ ಮತ್ತು ಇತರೆ ಸೌಲಭ್ಯ ಪಡೆಯಲು ಬೇರೆಯವರು ದಲಿತರ ಮೀಸಲಾತಿಯನ್ನು ಕಬಳಿಸುತ್ತಿದ್ದಾರೆ, ಸರ್ಕಾರಗಳು ಈ ಕಡೆ ವಿಶೇಷ ಗಮನ ಹರಿಸಬೇಕೆಂದರು.
ಜಾಗತೀಕರಣ ಯುಗದಲ್ಲಿ ಇಂದು ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿ ಮಾಡುವ ವಿಧೇಯಕವನ್ನು ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಜಾಗತೀಕರಣ, ಉದಾರೀಕರಣದಿಂದ ಆಗುತ್ತಿರುವ ಬದಲಾವಣೆಗಳ ಮತ್ತುಸಮಸ್ಯೆಗಳ ಬಗ್ಗೆ ಬಹು ದೊಡ್ಡ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ಆಗಬೇಕು. ಸಂಸದರು ಸಂಸತ್ನಲ್ಲಿ ಧ್ವನಿ ಎತ್ತಬೇಕು. ಆದರೆ ಈ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ ಎಂದ ಅವರು, ದಲಿತರು ಈ ಬಗ್ಗೆ ಜನಾಂದೋಲನ, ಸಂಘಟಿತ ಹೋರಾಟ ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಆಡಳಿತ ವಿಕೇಂದ್ರಿಕರಣ ಸೇರಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಅವರ ದೊರಕಿಸಿಕೊಟ್ಟ ಮೀಸಲಾತಿಯಿಂದ ದಲಿತರಿಗೆ ಎಲ್ಲರಂಗಗಳಲ್ಲೂ ಮೀಸಲಾತಿ ಇರುವುದರಿಂದ ಗ್ರಾಪಂ ಹಿಡಿದು ರಾಜ್ಯಸಭೆಯವರಿಗೆ ಉತ್ತಮ ವ್ಯಕ್ತಿಗಳನ್ನು ಆರಿಸಿ ಕಳುಹಿಸಿ ಎಂದರು.
ದಲಿತರ ಕಾಲೋನಿಗಳಲ್ಲಿ ಇಂದಿಗೂ ಮೂಲ ಸೌಕರ್ಯಗಳು ಇಲ್ಲದೆ ತೊಂದರೆ ಅನುಭವಿಸುತ್ತಿದೆ. ಇದರ ಬಗ್ಗೆ ಬೆಳಕು ಚೆಲ್ಲಿ ನ್ಯಾಯ ದೊರಕಿಸಬೇಕಾಗಿರುವುದು ಸಂಘಟನೆಗಳ ಜವಾಬ್ದಾರಿ. ಸಂಘಟನೆಗಳನ್ನು ಹುಟ್ಟು ಹಾಕಿದರೆ ಸಾಲದು, ಸಮಾಜದಲ್ಲಿ ಬದಲಾವಣೆ ತರಲು ಮುಖಂಡರು ಚಿಂತನೆ ಮಾಡಬೇಕೆಂದರು.
ಮಾಜಿ ಶಾಸಕ ರಾಜೇಂದ್ರನ್, ಅಂಬೇಡ್ಕರ್ ಯುವ ಸೇನೆ ರಾಜ್ಯಾಧ್ಯಕ್ಷ ಎಚ್. ಕೋದಂಡರಾಮ, ಚಿಂತಕ ಡಾ. ಮುನಿವೆಂಕಟಪ್ಪ ಮಾತನಾಡಿದರು. ವಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ನಮ್ಮನೆ ನಾರಾಯಣಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

