ನಂದಿಯಲ್ಲಿ ಮಹಾ ಶಿವರಾತ್ರಿ ವಿಶೇಷ
ಚಿಕ್ಕಬಳ್ಳಾಪುರ: ತಾಲೂಕಿನ ನಂದಿಯಲ್ಲಿ ಪ್ರತಿ ವರ್ಷದಂತೆ ಮಹಾಶಿವರಾತ್ರಿ ಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಭಕ್ತರ ದಂಡು ನಂದಿಯತ್ತ ಮುಖ ಮಾಡಿದೆ.
ಪುರಾಣ ಪ್ರಸಿದ್ಧ ನಂದಿಯ ಭೋಗನಂದೀಶ್ವರ ಸ್ವಾಮಿ ದೇವಾಲಯ ಮತ್ತು ನಂದಿ ಗಿರಿಧಾಮದ ಯೋಗನಂದೀಶ್ವರ ಸ್ವಾಮಿ ದೇವಾಲಯವು ಅನೇಕ ಶತಮಾನಗಳ ಇತಿಹಾಸವನ್ನು ಹೊಂದಿ ತನ್ನದೇ ಹೆಸರನ್ನು ಪಡೆದುಕೊಂಡಿದೆ. ಇಲ್ಲಿನ ಆಲಯಗಳಲ್ಲಿ ಮೂಢಿ ಬಂದಿರುವ ಶಿಲ್ಪಕಲೆಯು ಅರಸರುಗಳ ಕೊಡುಗೆಗಳಲ್ಲೊಂದಾಗಿದ್ದು ಕಲ್ಲಿನಲ್ಲಿ ಆಕರ್ಷಕವಾಗಿ ಕೆತ್ತಿರುವ ಕಲೆಯು ಎಂತಹವರನ್ನೂ ಸಹ ಮಂತ್ರ ಮುಗ್ಧರನ್ನಾಗಿಸುತ್ತದೆ.
ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಇಲ್ಲಿ ಮಹಾಶಿವರಾತ್ರಿ ಹಬ್ಬವನ್ನು ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಬ್ಬಕ್ಕಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯ ಮಾತ್ರವಲ್ಲದೇ ನೆರೆಯ ಆಂಧ್ರದಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಶಿವರಾತ್ರಿ ಜಾಗರಣೆ ಮಾಡುತ್ತಾರೆ. ಈ ಬಾರಿಯು ಸಹ ಮುಜರಾಯಿ ಇಲಾಖೆ ಮತ್ತು ಜಿಲ್ಲಾಡಳಿತ, ವಿವಿಧ ಭಕ್ತ ಮಂಡಳಿಗಳು ಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಭಕ್ತಾದಿಗಳಿಗೆ ತೊಂದರೆಯಾಗದಂತೆ ಅಗತ್ಯವಿರುವ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಬಳ್ಳಾಪುರ ವಿಭಾಗದ ವತಿಯಿಂದ 150 ವಿಶೇಷ ವಾಹನಗಳನ್ನು ನಂದಿ ಮತ್ತು ಗಿರಿಧಾಮಕ್ಕೆ ಭಕ್ತಾದಿಗಳು ಹೋಗಿ ಬರಲು ಒದಗಿಸಲಾಗಿದೆ.
ಗುರುವಾರ ನಂದಿಯ ಭೋಗನಂದೀಶ್ವರ ಸ್ವಾಮಿ ಮತ್ತು ಯೋಗನಂದೀಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಸೇರಿದಂತೆ ಧಾರ್ಮಿಕ ವಿವಿಧ ಕಾರ್ಯಕ್ರಮ ಕೈಗೊಳ್ಳಲಾಗಿದ್ದು ಮುಂಜಾನೆಯಿಂದಲೇ ಭಕ್ತರು ಆಗಮಿಸಲಿದ್ದಾರೆ. ಜಾಗರಣೆಗಾಗಿ ಹರಿಕತೆ, ನಾಟಕ, ಭಜನಾ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳಿಗಾಗಿ ದಾನಿಗಳು ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ, ಹೆಸರುಬೇಳೆ ವಿತರಣೆ ವ್ಯವಸ್ಥೆ ಕೈಗೊಂಡಿದ್ದಾರೆ.
ದನಗಳ ಜಾತ್ರೆ ನಿಷೇಧ: ಕಾಲುಬಾಯಿ ಜ್ವರ ಜಾನುವಾರು ಬಲಿ ತೆಗೆದುಕೊಂಡು ನಷ್ಟವನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ ದನಗಳ ಸಂತೆಯನ್ನು ನಿಷೇಧಿಸಲಾಗಿದೆ. ಇದರ ನಡುವೆಯೂ ದನಗಳನ್ನು ಜಾತ್ರೆಗೆ ತರುವ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದಲ್ಲದೆ, ಕಾಲುಬಾಯಿ ಜ್ವರ ಹರಡಲು ಕಾರಣವಾಗುವವರಿಗೆ ದಂಡವನ್ನು ಹಾಕಲಾಗುತ್ತದೆ ಎಂದು ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

