ಕೋಲಾರ

ಶಾಲೆಗೆ ಅರ್ಜಿ ಆಹ್ವಾನ

Published On :

ಮುಳಬಾಗಲು; ಪಟ್ಟಣದ ಶಿವಕೇಶವನಗರದಲ್ಲಿರುವ ಆದರ್ಶ ವಿದ್ಯಾಲಯದ 6 ನೇ ತರಗತಿ ದಾಖಲಾತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಫೆ.28ರೊಳಗೆ ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಥವಾ ಅದರ್ಶ ವಿದ್ಯಾಲಯಗಳ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್. ದೇವರಾಜ್ ತಿಳಿಸಿದ್ದಾರೆ. ಮಾರ್ಚ್ 23 ಬೆಳಿಗ್ಗೆ 10.30ರಿಂದ 12.30 ರವರೆವಿಗೂ ತಾಲೂಕು ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತದೆ. ಫಲಿತಾಂಶ ಏಪ್ರಿಲ್ 10 ರಂದು ಪ್ರಕಟವಾಗಲಿದ್ದು, ಮೇ 27 ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಶಿವರಾತ್ರಿ: ಪುಷ್ಪಲಿಂಗ ಪ್ರದರ್ಶನ
ಕೋಲಾರ: ನಗರದ ಅಂತಗಂಗೆ ರಸ್ತೆಯಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ನವರತ್ನಲಿಂಗ, ನವಧಾನ್ಯಲಿಂಗ, ಪುಷ್ಪಲಿಂಗಗಳ ಪ್ರದರ್ಶನವನ್ನು ಫೆ.26 ರಂದು ಸಂಜೆ 6 ಗಂಟೆಗೆ ಅಂತರಗಂಗೆ ರಸ್ತೆಯಲ್ಲಿರುವ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಡಿ.ಕೆ. ರವಿ ಕಾರ್ಯಕ್ರಮ ಉದ್ಘಾಟಸಲಿದ್ದಾರೆ. ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಾಚೋಟ್ ಸಫೆಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕೋಲಾರ ಜಿಲ್ಲಾ ಎಸ್ಪಿ ಡಾ. ರಾಮ್ನಿವಾಸ್ ಸಫೆಟ್ ಅಧ್ಯಕ್ಷತೆ ವಹಿಸುವರು. ರಾಜಯೋಗಿನಿ ಬ್ರಹ್ಮಕುಮಾರಿ ಸರ್ವಮಂಗಳಾಜಿ ಆಶೀರ್ವಚನ ನೀಡಲಿದ್ದಾರೆ.
ಅನಾಥ ವೃದ್ಧನ ಸಾವು
ಗುಡಿಬಂಡೆ: ಕುಟುಂಬದಿಂದ ದೂರವಾಗಿ ಕೆಲ ದಿನಗಳಿಂದ ಬೀದಿ ಬದಿಯ ಕಟ್ಟಡವೊಂದರ ಬಳಿ ದಿನ ದೂಡುತ್ತಿದ್ದ ವ್ರದ್ಧ ರೋಗಿಯೊಬ್ಬರು ಸೋಮವಾರ ಬೆಳಿಗ್ಗೆ ಮೃತ ಪಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತರನ್ನು ಪಟ್ಟಣದ ಗಾರೆ ಕೆಲಸಗಾರ ನಾರಾಯಣಪ್ಪ (70) ಎಂದು ಗುರ್ತಿಸಲಾಗಿದೆ. ಈತನ ಪತ್ನಿ ಈಗಾಗಲೇ ಮೃತ ಪಟ್ಟಿದ್ದು, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆಂದು ಹೇಳಲಾಗಿದೆ. ಆದರೆ ಇವರೆಲ್ಲರೂ ವಿವಾಹವಾಗಿ ಬೇರೆ ಊರುಗಳಲ್ಲಿ ವಾಸವಿರುವುದರಿಂದ ಈತನ ಯೋಗಕ್ಷೇವು ನೋಡಿಕೊಳ್ಳಲು ಯಾರೂ ಇರಲಿಲ್ಲವೆನ್ನಲಾಗಿದೆ. ಹೀಗಾಗಿ ತನ್ನ ಕುಟುಂಬದ ಸದಸ್ಯರ ಅನಾದರದಿಂದಾಗಿ ಈತ ಬೀದಿ ಹೆಣವಾಗಬೇಕಾಯಿತೆಂದು ಸ್ಥಳದಲ್ಲಿ ನೆರೆದ ಜನ ಮಾತಾಡುತಿದ್ದರು.
ಮಾನವೀಯತೆ ಮೆರೆದ ನಿವೃತ್ತ ನೌಕರರು: ವ್ರದ್ಧನ ಪರಿಸ್ಥಿತಿ ಕಂಡು ಮನ ಕರಗಿದ ನಿವೃತ್ತ ನೌಕರರ ಸಂಘದ ಸದಸ್ಯರು ಈತನಿಗೆ ನೀರು, ಆಹಾರ ಒದಗಿಸಿ ತಮ್ಮ ಕೈಲಾದ ನೆರವು ನೀಡುತ್ತಿದ್ದರು. ಆದರೆ ಗಂಭೀರ ಕಾಯಿಲೆಯಿಂದ ನರಳುತ್ತಿದ್ದ ಪರಿಣಾಮ ಬದುಕುಳಿಯಲಿಲ್ಲ.



ಕುಡಿವ ನೀರಿಗೆ ರು. 45 ಕೋಟಿ ಪ್ರಸ್ತಾವನೆ



ಚಿಕ್ಕಬಳ್ಳಾಪುರ: ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯ ಎಲ್ಲೆಡೆ ಕಾಡುತ್ತಿರುವಾಗ ಇನ್ನೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬ ಆತಂಕ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿರವರ ನೇತೃತ್ವದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಭೆಯಲ್ಲಿ ವ್ಯಕ್ತವಾಯಿತು.
ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ 45 ಕೋಟಿ ರು.ಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು. ಜಿಪಂ ಸಭಾಂಗಣದಲ್ಲಿ ಸಚಿವ ವೀರಪ್ಪ ಮೊಯ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ನಿರ್ಮಲ್ ಭಾರತ್, ಉದ್ಯೋಗ ಖಾತ್ರಿ, 15 ಅಂಶಗಳ ಕಾರ್ಯಕ್ರಮ, ಕುಡಿಯುವ ನೀರಿನ ಸರಬರಾಜು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ತ್ವರಿತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಮುಗಿಸುವಂತೆ ಸೂಚನೆ ನೀಡಿದರು.
ಕುಡಿಯುವ ನೀರಿನ ಹಾಹಾಕಾರ ಪ್ರಮುಖ ಸಮಸ್ಯೆಯಾಗಿದ್ದು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿರುವ ಗ್ರಾಮಗಳನ್ನು ಪಟ್ಟಿ ತಯಾರಿಸಿ ತಕ್ಷಣ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಬೇಕು. ಇದಕ್ಕೆ ಅನುದಾನದ ಕೊರತೆ ಇದೆ ಎಂದೇಳುವಂತಿಲ್ಲ. ಅಗತ್ಯವಿದ್ದರೆ ಸರ್ಕಾರದಿಂದ ಹೆಚ್ಚಿನ ಹಣವನ್ನು ಕೊಡಿಸಲು ತಾವು ಸಿದ್ಧ,  ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ನಾನು ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದರು.
ಕುಡಿಯುವ ನೀರಿನ ಸಮಸ್ಯೆ, ಅದರಲ್ಲೂ ಗಂಭೀರವಾಗಿ ಫ್ಲೋರೈಡ್ ಮಿಶ್ರಿತ ನೀರಿನ ತೊಂದರೆಯಿಂದ ಮುಕ್ತರಾಗಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನು ಪಡೆದರು.
ಜಿಪಂ ಇಇ ಸುಂದರಾಜ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಒಂದು ವೇಳೆ ದೊರೆತರೂ ಒಂದೇ ತಿಂಗಳಲ್ಲಿ ನೀರು ಬತ್ತಿ ಹೋಗುತ್ತಿರುವುದರಿಂದ ನೀರಿನ ಹಾಹಾಕಾರವನ್ನು ದೂರ ಮಾಡಲು ಸಾಧ್ಯವಾಗುತ್ತಿಲ್ಲ. ಫ್ಲೋರೈಡ್ ನ್ನೀರಿನ ಸಮಸ್ಯೆಗಾಗಿ 80 ನೀರು ಶುದ್ಧ್ದೀಕರಣ ಘಟಕಗಳನ್ನು 8-10 ಲಕ್ಷ ರು. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಇದೀಗ ಹೊಸದಾಗಿ 25 ಘಟಕಗಳ ಸ್ಥಾಪನೆಗೆ ಮಂಜೂರಾತಿ ಸಿಕ್ಕಿದೆ ಎಂದರು.
ಇದಕ್ಕೆ ಧ್ವನಿಗೂಢಿಸಿದ ಶಾಸಕ ಕೆ. ಸುಧಾಕರ್, ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಮತ್ತು ಗೌರಿಬಿದನೂರು ತಾಪಂ ಅಧ್ಯಕ್ಷರು, ಕೊಳವೆ ಬಾವಿಗಳನ್ನು ಕೊರೆಸಿದ ತಕ್ಷಣ ಪಂಪ್ ಮೋಟಾರ್ ಅಳವಡಿಸಿ ಸರ್ವೀಸ್ ಕೊಡಿಸುವ ಕೆಲಸವಾಗುತ್ತಿಲ್ಲ.
 ಕಳೆದ ಒಂದು ವರ್ಷದ ಹಿಂದೆ ಕೊರೆಸಿದ ಕೊಳವೆ ಬಾವಿಗಳನ್ನು ಹಾಗೆಯೇ ಬಿಡಲಾಗಿದೆ. ಈ ಮೂಲಕ ವ್ಯರ್ಥವಾಗಿ ನೀರು ಬತ್ತಿ ಹೋಗಿ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದರು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಟ್ಯಾಂಕರುಗಳ ಮೂಲಕ ನೀರನ್ನು ಸರಬರಾಜು ಮಾಡಬೇಕು.
 ತಹಸೀಲ್ದಾರ್ ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಂದ ಅನುಮೋದನೆಯನ್ನು ಪಡೆದು ನೀರು ಸರಬರಾಜುದಾರರಿಗೆ ಹಣವನ್ನು ಬಿಡುಗಡೆ ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕರ ಅಸಮಾಧಾನ: ಜಿಲ್ಲೆಯಲ್ಲಿ 30 ಸಾವಿರ ಶೌಚಾಲಯಗಳ ನಿರ್ಮಾಣ ಗುರಿಯನ್ನು ಹಾಕಿಕೊಂಡಿದ್ದು ನರ್ಬಾಡಿನಲ್ಲಿ 20 ಸಾವಿರ ಗುರಿಗೆ 15,626 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ಉಳಿದಂತೆ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿವೆ ಎಂದು ಜಿ.ಪಂ.ಯೋಜನಾ ನಿರ್ದೇಶಕರು ಮತ್ತು ಸಿಇಒ ತಿಳಿಸುತ್ತಿದ್ದಂತೆ ಶಾಸಕ ಕೆ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಸಭೆಯನ್ನು ತಾವು ನಡೆಸಿದಾಗ ಅಧಿಕಾರಿಗಳಿಗೆ ಗುರಿ, ಸಾಧನೆಯಲ್ಲಿ ಗೊಂದಲವಿರುವುದು ತಿಳಿದು ಬಂತು.ಇವರಲ್ಲಿಯೇ ಮಾಹಿತಿ ಇಲ್ಲದಿರುವಾಗ ಇನ್ನೂ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣದ ಬಗ್ಗೆ ಹೇಗೆ ತಿಳಿಯುತ್ತದೆ ಎಂದ ಅವರು,ದಲಿತರ ಕಾಲೋನಿಯಲ್ಲಿ ಅನೇಕರ ಮನೆಗಳು ಚಿಕ್ಕದಾಗಿದ್ದು ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ತೊಂದರೆಯಾಗುತ್ತಿದೆ.
 ಇನ್ನೂ ರಸ್ತೆಗಳ ಸಮಸ್ಯೆಗಳಿಂದ ಫಿಟ್ ಗಳನ್ನೂ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕಾಗಿದೆ ಎಂದರು.
ಹಿಂದಿನ ಸಭೆಯಲ್ಲಿ ಶಾಲೆಗಳ ಮೈದಾನ ಒತ್ತುವರಿ ತೆರವುಗೊಳಿಸಲು ತಿಳಿಸಲಾಗಿತ್ತು. ಆದರೂ ಇದುವರೆಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ಇನ್ನೂ 20 ದಿನಗಳೊಳಗೆ ಕ್ರಮ ಕೈಗೊಂಡಿರುವ ಬಗ್ಗೆ ವರದಿಯನ್ನು ನೀಡಬೇಕೆಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮಾ ಉಪಸ್ಥಿತರಿದ್ದರು.




ಪಹಣಿಗೆ ಆಗ್ರಹಿಸಿ ಪ್ರತಿಭಟನೆ
ಬಂಗಾರಪೇಟೆ: ದಲಿತರ ಜಮೀನಿಗೆ ಸಂಬಂಧಿಸಿದಂತೆ ಸ್ಕೆಚ್ ಮತ್ತು ಪಹಣಿ ನೀಡುವಂತೆ ಹಲವು ಬಾರಿ ಮನವಿ ಮಾಡಿದರು ನೀಡದೆ ವಿನಾಕಾರಣ ಅಲೆಸುತ್ತಿರುವ ತಾಲೂಕು ಆಡಳಿತ ಕಾರ್ಯವೈಖರಿ ಖಂಡಿಸಿ ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಗ್ರಾಹಕರ ಹಕ್ಕುಗಳ ಸಂರಕ್ಷಣಾ ಸಂಸ್ಥೆವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ತಾಲೂಕಿನ ಚಿನ್ನಕೋಟೆ ಗ್ರಾಪಂ ವ್ಯಾಪ್ತಿಯ ಕತ್ತಿಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವರಿಗೆ ಸೇರಿದ ಜಮೀನಿದ್ದು 1945ರಿಂದ ವೆಂಕಟೇಶಪ್ಪ ಸ್ವಾದೀನದಲ್ಲಿದೆ. ಇಸಿ ಬರುತ್ತಿದೆ ಆದರೆ ಜಮೀನು ಮತ್ತೊಬ್ಬರು ನಮ್ಮದು ಎಂದು ಮಾರಾಟ ಮಾಡಿರುತ್ತಾರೆ, ಸದರಿ ಜಮೀನಿಗೆ ಕಂದಾಯ ಇಲಾಖೆ 1-ಎ, 1-ಬಿ, ಮತ್ತು 1-ಸಿ ಎಂದು ದಾಖಲೆ ಸೃಷ್ಟಿಸಿ ಬೋಗಸ್ ಮಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನೆಯಲ್ಲಿ ಆರ್. ಗಣೇಶ್, ಗೋವಿಂದರಾಜು, ಮಹೇಂದ್ರಕುಮಾರ್, ಪ್ರೇಮಕುಮಾರ್, ರಾಜು ಇದ್ದರು.



ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ
ಟೇಕಲ್: ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗಣಿಗಾನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ. ಪಿಳ್ಳಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಅವರನ್ನು ಟೇಕಲ್ ಜಿಪಂ ಸದಸ್ಯೆ ರತ್ನಮ್ಮನಂಜೇಗೌಡ ಅಭಿನಂದಿಸಿದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿದರು. ಪಿ.ಟಿ. ನಾಗರಾಜ್, ಎಂ. ದೇವರಾಜ್, ತಿಮ್ಮರಾಯಪ್ಪ, ಅಶ್ವಥಪ್ಪ, ಸೊಸೈಟಿ ಮುನಿನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.