ಕೋಲಾರ

ಗ್ರಾಮೀಣ ಯುವಕರಿಗಾಗಿ ಕೌಶಲ್ಯ ನಿಧಿ ಸ್ಥಾಪನೆ

Published On :

ಕೋಲಾರ: ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಸಿಗುವಂತಾಗಲು ರಾಜ್ಯ ಸರ್ಕಾರ ಕೌಶಲ್ಯ ನಿಧಿಯನ್ನು ಪ್ರಾರಂಭಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೋಲಾರ -ಶ್ರೀನಿವಾಸಪುರ ರಸ್ತೆಯಲ್ಲಿರುವ ತೊರದೇವಂಡಹಳ್ಳಿಯ ಸಿ. ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಭಾನುವಾರ ವೃತ್ತಿಪರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನತೆಗೆ ವೃತ್ತಿ ಪರ ತರಬೇತಿ ನೀಡಿ ಸಶಕ್ತರನ್ನಾಗಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ, ಸಾಂಪ್ರದಾಯಿಕ ಶಿಕ್ಷಣದ ಜೊತೆಯಲ್ಲಿಯೇ ವೃತ್ತಿಪರ ತರಬೇತಿ ನೀಡಿದಲ್ಲಿ ಉದ್ಯೋಗ ಹುಡುಕಿ ಯುವಕರು ಪಟ್ಟಣ ಮತ್ತು ನಗರಗಳಿಗೆ ವಲಸೆ ಬರುವುದು ತಪ್ಪುತ್ತದೆಯೆಂದು ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲೆಗೆ ಕೈಗಾರಿಕೆಗಳು ಬರುತ್ತಿರುವುದರಿಂದ ಅಲ್ಲಿ ಕೌಶಲ್ಯವಿದ್ದವರಿಗೆ ಬೇಗನೆ ಕೆಲಸ ಸಿಗುತ್ತದೆ ಹಾಗೂ ಒಳ್ಳೆಯ ಹುದ್ದೆಗಳು ಸಿಗುತ್ತದೆ, ಕೃಷಿ ಮತ್ತು ಕೈಗಾರಿಕೆಗಳಿಗೆ ಪೂರಕವಾದ ತರಬೇತಿಗಳು ಹೆಚ್ಚಾಗಬೇಕು, ಸರ್ಕಾರ ಇದಕ್ಕಾಗಿ ಎಲ್ಲ ರೀತಿಯ ನೆರವು ಒದಗಿಸಲು ಬದ್ಧವಾಗಿದೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳಾಗಿಸುವ ಕನಸನ್ನು ದಿವಂಗತ ಸಿ. ಬೈರೇಗೌಡರು ಕಂಡಿದ್ದರು, ಇದೀಗ ಸಿಬಿಐಟಿ ತಾಂತ್ರಿಕ ವಿದ್ಯಾಸಂಸ್ಥೆ ಈ ಕನಸನ್ನು ನನಸು ಮಾಡಲು ಮುಂದಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೈರೇಗೌಡರ ಸ್ಮರಣೆ: ಸಿ. ಬೈರೇಗೌಡರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿ ಮುಖ್ಯಮಂತ್ರಿಗಳು ಬೈರೇಗೌಡರಂತಹ ಪ್ರಾಮಾಣಿಕ ರಾಜಕಾರಣಿಗಳು ವಿರಳ, ಅವರು ಕೆಳ ಮಟ್ಟದಿಂದ ಜನರ ನಡುವೆಯೇ ರಾಜಕಾರಣಿಯಾದವರು ಎಂದು ಬಣ್ಣಿಸಿದರು. ರಾಜಕಾರಣದಲ್ಲಿ ಈಗ ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆಯೆಂದು ವಿಷಾದಿಸಿದ ಅವರು, ಪ್ರಾಮಾಣಿಕರು ಮತ್ತು ಜನಪರ ಕಾಳಜಿ ಇರುವವರು ರಾಜಕೀಯಕ್ಕೆ ಬರದಿದ್ದರೆ ರಾಜಕಾರಣ ಕಲುಷಿತಗೊಂಡು ಸ್ವಾರ್ಥ ರಾಜಕಾರಣ ಮಾಡುವವರ ಸಂಖ್ಯೆ ಹೆಚ್ಚಾಗುತದೆ ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಮಾತನಾಡಿ, ದಿವಂಗತ ಸಿ. ಬೈರೇಗೌಡರ ವೃತ್ತಿಪರ ತರಬೇತಿ ಕನಸನ್ನು ನನಸಾಗಿಸುವ ಬಗ್ಗೆ ಸಿಬಿಯವರ  ಪುಣ್ಯತಿಥಿಯ ಸಂದರ್ಭದಲ್ಲಿ ಕೃಷ್ಣಬೈರೇಗೌಡರು ಎಚ್ಚರಿಸಿದ್ದರು, ಇದನ್ನು ಸಿಬಿಐಟಿ ಸಂಸ್ಥೆ ಗಂಭೀರವಾಗಿ ಪರಿಗಣಿಸಿ ಇದೀಗ ಸುಮಾರು 800 ಬಗೆಯ ವಿವಿಧ ವೃತ್ತಿ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಶಾಶ್ವತ ನೀರಾವರಿ: ರಾಜಕಾರಣದಲ್ಲಿ ಸಿದ್ದರಾಮಯ್ಯ ಬದ್ಧತೆಯುಳ್ಳವರಾಗಿದ್ದಾರೆ, ನುಡಿದಂತೆ ನಡೆಯುವ ಸ್ವಭಾವದವರು. ಶಾಶ್ವತ ನೀರಾವರಿ ಅವರು ಮನಸ್ಸು ಮಾಡಿದಲ್ಲಿ ಜನತೆಯ ಬೇಡಿಕೆ ಈಡೇರಿಸಬಹುದೆಂದರು.
ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿ ಅದನ್ನು ಅನುಷ್ಠಾನಗೊಳಿಸಬೇಕು ಇಲ್ಲವಾದರೆ ಜನ ಜಿಲ್ಲೆಯಿಂದ ಗುಳೇ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಕೃಷಿ ಸಚಿವ ಸಿ.ಬಿ. ಕೃಷ್ಣಬೈರೇಗೌಡ, ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ವಿ. ಕೃಷ್ಣಾರೆಡ್ಡಿ, ಖಜಾಂಚಿ ಡಾ.ಎ. ಪ್ರಭಾಕರರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀನಿವಾಸಚಾರಿ, ಐಜಿಪಿ ಉಲ್ಫಾತ್ ಹುಸೇನ್, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಎಸ್ಪಿ ರಾಮ್‌ನಿವಾಸ್ ಸಫೆಟ್ ಇದ್ದರು.
ಕಳಚಿ ಬಿದ್ದ ಶ್ಯಾಮಿಯನಾ; ಬಿಚ್ಚಿಬಿದ್ದ ಜನ
ಕೋಲಾರ: ಶ್ರೀನಿವಾಸಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮಧ್ಯಾಹ್ನ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದಂತೆ ಸಭೀಕರು ಕುಳಿತಿದ್ದ ಜಾಗದಲ್ಲಿ ಶ್ಯಾಮಿಯನಾ ಕಳಚಿಕೊಂಡಿತು.
ಜೋರಾಗಿ ಬೀಸಿದ ಗಾಳಿಯಿಂದಾಗಿ ಶ್ಯಾಮಿಯನಾ ಕಳಚಿಕೊಂಡಿದ್ದರಿಂದ ಬೆಚ್ಚಿಬಿದ್ದ ಜನರು ಕುಗಲಾರಂಭಿಸಿದರು. ವೇದಿಕೆಯಿಂದ ಘಟನೆ ಗಮನಿಸಿದ ಮುಖ್ಯಮಂತ್ರಿಗಳು ಯಾವುದೇ ಅನಾಹುತ ಸಂಭವಿಸದನ್ನು ಗಮನಿಸಿ, ಏನು ಆಗಿಲ್ಲ, ಶ್ಯಾಮಿಯನಾ ಮತ್ತು ಕಬ್ಬಿಣದ ಪೈಪುಗಳನ್ನು ಗಟ್ಟಿಯಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ತಕ್ಷಣ ಜಾಗಕ್ಕೆ ಓಡಿ ಬಂದ ಪೊಲೀಸರು ಗಾಬರಿಗೊಂಡ ಜನರನ್ನು ಸಮಾಧಾನಪಡಿಸಿದರು, ಪೆಂಡಾಲಲ್ಮಾಲೀಕ ಮತ್ತು ಸಿಬ್ಬಂದಿ ಯಾವುದೇ ಅಪಾಯ ಉಂಟಾಗದಂತೆ ಶ್ಯಾಮಿಯನಾವನ್ನು ಮತ್ತೆ ಭದ್ರವಾಗಿ ಕಟ್ಟಿದರು. ಕೇವಲ ಪೆಂಡಾಲ್ ಮೇಲಿನ ಬಟ್ಟೆ ಕಳಚಿಕೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಒಂದು ವೇಳೆ ಶ್ಯಾಮಿಯನಾ ಮೇಲೆ ಕಬ್ಬಿಣದ ತಗಡುಗಳನ್ನು ಹೊದಿಸಿ ಅದು ಕಳಚಿ ಬಿದ್ದಿದ್ದಲ್ಲಿ ದೊಡ್ಡ ದುರಂತಕ್ಕೆ ಕಾಣವಾಗುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.