ಆಮೆಗತಿ ಆಡಳಿತಕ್ಕೆ ಗರಂ ಆದ ಕಾರ್ಯದರ್ಶಿ
ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ಸಮಸ್ಯೆಯಿಂದ ನಲುಗುತ್ತಿರುವ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಜಿಪಂ ಮತ್ತು ಜಿಲ್ಲಾಡಳಿತ ನಿಧಾನಗತಿಯಲ್ಲಿ ಕೈಗೊಳ್ಳುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಲಾಂಬಿಕಾ ಅಸಮಾಧಾನ ವ್ಯಕ್ತಪಡಿಸಿ, ಇನ್ನು ಮುಂದಾದರೂ ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮುಂದಾಗಬೇಕೆಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ, ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೆಲ ಸಲಹೆ ನೀಡಿದರು. ರಾಜ್ಯ ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಸಾಧಿಸಬೇಕಾಗಿತ್ತು. ಆದರೆ, ಸರ್ಕಾರದ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿದ್ದರೂ ಅಭಿವೃದ್ಧಿಗೆ ಪೂರಕ ಕೆಲಸಗಳು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಅನುದಾನವನ್ನು ಸದ್ಬಳಕೆ ಮಾಡಿ ಅಭಿವೃದ್ಧಿ ಸಾಧಿಸಬೇಕೆಂದರು.
ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಸಂಬಂಧಿಸಿ ಮಾಸ್ಟರ್ ಪ್ಲಾನ್ ತಯಾರಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರೂ ಈವರೆಗೂ ತಮಗೆ ಕೊಟ್ಟಿಲ್ಲ. ಪ್ಲಾನ್ ತಯಾರಿಸಲಾಗುತ್ತಿದೆ ಎಂದೇಳಿಕೊಂಡೇ ಕಾಲ ತಳ್ಳಲಾಗುತ್ತಿದೆ. ಜಿಪಂ 15 ಅಂಶಗಳ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸದೇ ಇರುವುದನ್ನು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅಸಮಾಧಾನದಲ್ಲಿಯೇ ತಮ್ಮ ಗಮನಕ್ಕೆ ತಂದಿದ್ದಾರೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕೆಂದರು.
ಗೌರಿಬಿದನೂರು, ಚಿಂತಾಮಣಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಪ್ರದೇಶಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಎಲ್ಲಾ ರೀತಿಯಲ್ಲಿ ಸಮರ್ಪಕವಾಗಿದ್ದರೂ ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಏಕೆ ನಿರ್ಲಕ್ಷ್ಯ ವಹಿಸಲಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಅನುಗುಣವಾಗಿ ಮೂಲ ಸೌಕರ್ಯ ಒದಗಿಸಿದಾಗ ಉದ್ಯಮಿಗಳು ಹೆಚ್ಚಿನ ಬಂಡವಾಳ ಹಾಕಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಾರೆ. ಆಗ ಉದ್ಯೋಗಾವಕಾಶಗಳು ಹೆಚ್ಚಿಗೆ ದೊರೆತು ಇಲ್ಲಿನ ಜನರ ಜೀವನ ಸುಧಾರಿಸುತ್ತದೆ. ಜಿಲ್ಲಾ ಕೈಗಾರಿಕಾ ಇಲಾಖೆಯ ಅಧಿಕಾರಿ ಅಮರೇಶ್ ಅವರಿಗೆ ದೂರವಾಣಿ ಮೂಲಕ ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಭೂಮಿಯನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಯಾರನ್ನು ಉದ್ಧಾರ ಮಾಡೋಕೆ?: ಜಿಲ್ಲೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿ 1500-1800 ಅಡಿ ಅಳ ಕೊರೆಸಿದರೂ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿಗಳನ್ನು ಕೊರೆಯಲು ಮತ್ತು ಪಂಪುಮೋಟಾರುಗಳನ್ನು ಅಳವಡಿಸುವ ಕೆಲಸಗಳಿಗೆ 45 ಕೋಟಿ ರು.ಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವವಹಣಾಧಿಕಾರಿ ನೀಲಾ ಮಂಜುನಾಥ್, ಲೋಕೋಪಯೋಗಿ ಇಲಾಖೆಯ ಸುಂದರರಾಜ್ ತಿಳಿಸುತ್ತಿದ್ದಂತೆ ಗರಂ ಆದರು.
ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ. ಹಾಗೆಯೇ ಬತ್ತಿ ಹೋಗಿ ನೀರು ಸಿಗದಿರುವಾಗ, ಜನರಿಗೆ ಅನುಕೂಲವಾಗದಿರುವಾಗ 45 ಕೋಟಿ ರು.ಗಳನ್ನು ತೆಗೆದುಕೊಂಡು ಮತ್ತೆ ಕೊಳವೆ ಬಾವಿಗಳನ್ನು ಕೊರೆಸಿ ಏನು ಪ್ರಯೋಜನ ಯಾರನ್ನು ಉದ್ಧಾರ ಮಾಡೋಕೆ ಕೊಳವೆ ಬಾವಿಗಳನ್ನು ಕೊರೆಸೋದು ನೀರಿಲ್ಲದೇಪಂಪ್ ಮೋಟಾರುಗಳನ್ನು ಅಳವಡಿಸಿ ಹಣವನ್ನು ವ್ಯರ್ಥ ಮಾಡುವುದಕ್ಕೆ ಕೊಡಬೇಕಾ ಎಂದು ಪ್ರಶ್ನಿಸಿದರು.
ತೀವ್ರ ಅಸಮಾಧಾನ: ಸರ್ಕಾರದ ಅನುದಾನದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲು 1 ತಿಂಗಳಾವಧಿ ತೆಗೆದುಕೊಳ್ಳುತ್ತಿರುವುದಕ್ಕೆ ಮತ್ತು ಕೆರೆಗಳ ಪುನಶ್ಚೇತನ ಕೆಲಸದಲ್ಲಿ ನಿರ್ಲಕ್ಷ್ಯ ತೋರಿರುವುದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 93 ಕೆರೆಗಳಿಗೆ 54 ಕೆರೆಗಳ ಪುನಶ್ಚೇತನ ಕೆಲಸ ನಡೆಯುತ್ತಿರುವುದು ಕಡಿಮೆ ಆಗಿದೆ ಎಂದ ಸಂದರ್ಭದಲ್ಲಿ, ಕೆಲಸಗಾರರು ಬರುತ್ತಿಲ್ಲ ಎಂಬ ನೆಪ ಹೇಳಿದ ಗೌರಿಬಿದನೂರು ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ಅಮಾನತ್ ಮಾಡುವ ಎಚ್ಚರಿಕೆಯನ್ನು ನೀಡಿದರು.
ಬಿಪಿಎಲ್ ಪಡಿತರ ಚೀಟಿಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಗ್ರಾಪಂ ಮಟ್ಟದಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಿಸಬೇಕು. ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಅನರ್ಹರು ಪಡಿತರ ಚೀಟಿಯನ್ನು ಪಡೆಯದಂತೆ ನೋಡಿಕೊಳ್ಳಬೇಕು. ಪಡಿತರವನ್ನು ನೀಡದ ನ್ಯಾಯ ಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

