ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಚಿಕ್ಕಬಳ್ಳಾಪುರ: ಸಾಹಿತಿ, ಹಿರಿಯ ಪತ್ರಕರ್ತ ಟಿ.ಎಸ್. ನಾಗೇಂದ್ರ ಬಾಬುರವರ ಅಧ್ಯಕ್ಷತೆಯಲ್ಲಿ 5 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರ ಸಡಗರದಿಂದ ನಡೆದು ಕನ್ನಡದ ಕಂಪು ಪಸರಿಸಿತು.
ಮೊದಲಿಗೆ ನಗರದ ನಂದಿ ರಂಗಮಂದಿರದ ಆವರಣದಲ್ಲಿ ರಾಷ್ಟ್ರಧ್ವಜ, ನಾಡಧ್ವಜ, ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದ ನಂತರ ಕನ್ನಡ ಮಾತೆ ಶ್ರೀ ಭುವನೇಶ್ವರಿ ಮತ್ತು ಸಾಹಿತಿ ಸಮ್ಮೇಳನದ ಅಧ್ಯಕ್ಷ ಟಿ.ಎಸ್. ನಾಗೇಂದ್ರ ಬಾಬುರವರ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ವಿದ್ಯಾರ್ಥಿಗಳು, ಕಲಾವಿದರು, ಕನ್ನಡಪರ ಸಂಘಟನೆಗಳ ಹೋರಾಟಗಾರರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾಹಿತಿಗಳು ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಕನ್ನಡ ನಾಡಬಾವುಟಗಳು ರಾರಾಜಿಸಿದವು. ಕಲಾ ತಂಡಗಗಳು ಮೆರವಣಿಗೆಗೆ ಮೆರಗು ನೀಡಿದವು. ನಂತರ ನಗರದ ಅಂಬೇಡ್ಕರ್ ಬವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡ ನಾಡು ನುಡಿಯ ಬೆಳವಣಿಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿಗಳು ಅಚ್ಚುಕಟ್ಟಾಗಿ ನಡೆದವು.
ಕನ್ನಡ ಭಾಷೆ ಉಸಿರಾಗಲಿ: ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆ ಕೇವಲ ಹೊಗಳಿಕೆಯ ಭಾಷೆಯಾಗಬಾರದು. ಕನ್ನಡನಾಡಿನ ಪ್ರತಿಯೊಬ್ಬರ ಉಸಿರಾಗಬೇಕೆಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಟಿ.ಎಸ್. ನಾಗೇಂದ್ರ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.
ಆಂಧ್ರದ ಗಡಿ ಭಾಗದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ 5 ನೇ ತಾಲೂಕು ಸಾಹಿತ್ಯ ನಡೆಯುತ್ತಿರುವುದು ಶ್ಲಾಘನೀಯ. ತಾಲ್ಲೂಕಿನಲ್ಲಿ ಕನ್ನಡ ಭಾಷಾ ಸಾಹಿತ್ಯದಲ್ಲಿ ಹೆಚ್ಚಿನ ಸಾಧನೆ ಮಾಡಿದ ಅನೇಕ ಮಹನೀಯರಿದ್ದಾರೆ. ನಾವೆಲ್ಲರೂ ಸೇರಿ ಕನ್ನಡಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗೋಣ ಎಂದರು. ದೇಶದ ಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಭಾಷೆ ತನ್ನದೇ ಆದ ಪ್ರತ್ಯೇಕತೆ ಪಡೆದ ಭಾಷೆಯಾಗಿದೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆ ಇನ್ನೂ ಹಲವಾರು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದರು.
ಶ್ರೀಗಳ ಅಸಮಾಧಾನ: ಕನ್ನಡ ಭಾಷೆ ಉಳಿವಿಗೆ ಹೋರಾಡುವ ಸಂಘಟನೆಗಳು ಭಿನ್ನಾಭಿಪ್ರಾಯಗಳಿಂದ ಹರಿದು ಹಂಚಿಹೋಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಕೆಲವರಿಗೆ ಮಾತ್ರ ಸೀಮಿತವಾಗುತ್ತಿದೆ. ಜನರ ಸಹಭಾಗಿತ್ವವೂ ಕಡಿಮೆಯಾಗುತ್ತಿದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆ ಎಂದು ಹೆಸರನ್ನಿಟ್ಟುಕೊಂಡು ಭಾಷಾ ಕಾರ್ಯಕ್ರಮಕ್ಕೆ ಬರಲಿಲ್ಲವೆಂದರೆ ಇನ್ನು ಸಂಘಟನೆಯನ್ನು ಯಾವ ರೀತಿ ಬಲಪಡಿಸುತ್ತಾರೆ ಎಂದು ಸೂಚ್ಯವಾಗಿ ಹೇಳಿದರು. ದೂರ ದರ್ಶನಗಳಿಂದ ಸಾಹಿತ್ಯ ಕಣ್ಮರೆಯಾಗುತ್ತಿದ್ದು, ದೂರದರ್ಶನದ ಬದಲು ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳೆಸಬೇಕಿದೆ ಎಂದ ಅವರು, ಪುಸ್ತಕ ಅಧ್ಯಯನ ಮಾಡುವುದರಿಂದ ಉತ್ತಮ ಗುಣಗಳು ಬರುತ್ತವೆ, ಪುಸ್ತಕ ಅಧ್ಯಯನ ಮಾಡಲಿಲ್ಲವೆಂದರೆ ಸಾಹಿತ್ಯವನ್ನು ಬೆಳೆಸಲು ಸಾಧ್ಯವಿಲ್ಲ. ಇಂದು ನಾವು ನಮ್ಮ ಭಾಷೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ನಮ್ಮ ಪರಂಪರೆ ಸಂಸ್ಕೃತಿ ದೂರವಾಗುತ್ತದೆ. ಸಾಹಿತ್ಯ ಸಮ್ಮೇಳನಗಳು ಸಂಘಟಕರಿಂದ ಮಾತ್ರ ನಡೆಸಲು ಆಗುವುದಿಲ್ಲ ಎಲ್ಲರೂ ಕೈ ಜೋಡಿಸಬೇಕೆಂದರು.
ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕಲಾ ಭವನವನ್ನು ಸುಮಾರು 10-15 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದೆ ಎಂದ ಅವರು, ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ, ಸಂಪಾದಕ ಭಾಸ್ಕರ್ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಅಗಲಗುರ್ಕಿ ಚಲಪತಿ, ಜಯಂತ್, ನಿವೃತ್ತ ತಹಸೀಲ್ದಾರ್ ಶೇಷಭಟ್, ಸು.ದಾ. ವೆಂಕಟೇಶ್, ನಾರಾಯಣಸ್ವಾಮಿ, ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

