ಕಳೆಗುಂದಿದ ಬುಡಕಟ್ಟು ಉತ್ಸವ
ಕೋಲಾರ: ಪ್ರೇಕ್ಷಕರ ಕೊರತೆಯಿಂದಾಗಿ ನಗರದಲ್ಲಿ ಬುಧವಾರ ರಾತ್ರಿ ನಡೆದ ಬುಡಕಟ್ಟು ಉತ್ಸವ ಕಳೆ ಗುಂದಿತು.
ಇದಕ್ಕೆ ಮುಂಚೆ ಎರಡು ದಿನಗಳ ಕಾಲ ನಗರದಲ್ಲಿ ನಡೆದ ರಾಜ್ಯಮಟ್ಟದ ಜನಪರ ಉತ್ಸವಕ್ಕೂ ತಳ ಸಮುದಾಯದವರು ತೋರಿದ ನಿರ್ಲಕ್ಷ್ಯ, ನಿರಾಸಕ್ತಿಯಿಂದಾಗಿ ನೆಲ ದೇವತೆಗಳ ಹೆಜ್ಜೆಗಳ ಪ್ರತಿಪಾದಕರಿಂದಲೇ ಟೀಕೆಗೆ ಗುರಿಯಾಗಿತ್ತು.
ಬುಡಕಟ್ಟು ಉತ್ಸವವನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ವಾರ್ತಾ ಇಲಾಖೆ, ಬುಡಕಟ್ಟು ಜನಾಂಗ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಉತ್ಸವದಲ್ಲಿ ಕಾರವಾರದ ಸಿದ್ದಿ ಸಮಾಜಕ್ಕೆ ಸೇರಿದ ಡಮಾಮಿ ಸಂಸ್ಕೃತಿಯನ್ನು ಪಾಲಿಸುತ್ತಿರುವ ಕಲಾವಿದರು ಜಿಂಕೆ ಚರ್ಮದಿಂದ ಮಾಡಿರುವ ವ್ಯಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದರು.
ಈ ಜನಾಂಗ ಪೋರ್ಚಿಗೀಸರ ಕಾಲದಲ್ಲಿ ಭಾರತಕ್ಕೆ ಬಂದಿದ್ದು, ಕಾರಣಾಂತರಗಳಿಂದ ಕೆಲವರು ಇಲ್ಲೇ ಉಳಿದುಕೊಂಡು ಬುಡಕಟ್ಟು ಪ್ರದೇಶದಲ್ಲಿ ತಮ್ಮ ಜೀವನ ಮುಂದುವರೆಸಿದ್ದಾರೆ. ಮತ್ತೊಂದು ಬುಡಕಟ್ಟು ಜನಾಂಗಕ್ಕೆ ಸೇರಿದ ಜೇನು ಕುರುಬರು ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಬಳಿಯ ನಾಗರಹೊಳೆಯಿಂದ ಬಂದಿದ್ದ ಕಲಾವಿದರು ಸುಗ್ಗಿ ಕಾಲದಲ್ಲಿನ ನೃತ್ಯವನ್ನು ತಮ್ಮದೇ ವಿಶಿಷ್ಠ ಶೈಲಿಯಲ್ಲಿ ಪ್ರದರ್ಶಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಬಂದಿದ್ದ ಮರಾಠಿ ಕಲಾವಿದರು ತಮ್ಮ ಕುಲ ದೇವತೆ ಅಂಬಾಭಾವನಿಯ ಸ್ಮರಣೆಯೊಂದಿಗೆ ಹಾಡು ಮತ್ತು ನೃತ್ಯವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂರು ತಂಡಗಳ 35 ಕಲಾವಿದರಿಗೆ ತಲಾ 10 ಸಾವಿರ ರು. ಗೌರವ ಧನ ನೀಡಲಾಯಿತು. ಉತ್ಸವದ ಉದ್ಘಾಟನೆಯನ್ನು ಚಲನಚಿತ್ರ ನಿರ್ದೇಶಕ ಶಿವರುದ್ರಯ್ಯ ಉದ್ಘಾಟಿಸಿದರು. ಬೆಂಗಳೂರು ಗ್ರಾಮಾಂತರ ವಾರ್ತಾ ಇಲಾಖೆಯ ಉಪ ನಿರ್ದೇಶಕಿ ಸರಸ್ವತಿ, ಕೋಲಾರ ಜಿಲ್ಲಾ ವಾರ್ತಾಧಿಕಾರಿ ರಂಗಾರೆಡ್ಡಿ ಇದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಸಂಘಟಕರಿಗೆ ಕಾರ್ಯಕ್ರಮ ಯಶಸ್ವಿಗೊಳಿಸುವುದು ಸವಾಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

