ಅಭಿವೃದ್ಧಿಯಲ್ಲಿ ರಾಜಕೀಯ ಬೇಡ: ಮುನಿಯಪ್ಪ
ಶಿಡ್ಲಘಟ್ಟ: ಅಭಿವೃದ್ಧಿಯಲ್ಲಿ ರಾಜಕೀಯ ಬೇಡ, ಪಕ್ಷಾತೀತವಾಗಿ ತಾಲೂಕಿನ ಅಬಿವೃದ್ಧಿ ಪಡೆಯಬೇಕೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣ, ತಾಲೂಕಿನ ಪುರಬೈರೇನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ, ಚಿಂತಾಮಣಿ ತಾಲೂಕಿನ ಏನಿಗದೆಲೆ ಜವಹಾರ್ ಲಾಲ್ ನೆಹರು ವಿದ್ಯಾಪೀಠ ಕಾಮಗಾರಿಗಳ ಉದ್ಘಾಟನೆ ಹಾಗೂ ನೆಹರು ಕ್ರೀಡಾಂಗಣ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 14 ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗಿದ್ದು, ಎಲ್ಲ ವರ್ಗದ ಬಡವರು ವಿದ್ಯಾವಂತರಾಗಬೇಕು ಎಂದರು.
ಎಲ್ಲ ವರ್ಗದ ಬಡರೈತರಿಗೆ ಹಾಗೂ ರೇಷ್ಮೆ ಉದ್ದಿಮೆದಾರರಿಗೆ ಸಬ್ಸಿಡಿ ಸಹಿತ ಸಾಲ ನೀಡುವಂತೆ ಸರ್ಕಾರ ಆದೇಶ ನೀಡಿದೆ, 3ಲಕ್ಷದವರೆಗೆ ವಿವಿಧ ಹಂತಗಳಲ್ಲಿ ಬಡ್ಡಿ ರಹಿತ ಸಾಲ ಯೋಜನೆ ಕಾರ್ಯರೋಪಕ್ಕೆ ಬರಲಿದೆ ಎಂದರು.
ಬಯಲು ಸೀಮೆಯ 72 ತಾಲೂಕುಗಳಲ್ಲಿ ತೀವ್ರ ನೀರಿನ ಸಮಸ್ಯೆ ಇದ್ದು ಪಕ್ಷಾತೀತ ಹೋರಾಟದಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬಂದಿದ್ದು ಡಾ.ಪರಮಶಿವಯ್ಯ ವರದಿಯಾಗಲಿ ಅಥವಾ ಎತ್ತಿನಹೊಳೆ ಯೋಜನೆಯಾಗಲಿ ಕುಡಿಯುವ ನೀರಿನ ಅಗತ್ಯ ಇರುವುದರಿಂದ ಸಚಿವರು ಸಿದ್ದರಾಮಯ್ಯನವರ ನೇತಣತ್ವದಲ್ಲಿ 12 ಸಾವಿರ ಕೋಟಿ ರು.ಗಳ ವೆಚ್ಚದ ಯೋಜನೆಗೆ ಚಾಲನೆ ದೊರೆತ್ತಿದ್ದು ಕಲವೇ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ. ರಾಜಣ್ಣ, ತಮ್ಮ ಅಧಿಕಾರಾವಧಿಯಲ್ಲಿ ಪಕ್ಷಾತೀತವಾಗಿ ಅಬಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣ, ರಂಗಮಂದಿರ, ಬಸ್ ಡಿಪೋ, ಅಗ್ನಿ ಶಾಮಕ ದಳ ಕಚೇರಿ ಕಟ್ಟಡಗಳ ಕಾಮಗಾರಿ ಉದ್ಘಾಟನೆ ಮಾಡಲಾಗುವುದೆಂದರು. ಸಿಇಒ ಲೀಲಾ ಮಂಜುನಾಥ್, ಉಪ ವಿಬಾಗಾದಿಕಾರಿ ಕೆ.ಟಿ. ಶಾಂತಲಾ, ಜಿಪಂ ಸದಸ್ಯ ಸತೀಶ್, ಎಸ್.ಎನ್. ನಾರಾಯಣಸ್ವಾಮಿ, ಬ್ಯಾಟರಾಯ ಶೆಟ್ಟಿ, ರಾಮಚಂದ್ರಪ್ಪ, ಬಂಕ್ ಮುನಿಯಪ್ಪ, ಪುರಸಭಾ ಸದಸ್ಯರು, ತಹಸಿಲ್ದಾರ್ ನಾರಾಯಣಸ್ವಾಮಿ ಇದ್ದರು.
ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮ: ರಾಜು
ಗುಬ್ಬಿ: ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಮಾಡಲು ಲಿಟ್ರೆಸಿ ಪ್ರಾಜೆಕ್ಟ್ ಎಂಬ ಮಹತ್ವದ ಯೋಜನೆಯನ್ನು ರೋಟರಿ ಸಂಸ್ಥೆ ಜಾರಿಗೊಳಿಸಿದ್ದು ಈ ಯೋಜನೆಯಡಿ ಶಾಲೆಗಳಿಗೆ ಇ-ಪಾಠಶಾಲೆಯಡಿ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುವಂತೆ ಅಗತ್ಯವಾದ ಪಾಠೋಪಕರಣಗಳನ್ನು ವಿತರಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಅಸಿಸ್ಟೆಂಟ್ ಗೌರ್ನರ್ ಇ.ಟಿ.ಕೇರ್. ರಾಜು ತಿಳಿಸಿದರು.ತಾಲೂಕಿನ ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಸಂಸ್ಥೆ ಮತ್ತು ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್, ಕಂಪ್ಯೂಟರ್ ಆಧಾರಿತ ಇ-ಪಾಠಶಾಲಾ ತಂತ್ರಾಂಶ, ಲ್ಯಾಪ್ಟಾಪ್, ಯುಪಿಎಸ್, ಟೆಲಿವಿಷನ್ ಹಾಗೂ ಇಂಗ್ಲಿಷ್ ಕನ್ನಡ ನಿಘಂಟು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಲವಾರು ಸಂಸ್ಥೆಗಳು ನಗರ ಪ್ರದೇಶಗಳ ಶಾಲೆಗಳಿಗೆ ಮಾತ್ರ ಪಾಠೋಪಕರಣಗಳನ್ನು ನೀಡುವ ಪರಿಪಾಠವಿದೆ. ರೋಟರಿ ಸಂಸ್ಥೆ ವಿಶೇಷವಾಗಿ ಗ್ರಾಮೀಣ ಶಾಲೆಗಳಿಗೆ ಪಾಠೋಪಕರಣಗಳನ್ನು ವಿತರಿಸುವಂತಹ ಮಹತ್ವದ ಯೋಜನೆ ಹಾಕಿಕೊಂಡಿದ್ದು ಗ್ರಾಮೀಣ ಮಕ್ಕಳಿಗೆ ಆಧುನಿಕ ಮತ್ತು ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ನಾ.ಚಂ. ಗಂಗಾಧರಶಾಸ್ತ್ರಿ ಮಾತನಾಡಿ ರೋಟರಿ ಸಂಸ್ಥೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
'ಬಡವರೇಕೆ ಬೀದಿ ಪಾಲು' ಚಳುವಳಿ
ಗೌರಿಬಿದನೂರು: ಬಡವರು ಇಂದಿಗೂ ಸೂರಿಲ್ಲದೆ ಬದುಕುತ್ತಿರುವುದು ದೇಶದ ದೌರ್ಬಾಗ್ಯ ಎಂದು ಜನಪರ ಹೋರಾಟಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಂಜುಂಡಪ್ಪ ಆಕ್ರೋಶ ವ್ಯಕ್ತ ಪಡಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಪರ ಹೋರಾಟಗಳ ಒಕ್ಕೂಟ ಮತ್ತು ಕರ್ನಾಟಕ ಜನಪರ ಸೇವಾ ಸಮಿತಿ ಆಶ್ರಯದಲ್ಲಿ ಬಡವರೇಕೆ ಬೀದಿ ಪಾಲು ಚಳುವಳಿಯಲ್ಲಿ ಮಾತನಾಡಿ, ಬಡವರನ್ನು ಗುರುತಿಸುವಲ್ಲಿ ವಿಫಲರಾಗಿದ್ದು ಮುಂದಿನ ದಿನಗಳಲ್ಲಿ ಜನಗಣತಿ ಮಾಡುವಾಗ ಬಡವರಿಗೆ ವಿಶೇಷವಾಗಿ ಅವರ ವಾಸ ಸ್ಥಾನ, ಸ್ಥಿತಿಗತಿಗಳು ಗುರ್ತಿಸುವುದು ಹಾಗೂ ಪರರ ಜಮೀನಿನಲ್ಲಿ ದುಡಿಯುವ ರೈತರಿಗೆ ಜಮೀನು ನೀಡಬೇಕೆಂದು ಆಗ್ರಹಿಸಿದರು. ಚಳುವಳಿಯಲ್ಲಿ ಒಕ್ಕೂಟದ ತಾಲೂಕು ಪ್ರಧಾನ ಕಾರ್ಯದರ್ಶಿ ಬಾಲಗಂಗಾಧರನಾಥ್, ತಾಲೂಕು ಅಧ್ಯಕ್ಷ ಎನ್.ನಾರಾಯಣಸ್ವಾಮಿ, ನರಸಿಂಹಮೂರ್ತಿ, ಮಂಜಮ್ಮ, ಅಂಜಲಿದೇವಿಇದ್ದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಕೋಲಾರ; ಏಕರೂಪದ ಶಿಕ್ಷಣ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯೆ, ಸಂಪತ್ತು, ಅಧಿಕಾರ ಕೆಲವೇ ಜನರು ಕೇಂದ್ರೀಕರಿಸಿಕೊಂಡಿರುವುದರಿಂದ ಕೆಳವರ್ಗದ ಜನರಿಗೆ ಸಂವಿಧಾನಬದ್ಧವಾಗಿ ಜೀವಿಸಲು ಆಗುತ್ತಿಲ್ಲ, ಇದರಿಂದ ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿದೆ,ಜತೆಗೆ ಪ್ರಜಾ ಪ್ರಭುತ್ವ ಇಂದು ಅಧಃಪತನದತ್ತ ಸಾಗುತ್ತಿದೆ ಎಂದು ದೂರಿದರು.
ಸಂವಿಧಾನದ ಸದಾವಕಾಶಗಳು ಜಾರಿಯಾಗಲು ಏಕರೂಪ ಶಿಕ್ಷಣ ಜಾರಿಗೆ ಬರಬೇಕು, ವಿದ್ಯೆ ರಾಷ್ಟ್ರೀಕರಣಗೊಳಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಸಲ್ಲಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕದಂಸದ ರಾಜ್ಯ ಸಂಚಾಲಕ ಮಂಡ್ಯದ ವೆಂಕಟಗಿರಿಯಪ್ಪ ಆಗ್ರಹಿಸಿದರು. ರಾಜ್ಯದ 15 ಲಕ್ಷ ಎಕರೆ ಸರ್ಕಾರಿ ಭೂಮಿ ಅತಿಕ್ರಮಣವಾಗಿದ್ದು ಅದನ್ನು ವಶಕ್ಕೆ ಪಡೆದು, ಬಡ ಭೂರಹಿತ ಕೃಷಿ ಕೂಲಿ ಕಾರ್ಮಿಕರಿಗೆ ಹಂಚಿಕೆ ಮಾಡಬೇಕು,ರಾಜ್ಯ ಭೂಮಿತಿ ಕಾಯ್ದೆಯನ್ವಯ ಶೇ.50 ರಷ್ಟು ಭೂಮಿಯನ್ನು ದಲಿತರಿಗೆ ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ, ದಲಿತ ಮಹಿಳೆಯರ ಸಬಲೀಕರಣಕ್ಕಾಗಿ ದಲಿತ ಮಹಿಳಾ ಸ್ವಸಹಾಯ ಸಂಘಗಳಿಗೆ 10 ಲಕ್ಷ ರು.ಗಳ ಸಹಾಯಧನ, ಸೌಲ ಸೌಲಭ್ಯ, ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಕದಂಸದ ರಾಜ್ಯ ಸಂಘಟನಾ ಸಂಚಾಲಕ ವಿ.ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕ ಡಿ. ಚಿಕ್ಕಣ್ಣ, ಸಂಘಟನಾ ಸಂಚಾಲಕ ಆರ್. ಕುಮಾರ್, ಪಿ.ಕೆ. ನಾಗರಾಜ್, ಸಿದ್ದಘಟ್ಟ ಶ್ರೀನಿವಾಸ್, ಕರಡಗುರ್ಕಿ ಶೇಷಾದ್ರಿ, ವೆಂಕಟೇಶ್, ಕೆ.ಆರ್. ಮುನಿಯಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ಎಂ. ಸಂಘರ್ಷ, ಮಹಿಳಾ ಒಕ್ಕೂಟದ ಗಜಲಕ್ಷ್ಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

