ಕೋಲಾರ

ಮಾತೃಭಾಷೆಯಲ್ಲಿಯೇ ಶಿಕ್ಷಣಕ್ಕೆ ಆಗ್ರಹ

Published On :

ಕೋಲಾರ: ವಿಶ್ವ ಮಾತೃಭಾಷಾ ದಿನಾಚರಣೆ ಅಂಗವಾಗಿ ಎಸ್ಎಫ್ಐ ಜಿಲ್ಲಾ ಸಮಿತಿಯ ನಿಯೋಗ ಜಿಲ್ಲಾಡಳಿತಕ್ಕೆ ಮಾತೃಭಾಷೆಯ ಮೂಲಕವೇ ಶಿಕ್ಷಣ ನೀಡಲು ಒತ್ತಾಯಿಸಿದೆ.
ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಹೆಡ್ ಮುನ್ಷಿ ಕೃಷ್ಣೇಗೌಡರಿಗೆ ಮನವಿ ಸಲ್ಲಿಸಿ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ನೀಡಿದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವೆಂದು ತಿಳಿಸಿದ್ದಾರೆ.
ಶಿಕ್ಷಣದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಮಾತೃಭಾಷಾ ಶಿಕ್ಷಣ ಅಗತ್ಯವಾಗಿ ಬೇಕು. ಅದರಲ್ಲೂ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಸಿಕ್ಕರೆ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಲು ನೆರವಾಗುತ್ತದೆ. ಮಾತೃ ಭಾಷೆಯಲ್ಲಿ ಸಮಗ್ರವಾದ ತರಬೇತಿಯನ್ನು ಪಡೆದವರು ವಿದ್ವಾಂಸರು, ಬೌದ್ಧಿಕವಾಗಿ ಅತ್ಯಂತ ಸಮರ್ಥರಾಗಿರುವರೆಂದು ವಿಪುಲವಾದ ಅನುಭವಗಳಿಂದ ತಿಳಿಯಬಹುದಾಗಿದೆ ಎಂದರು.
ಭಾಷಾಮಾದ್ಯಮ ಕುರಿತು 1094 ರಿಂದಲೂ ಸರ್ಮೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದೇ ಉಳಿದಿದೆ. ಅದಕ್ಕಾಗಿ ನ್ಯಾ. ಆರ್.ಎಂ. ಲೋಧಾ ಅವರ ನೇತೃತ್ವದಲ್ಲಿ 5 ಜನರ ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಅದು ಇಲ್ಲಿಯವರೆಗೆ ಇತ್ಯರ್ಥವಾಗದೇ ಖಾಸಗೀ ಶೀಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನಡೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದರು.
ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಸಮಾನತೆ ಬರುತ್ತದೆ. ಸಮಾನ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳಲ್ಲಿ ಐಕ್ಯತೆ ಹಾಗೂ ಬೌದ್ಧಿಕತೆಯನ್ನು ಹೆಚ್ಚಿಸಬೇಕಾದರೇ ಮಾತೃ ಭಾಷೆಯಲ್ಲಿ ಶಿಕ್ಷಣ ಅಗತ್ಯವಾಗಿ ನೀಡಬೇಕಿದೆ. ಶಿಕ್ಷಣ-ಉದ್ಯೋಗದಲ್ಲಿ ಪ್ರಾತಿನಿಧ್ಯ-ವಿಜ್ಞಾನ-ತಂತ್ರಜ್ಞಾನ-ವೈಧ್ಯಕೀಯ ಶಿಕ್ಷಣ ಮಾತೃ ಭಾಷೆಯಲ್ಲಿ ಸಿಗುವಂತೆ ನೋಡಿಕೊಳ್ಳಬೇಕಿದೆ. ಇಂಗ್ಲಿಷ್ನ್ನು ಒಂದನೇ ತರಗತಿಯಿಂದಲೆ ಭಾಷಾ ವಿಷಯವಾಗಿ ಕಲಿಸಬೇಕು, ಮಾಧ್ಯಮವಾಗಿ ಅಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ಮಾಧ್ಯಮಕ್ಕಾಗಿ ಅಗತ್ಯ ಕಾನೂನುಗಳನ್ನು ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ನಿಯೋಗ ಆಗ್ರಹಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಸಿ. ಅಮರೇಶ್, ತಾಲೂಕು ಅಧ್ಯಕ್ಷ ಮುಸ್ತಾಫ್, ಅಂಬಿಕಾ, ರಾಜೇಶ್ವರಿ, ಶಿವಕುಮಾರ್, ಸುಹಾಸ್, ನವೀನ್, ಪ್ರಕಾಶ್, ಅಭಿಲಾಷ್ ಗೌಡ, ಬಾಲರಾಜು.ಎನ್, ಸುರೇಶ್, ಆರ್. ನವೀನ್ ಕುಮಾರ್ ಇದ್ದರು.





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.