ಕೋಲಾರ

ದಳಸನೂರು ಶಾಲೆಯಲ್ಲಿ ಸುವರ್ಣ ಸಂಭ್ರಮ

Published On :

ಕೋಲಾರ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸ್ಥಾನ ಅಲಂಕರಿಸಿರುವ ಹಳೆ ವಿದ್ಯಾರ್ಥಿಗಳು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಹಾಗೂ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮದಲ್ಲಿ 50 ವರ್ಷ ಪೂರೈಸಿರುವ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ನೀಡುವ ಅನುದಾನ, ಸವಲತ್ತುಗಳ ಜೊತೆಗೆ ಅನುಕೂಲಸ್ಥ ಹಳೆ ವಿದ್ಯಾರ್ಥಿಗಳು ಶಾಲೆಗಳ ಅಭಿವೃದ್ಧಿಗೆ ತಮ್ಮ ಕೈಲಾದಷ್ಟು ನೆರವು ನೀಡಿದಲ್ಲಿ ಗ್ರಾಮೀಣ ಮಕ್ಕಳು ಎಲ್ಲರಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾರೆಂದರು. ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ಪಾಠ ಕಲಿಯುವುದು ಕಷ್ಟವಾಗಿತ್ತು, ಶನಿವಾರ ಮತ್ತು ಭಾನುವಾರ ಎಮ್ಮೆ ತೊಳೆಸುತ್ತಿದ್ದರು. ಈಗ ಕಾಲ ಬದಲಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ, ಇದರ ಜತಗೆ ಹಳೆ ವಿದ್ಯಾರ್ಥಿಗಳು ಈಗಿನ ಮಕ್ಕಳ ಕಲಿಕೆಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸಿದಲ್ಲಿ ತಮ್ಮಂತೆಯೇ ಅವರು ಉನ್ನತ ಶಿಕ್ಷಣ ಪಡೆದು ದೇಶದ ಸತ್ಪ್ರಜೆಗಳಾಗುತ್ತಾರೆಂದರು.
ದಳಸನೂರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ ಆರ್ಥಿಕ ಸಹಾಯ ಕಲ್ಪಿಸಲಾಗುತ್ತದೆ, ಶಾಸಕ ರಮೇಶ್ ಕುಮಾರ್ ಈ ವಿಚಾರದಲ್ಲಿ ಆಸಕ್ತಿ ವಹಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ಪ್ರಾಮಾಣಿಕರಿದ್ದಾರೆ, ಇದು ರಾಜ್ಯದ ಅರ್ಧ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ, ರಾಜಕಾರಣದಲ್ಲಿ ಇರಬೇಕಾದದ್ದು ಹೃದಯವಂತಿಕೆ, ಅಧಿಕಾರ ಇದ್ದಾಗ ಜನರಿಗೆ ಏನಾದ್ರು ಒಳ್ಳೆಯದನ್ನು ಮಾಡದಿದ್ದರೆ ಹೃದಯ ಇಲ್ಲವರು ಆಗಬೇಕಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ರೂವಾರಿ ಜಿಪಂ ಮಾಜಿ ಸದಸ್ಯ ಗೋಪಾಲಕೃಷ್ಣ ಶಾಲೆಯ ಇತಿಹಾಸ ತಿಳಿಸಿದರು. ಹಳೆಯ ವಿದ್ಯಾರ್ಥಿಯಾದ ನಿವೃತ್ತ ಐಎಎಸ್ ಅಧಿಕಾರಿ ಗೋಪಾಲಕೃಷ್ಣೇಗೌಡ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಶಾಸಕ ಕೊತ್ತೂರು ಮಂಜುನಾಥ್, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ನಜೀರ್ ಅಹಮ್ಮದ್, ಜಿಪಂ ಸದಸ್ಯೆ ರತ್ನಮ್ಮ, ಮುಖಂಡರಾದ ಬಿಸ್ಸೇಗೌಡ, ನಿಸಾರ್ ಅಹಮ್ಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.