ಕೋಲಾರ

ಬರಡು ಭೂಮಿಗೆ ಬರಿಗೈಯಲ್ಲಿ ಬರಬೇಡಿ

Published On :

ಕೋಲಾರ: ಕೆಲವು ವರ್ಷಗಳ ಹಿಂದೆ ದಟ್ಟವಾದ ಕಾಡು, ಸಕಲ ಜೀವರಾಶಿ, ಕೌಂಡಿನ್ಯ, ಪಾಲಾರ್, ಪೆನ್ನಾರ್, ಚಿತ್ರಾವತಿ ನದಿಗಳ ಕಲರವ, ಸಿಲ್ಕ್, ಮಿಲ್ಕ್, ಗೋಲ್ಡ್‌ನಿಂದ ಕಂಗೊಳಿಸುತ್ತಿದ್ದ ಕೋಲಾರ ಜಿಲ್ಲೆ ಈಗ ಬರಡು ಭೂಮಿಯಾಗುತ್ತಿದೆ.
ಇದಕ್ಕೆ ನೂರೆಂಟು ಕಾರಣಗಳು. ಪ್ರಜೆಗಳ ಉದಾಸೀನ, ಪ್ರಭುಗಳ ನಿರ್ಲಕ್ಷ್ಯ, ಪ್ರಭುತ್ವದ ವ್ಯವಸ್ಥೆಯಲ್ಲಿನ ವೈಫಲ್ಯಗಳಿಂದಾಗಿ ಕೋಲಾರ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಸರ್ಕಾರಗಳು ಕೋಟಿಗಟ್ಟಲೆ ಹಣ ಅಭಿವೃದ್ಧಿಗಾಗಿ ನೀಡಿದ್ದರೂ ಅದು ಜನ ಹಿತಕ್ಕಾಗಿ ಖರ್ಚು ಆಗುವ ಬದಲು ಪಟ್ಟಭದ್ರ ಹಿತಾಸಕ್ತಿಗಳ ಖಜಾನೆ ತುಂಬಿರುವುದರಿಂದ ಜಿಲ್ಲೆಯ ಜನರು ಶುದ್ಧವಾದ ನೀರು, ಪೌಷ್ಠಿಕ ಆಹಾರ, ಆರೋಗ್ಯಕರ ಪರಿಸರವಿಲ್ಲದೆ ರೋಗ ರುಜಿನಗಳಿಂದ ನರಳುವಂತಾಗಿದೆ.
ಜಿಲ್ಲೆಯ ಒಟ್ಟು ಮಳೆ ದಿನಗಳು ಕೇವಲ 50, ವಾಡಿಕೆ ಮಳೆ ವಾರ್ಷಿಕ 724 ಮಿಮಿ. 2001ರಲ್ಲಿ 1037, 2004ಲ್ಲಿ 906, 2005ರಲ್ಲಿ 1360, 2008ರಲ್ಲಿ 896, 2010ರಲ್ಲಿ 931 ಮಿಮಿ ದಾಖಲೆ ಮಳೆಯಾಗಿರುವುದು ಹೊರತುಪಡಿಸಿದರೆ ಅನೇಕ ಸಂದರ್ಭಗಳಲ್ಲಿ ವಾಡಿಕೆ ಮಳೆ ಅತ್ಯಂತ ಕಡಿಮೆ ದಾಖಲೆ ಆಗಿರುವುದುಂಟು.
2012 ಮತ್ತು13ರಲ್ಲೂ ವಾಡಿಕೆ ಮಳೆಗಿಂತ ಹೆಚ್ಚಾಗಿಯೇ ಬಿದ್ದಿದ್ದರು, ಮಳೆ ನೀರು ಸಂಗ್ರಹಣೆಗೆ ಯಾವುದೇ ಪ್ರಯತ್ನಗಳು ಆಗದಿರುವುದರಿಂದ ನೀರು ವ್ಯರ್ಥವಾಗಿ ಚರಂಡಿಗಳಲ್ಲಿ ಹರಿದಿದೆ. ಅಂತರ್ಜಲ ವೃದ್ಧಿಸದ ಜಾಗಗಳಲ್ಲಿ ಬತ್ತಿ ಹೋಗಿದೆ.
ಈ ಕಾರಣದಿಂದ ಅನೇಕರು ಜಲ ಖನಿಜಗಳಾದ ಕೆರೆ-ರಾಜಕಾಲುವೆ, ಕಲ್ಯಾಣಿಗಳನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಮುಂದಿನ ಪೀಳಿಗೆಗೆ ಹಿಡಿ ಮಣ್ಣು ಸಿಗದಂತೆ ಮಾಡುತ್ತಿದ್ದಾರೆ. ಮರಳು ಮಾಫಿಯಾ ಮೂಲಕ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಕೋಲಾರದಲ್ಲಿ ಕೋಲಾಹಲ ಉಂಟು ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಭಾನುವಾರ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಮಳೆ ನೀರು ಸಂರಕ್ಷಣೆಗಾಗಿ ಏನಾದರೂ ವಿಶೇಷ ಕಾರ್ಯಕ್ರಮ ಪ್ರಕಟಿಸುವ ಮೂಲಕ ಜಿಲ್ಲೆಯನ್ನು ಉಳಿಸಬೇಕೆಂಬುದು ಜನತೆಯ ಒತ್ತಾಸೆಯಾಗಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಶೇ.211ರಷ್ಟು, ಕೋಲಾರ ಶೇ.165, ಮಾಲೂರು ಶೇ.184, ಶ್ರೀನಿವಾಸಪುರ ಶೇ.166 ಹಾಗೂ ಮುಳಬಾಗಿಲು ತಾಲೂಕಿನಲ್ಲಿ ಶೇ.201ರಷ್ಟು ಅಂತರ್ಜಲ ಬಳಕೆಯಾಗುತ್ತಿದೆ. 250ರಿಂದ 800 ಅಡಿಗಳಿಗೆ ಸಿಗುತ್ತಿದ್ದ ಅಂತರ್ಜಲ ಈಗ 1200 ರಿಂದ 1400 ಅಡಿ ಕೊಳವೆ ಬಾವಿ ಕೊರೆದರು ನೀರು ಸಿಗದೆ ವಿಫಲವಾಗುತ್ತಿದೆ.
ಜಿಲ್ಲೆಯಲ್ಲಿ ಈಗ ಲಭ್ಯವಿರುವ ಅಂತರ್ಜಲ ಮನುಷ್ಯರು ಹಾಗೂ ಪ್ರಾಣಿಗಳು ಸೇವಿಸಲು ಯೋಗ್ಯವಿಲ್ಲದಂತಾಗಿದೆ. ಫ್ಲೋರೈಡ್ ಪ್ರಮಾಣ 1 ಮಿಗ್ರಾಮ್‌ಗಿಂತ ಹೆಚ್ಚಾಗಿದೆ, ಇದೇ ರೀತಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಷಿಯಂ, ನೈಟ್ರೇಡ್, ಸಲ್ಫೇಟ್ ಅಂತರ್ಜಲದಲ್ಲಿ ಹೆಚ್ಚಾಗುತ್ತಿರುವುದರಿಂದ ಈ ನೀರನ್ನು ಸೇವಿಸುತ್ತಿರುವ ಜನರಲ್ಲಿ ಅನೇಕರು ಮೂತ್ರ ಜನಕಾಂಗ, ಕರುಳು, ದಂತ ಪ್ಲೋರೋಸಿಸ್, ಕ್ಯಾನ್ಸರ್, ಅಂಗವಿಕಲತೆಯಿಂದ ಬಳಲುತ್ತಿದ್ದಾರೆ, ವರ್ಷಕ್ಕೆ ಅನೇಕರ ಅಮೂಲ್ಯವಾದ ಜೀವ ಬಲಿಯಾಗುತ್ತಿದೆ.
ಅಖಂಡ ಕೋಲಾರ ಜಿಲ್ಲಾ ವ್ಯಾಪ್ತಿಗೆ ಬರುವ ಕೌಂಡಿನ್ಯ, ಪಾಲಾರ್, ಪೆನ್ನಾರ್, ಚಿತ್ರಾವತಿ ನದಿಗಳಲ್ಲಿ ಮರಳು ಸಾಗಾಣೆ ಸಂಪೂರ್ಣವಾಗಿ ನಿಲ್ಲಿಸಿ ಮಳೆ ನೀರು ನೀರು ಸಂಗ್ರಹಣೆಗೆ ಮುಖ್ಯಮಂತ್ರಿಗಳು ವಿಶೇಷ ಗಮನ ನೀಡಬೇಕು, ಕಳೆದ ಹತ್ತಾರು ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ನೂರರು ಹೋರಾಟಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಪರಮಶಿವಯ್ಯ ವರದಿ ಜಾರಿ ಜಿಜ್ಞಾಸೆ ಮೂಡಿಸಿದೆ, ಎತ್ತಿನ ಹೊಳೆ ಯೋಜನೆ ಗ್ರಹಣದಿಂದ ಮುಕ್ತಿ ಪಡೆಯದಂತಾಗಿದೆ. ರಾಜಕಾರಣಿಗಳು, ಸ್ವಯಂ ಘೋಷಿತ ನೀರಾವರಿ ಹೋರಾಟಗಾರರು ಇದೇ ಯೋಜನೆಯಿಂದ ನೀರು ಕೊಡಿ ಎಂದು ಹೇಳುತ್ತಾ ಕಾಲ ತಳ್ಳುತ್ತಿದ್ದರೆ, ಸಾಮಾನ್ಯ ಜನರು ಕುಡಿಯಲು ಶುದ್ಧವಾದ ನೀರನ್ನು ಯಾವುದಾದರೊಂದು ಸೂಕ್ತವಾದ ಯೋಜನೆಯಡಿ ನೀಡುವಂತೆ ಹಂಬಲಿಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಎಲೆಮಲ್ಲಪ್ಪ ಜಲಾಶಯದಿಂದ ಕೋಲಾರ ಜಿಲ್ಲೆಯ ಮೂರು ತಾಲೂಕಿನ ವಿವಿಧ ಕೆರೆಗಳಿಗೆ ನೀರು ಹಾಯಿಸಿ ಅಂತರ್ಜಲ ಹೆಚ್ಚಿಸುವುದು ಮತ್ತು ಕೈಗಾರಿಕೆಗಳಿಗೆ ನೀರು ಒದಗಿಸಲು 230 ಕೋಟಿ ರು. ವೆಚ್ಚದಲ್ಲಿ ರೂಪಿಸಿರುವ ಯೋಜನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿ, ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ಸಿಗುವಂತೆ ಮಾಡಿದಲ್ಲಿ ನೀರಿನ ಭವಣೆ ಕೊಂಚಮಟ್ಟಿಗಾದರೂ ಬಗೆಹರಿಸಬಹುದಾಗಿದೆ.
ಆಕಾಶಕ್ಕೆ ಏಣಿ ಹಾಕಲು ವ್ಯರ್ಥ ಪ್ರಯತ್ನ ಮಾಡುವ ಬದಲು ಸುಲಭ ಹಾಗೂ ಸರಳವಾಗಿ ನೀರು ಸಿಗುವ ಎಲೆಮಲ್ಲಪ್ಪ ಯೋಜನೆಗೆ ಚಾಲನೆ ನೀಡಿದಲ್ಲಿ ಯಾವುದೇ ಪರಿಸರಕ್ಕೆ ಹಾನಿ ಇಲ್ಲದೆ, ಭೂಸ್ವಾಧೀನ ಇಲ್ಲದೆ ಪೈಪ್ ಲೈನ್ ಮೂಲಕ ನೀರು ಪಡೆಯಬಹುದಾಗಿರುವುದರಿಂದ ಜಿಲ್ಲೆಯ ಜನಪ್ರತಿನಿಧಿಗಳು  ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಜನತೆ ದಾಹ ತೀರಿಸಲು ಮುಂದಾಗಬೇಕಾಗಿದೆ.
ಕೋಲಾರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಾಕಷ್ಟು ಅವಕಾಶಗಳಿವೆ. ಕೈಗಾರಿಕೆಗಳು ಅಭವೃದ್ಧಿಗೊಂಡಲ್ಲಿ ಸಾವಿರಾರು ಕುಟುಂಬಗಳಿಗೆ ಆಸರೆಯಾಗುತ್ತದೆ. ಈಗಾಗಲೇ ಮಾಲೂರು, ನರಸಾಪುರದಲ್ಲಿ ಕೈಗಾರಿಕೆಗಳು ತಲೆ ಎತ್ತಿವೆ. ವೇಮಗಲ್‌ನಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ 665 ಎಕರೆ ಭೂಮಿ ಸ್ವಾಧೀನವಾಗಿದೆ, ಮುಳಬಾಗಿಲು ತಾಲೂಕಿನ ದುಗ್ಗಸಂದ್ರ ಹೋಬಳಿಯ 17 ಗ್ರಾಮಗಳಲ್ಲಿನ 17,165 ಎಕರೆ ಭೂಮಿಯನ್ನು ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯ(ಎನ್‌ಐಎಂಜೆ)ವನ್ನಾಗಿ ಮಾಡಿ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಯಡಿ ಈಗಾಗಲೇ 5,872 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ. ಉಳಿದ 11,293 ಎಕರೆ ಭೂಮಿಯನ್ನು ರೈತರ ಮತ್ತು ಭೂ ಮಾಲೀಕರ ಮನವೊಲಿಸಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿಗಳು ಈ ಯೋಜನೆ ಅನುಷ್ಠಾನಕ್ಕೆ ಭರವಸೆ ನೀಡಬೇಕೆಂಬುದು ಜನತೆಯ ಬೇಡಿಕೆಯಾಗಿದೆ. ಇದೇ ರೀತಿ ಶ್ರೀನಿವಾಸಪುರ ತಾಲೂಕಿನಲ್ಲೂ ಕೈಗಾರಿಕಾ ಪ್ರದೇಶ ರಚನೆಗಾಗಿ ಪ್ರಯತ್ನ ನಡೆಯುತ್ತಿದ್ದು ಜಿಲ್ಲೆಯ ಎಲ್ಲ ಶಾಸಕರು, ರೈತರು, ಸಂಘಟನೆಗಳು ಐಕ್ಯತೆಯಿಂದ ಕೆಲಸ ಮಾಡಿದಲ್ಲಿ ಕೋಲಾರ ಜಿಲ್ಲೆ ಇನ್ನು ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ.
ಈ ಯೋಜನೆಗಳಿಗೆ ನೀರಿನ ಅವಶ್ಯತೆ ಇರುವುದರಿಂದ ಸರ್ಕಾರ ಜಲ ವಾಹನಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಡಿಮೆ ನೀರಿನಿಂದ ಹನಿ ನೀರಾವರಿ ಪದ್ಧತಿಯ ಮೂಲಕ ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ.
ಜಿಲ್ಲೆಗೆ ಮಂಜೂರು ಆಗಿರುವ ರೇಲ್ವೆ ಕೋಚ್ ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕು, ತೋಟಗಾರಿಕೆ, ಪುಷ್ಪೋಧ್ಯಮ, ರೇಷ್ಮೆ, ಹೈನುಗಾರಿಕೆಯನ್ನು ಉತ್ತೇಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದಲ್ಲಿ ಬರಡು ಜಿಲ್ಲೆಯ ಪಾಲಿಗೆ ರಾಜಸ್ಥಾನದ ರಾಜೇಂದ್ರ ಸಿಂಗ್ ಆಗುವುದರಲ್ಲಿ ಅನುಮಾನವಿಲ್ಲ. ಜನಪ್ರತಿನಿಧಿಗಳು, ಹೋರಾಟಗಾರರು ತಮ್ಮ ಸ್ವಂತಕ್ಕೆ ಬೇಡಿಕೆಗಳನ್ನು ಮಂಡಿಸುವ ಬದಲು ಮುಂದಿನ ಪೀಳಿಗಾಗಿ ಚಿಂತನೆ ಮಾಡಿದಲ್ಲಿ ನಾಡಿನ ಧಣಿಯ ಮನವೊಲಿಸುವುದು ಕಷ್ಟವಾಗದು.

ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.