ಕೋಲಾರ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ದೂರು

Published On :

ಕೋಲಾರ: ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರಿದ ಕೋಲಾರದಿಂದ ಮುಳಬಾಗಿಲು ತಾಲೂಕಿನ ಗಡಿ ಭಾಗದ ನಂಗಲಿಯವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಕಾರಿಗಳಿಂದಾಗಿ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಇನ್ನು ಎರಡು ತಿಂಗಳಲ್ಲಿ ನಿವಾರಣೆ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕಾಲುವೆ ದುರಸ್ತಿ, ಶೌಚಾಲಯ ಹಾಗೂ ವಿಶ್ರಾಂತಿ ಗೃಹ ಹಾಗೂ ಸರ್ವೀಸ್ ರಸ್ತೆ ಕಾಮಗಾರಿಗಳಲ್ಲಿ ಆಗಿರುವ ಲೋಪಗಳ ಬಗ್ಗೆ ಜನತೆ ಸಾಕಷ್ಟು ಆರೋಪಗಳನ್ನು ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಲೋಪ ಸರಿಪಡಿಸಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ಜನರು ಹೇಳಿದ್ದು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಮಾಡಿಕೊಟ್ಟಿಲ್ಲ. ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿ ಸಿಗುವ ಕೆರೆಗಳಿಗೆ ಮಳೆ ನೀರು ಸರಾಗವಾಗಿ ಹರಿದು ಬರುವುದಕ್ಕೆ ಪೂರ್ವಿಕರು ನಿರ್ಮಿಸಿದ್ದ ರಾಜಕಾಲುವೆಗಳನ್ನು ಬಂದ್ ಮಾಡಲಾಗಿದೆ, ಒಳಚರಂಡಿಗಳನ್ನು ಮುಚ್ಚಲಾಗಿದೆ ಎಂದು ನಗರಸಭೆ ಸದಸ್ಯ ಮುರಳಿಗೌಡ ಸೇರಿದಂತೆ ಸಭೆಯಲ್ಲಿದ್ದ ಅನೇಕರು ದೂರಿದರು.
ಕೋಲಾರ ನಗರಕ್ಕೆ ಕುಡಿಯುವ ನೀರಿನ ಆಸರೆಯಾಗಿರುವ ಮಡೇರಹಳ್ಳಿ, ಅಮ್ಮೇರಹಳ್ಳಿಯ ಕೆರೆಗಳಿಗೆ ಅಂತರಗಂಗೆಯ ಬೆಟ್ಟದಿಂದ ಹರಿದು ಬರುವ ಮಳೆ ನೀರು ಕೆರೆಗಳಿಗೆ ಸೇರದಂತಾಗಿದೆ. ರಾಜಕಾಲುವೆಗಳನ್ನು ಹೆದ್ದಾರಿ ಕಾಮಗಾರಿಗಾಗಿ ಮುಚ್ಚಲಾಗಿರುವುದರಿಂದ ಕೆರೆಗಳಿಗೆ ನೀರು ಬರುತ್ತಿಲ್ಲ ಎಂದು ಅವರು ಆರೋಪಿಸಿದರು.
ನಗರದ ಹೊರವಲಯದ ಕೊಂಡರಾಜನಹಳ್ಳಿಯಿಂದ ಮಾಲೂರು ರಸ್ತೆಯವರೆಗೂ ಸರ್ವೀಸ್ ರಸ್ತೆಯನ್ನು ಸಮರ್ಪಕವಾಗಿ ನಿರ್ಮಿಸಬೇಕು, ನಗರ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳು ಆಳವಡಿಕೆ ಮಾಡಬೇಕು, ಅಂತರಗಂಗೆ ಬೆಟ್ಟದ ಮೇಲಿನಿಂದ ಮಳೆಗಾಲದಲ್ಲಿ ಹರಿಯುವ ನೀರು ಸರಾಗವಾಗಿ ರಾಜಕಾಲುವೆಗಳಲ್ಲಿ ಹರಿದು ಕೆರೆ ಸೇರುವಂತೆ ಮಾಡಬೇಕೆಂದುಆಗ್ರಹಿಸಿದರು.
ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾದಂತಹ ಶೌಚಾಲಯ, ವಿಶಾಂತ್ರಿ ಗೃಹ, ವಿದ್ಯುತತ್ ದೀಪಗಳನ್ನು ಅಳವಡಿಸಿದೆ ಟೋಲ್ನ್ನು ಮಾತ್ರ ಕಡ್ಡಾಯವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ತಮಿಳುನಾಡು ಮಾದರಿಯಲ್ಲಿ ಹೆದ್ದಾರಿಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು, ರಸ್ತೆ ಬದಿಯಲ್ಲಿ ಸಾಲು ಮರಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದವರ ಎಡವಟ್ಟಿನಿಂದಾಗಿ ಕೆರೆಗಳಲ್ಲಿ ನೀರು ಇಲ್ಲದಂತಾಗಿದೆ, ಕೂಡಲೇ ಮುಚ್ಚಿಹಾಕಿರುವ ರಾಜಕಾಲುವೆಗಳನ್ನು ದುರಸ್ತಿಗೊಳಿಸಬೇಕು, ಸರ್ಕಾರದ ಜತೆ ಮಾಡಿಕೊಂಡಿರುವ ಒಪ್ಪಂದಂತೆ ಪೂರ್ಣ ಪ್ರಮಾಣದಲ್ಲಿ ಹೆದ್ದಾರಿ ನಿರ್ಮಿಸುವವರೆಗೆ ಜನರಿಂದ ಟೋಲ್ನ್ನು ಪಡೆಯುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಅಪ್ರೋಜ್ ಪಾಷ, ಟಮಕ ವೆಂಕಟೇಶ್ ಮಾತನಾಡಿ, ತಮ್ಮ ಅಭಿಪ್ರಾಯ ಹಾಗೂ ಜನತೆಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಸಭೆಯಲ್ಲಿ ಕೇಳಿ ಬಂದ ದೂರು-ದುಮ್ಮಗಳನ್ನು ಅಲಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಎರಡು ತಿಂಗಳಲ್ಲಿ ಪ್ರಮುಖ ಸಮಸ್ಯೆಗಳನ್ನು   ನಿವಾರಿಸಬೇಕು. ಅದ್ಯತೆ ಮೇರೆಗೆ ಕಾಮಗಾರಿಳನ್ನು ಕೈಗೆತ್ತಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾವು ಕಾಮಗಾರಿಗಳ ಪರಿಶೀಲನೆ ಮಾಡುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು ಜನತೆಯಿಂದ ಪದೆ ಪದೆ ದೂರುಗಳು ಬರದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಡಿಸಿ ಗರಂ: ಸಾರ್ವಜನಿಕರಿಂದ ಬಂದಂತಹ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಯೋಜನಾ ನಿರ್ದೇಶಕ ಪ್ರಶಾಂತ ಜನರಿಂದ ಕೇಳಿಬರುವ ಸಮಸ್ಯೆಗನ್ನು ನಿವಾರಣೆ ಮಾಡಲು ಆಗುತ್ತಿದೆಯೋ ಇಲ್ಲವೋ ಎಂದು ಗುತ್ತಿಗೆದಾರರನ್ನು ಕೇಳಬೇಕಾಗುತ್ತದೆ ಎಂದಾಗ ಜಿಲ್ಲಾಧಿಕಾರಿ ರವಿ ಸಿಡಿಮಿಡಿಗೊಂಡು, ಗುತ್ತಿಗೆದಾರರನ್ನು ಕೇಳಬೇಕಾದರೆ ಈ ಸಭೆಯ ಅವಶ್ಯಕತೆ ಇಲ್ಲ. ಗುತ್ತಿಗೆದಾರರಿಗೆ ಹೇಳಿ ಕೆಲಸ ನಿಟ್ಟಾಗಿ ಮಾಡಿಸಲು ಆಗದಿದ್ದ ಮೇಲೆ ನೀನೇಕೆ ಈ ಸಭೆಗೆ ಬಂದೆ ಎಂದು ತರಾಟೆಗೆ ತೆಗೆದುಕೊಂಡರು.
ಜನರಿಂದ ಸಾಕಷ್ಟು ದೂರುಗಳು ಬಂದಿರುವುದರಿಂದ ಸಮಸ್ಯೆ ನಿವಾರಣೆಗಾಗಿ ಸಭೆ ಕರೆದಿದ್ದೇನೆ. ಕಾಟಾಚಾರಕ್ಕೆ ಸಭೆ ನಡೆಸುತ್ತಿಲ್ಲ,ನೀವು ಸರಿಯಾಗಿ ಕೆಲಸ ಮಾಡಿದ್ದರೆ ನಾನು ನನ್ನ ಕೆಲಸ ಬಿಟ್ಟು ಈ ಸಭೆ ಏಕೆ ಮಾಡಬೇಕಾಗಿತ್ತು ಎಂದು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಗರಂ ಆಗಿರುವುದನ್ನು ಅರಿತ ಅಧಿಕಾರಿಗಳು ಸಮಾಧಾನ ಪಡಿಸಿ,ಜನತೆಯ ಸಮಸ್ಯೆ ನಿವಾರಣೆ ಮಾಡಲು ಆಸಕ್ತಿ ತೋರುವುದಾಗಿ ಭರವಸೆ ನೀಡಿದ ಬಳಿಕ ಸಭೆ ಮುಂದುವರೆಯಿತು.
ಮುಳಬಾಗಲು ಮುಖ್ಯ ರಸ್ತೆಗೆ ಸೇರುವ ಕೆಜಿಎಫ್, ಬೇತಮಂಗಲ, ತಾಯಲೂರು, ಕೆ.ಬೈಯಪ್ಪಲ್ಲಿ, ವಡ್ಡಹಳ್ಳಿ ಬಳಿ ಮೇಲ್ಸುತೆವೆ ನಿರ್ಮಾಣ ಮಾಡಬೇಕು, ಈ ಬಗ್ಗೆ ನ್ಯಾಯಾಧೀಶರು ದೂರು ನೀಡಿದ್ದಾರೆ. ಜತೆಗೆ ಹೆದ್ದಾರಿಯಲ್ಲಿ ಆಗಬೇಕಾಗಿರುವ ಪ್ರಮುಖ ಕಾಮಗಾರಿಗಳನ್ನು ಶೀಘ್ರ ಮುಗಿಸದಿದ್ದರೆ ಕಾನೂನು ಕ್ರಮಕ್ಕೆ ನ್ಯಾಯಾಧೀಶರು ಸೂಚಿಸಿದ್ದಾರೆಂದು ಜಿಲ್ಲಾಧಿಕಾರಿ ಅಧಿಕಾರಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸುರೇಂದ್ರ ಕುಮಾರ್, ಲ್ಯಾಂಕೋ ಮ್ಯಾನೇಜರ್ ಶ್ರೀಧರ್, ಲೋಕೋಪಯೋಗಿ ಇಲಾಖೆಯ ಮುನಿ ಆಂಜಿನಪ್ಪ, ನಗರಸಭೆ ಆಯುಕ್ತ ಜಗಧೀಶ್, ಯೋಜನಾ ನಿರ್ದೇಶಕಿ ಸರ್ವರ್ ಮಾರ್ಜೆಂಟ್ ಇನ್ನಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.