ಕೋಲಾರ

ಭಿಕ್ಷಾಟನೆ, ಬಾಲ ಕಾರ್ಮಿಕತೆ ನಿವಾರಣೆ ಎಲ್ಲರ ಹೊಣೆ

Published On :

ಕನ್ನಡಪ್ರಭ ವಾರ್ತೆ     ಕೋಲಾರ     ಫೆ.28
ಸಮಾಜದಲ್ಲಿ ಕಾಡುತ್ತಿರುವ ಬಾಲಕಾರ್ಮಿಕತೆ, ಭಿಕ್ಷಾಟನೆ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಮಕ್ಕಳ ಮಾರಾಟ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪೋಕ್ಸೋ ಕಾಯ್ದೆ, ಬಿಕ್ಷಾಟನೆ ಮತ್ತು ಬಾಲಕಾರ್ಮಿಕತೆ ನಿರ್ಮೂಲನೆ ಕುರಿತು ಬೆಂಗಳೂರು ವಿಭಾಗ ಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವಿನ ಸ್ವಾತಂತ್ರ್ಯಕ್ಕೆ ಹಾಗೂ ಹಕ್ಕಿಗೆ ಧಕ್ಕೆ ಬಾರದ ಹಾಗೆ ಸಾಮಾನ್ಯ ಪರಿಸರದಲ್ಲಿ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಮಕ್ಕಳಿಗೆ ರೂಪಿಸಬೇಕಾಗಿದೆ, ಮಕ್ಕಳ ಹಕ್ಕುಗಳಿಗೆ ಚ್ಯುತಿ ಆಗಬಾರದೆಂಬ ಉದ್ದೇಶದಿಂದ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅಧಿಕಾರಿಗಳು ಸಾರ್ವಜನಿಕರ ಸಹಕಾರದಿಂದ ಸಾಮಾಜಿಕ ಪೀಡುಗಳನ್ನು ನಿವಾರಣೆ ಮಾಡಬೇಕೆಂದರು.
ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿರುವುದರಿಂದ ಮಗುವಿನ ಪಾಲನೆ, ಪೋಷಣೆ ಹಾಗೂ ರಕ್ಷಣೆಗೆ ಪ್ರತಿಯೊಬ್ಬರು ಕಾಳಜಿ ವಹಿಸಿದಾಗ ಮಾತ್ರ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಶೋಷಣೆ ತಪ್ಪಿಸಬಹುದಾಗಿದ್ದು ಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸಲು ಅಧಿಕಾರಿಗಳು ವಿಶೇಷ ತರಬೇತಿ ಪಡೆಯುವುದು ಅಗತ್ಯವೆಂದರು.
ಜಿಲ್ಲಾ ರಕ್ಷಣಾಧಿಕಾರಿ ಡಾ. ರಾಮ್‌ನಿವಾಸ್ ಸವಾಸ್ ಮಾತನಾಡಿ, ಮಕ್ಕಳು ಈ ದೇಶದ ಆಸ್ತಿಯಾಗಿರುವುದರಿಂದ ಇವರ ಹಕ್ಕುಗಳಿಗೆ ಚ್ಯುತಿ ಬಾರದಂತೆ ಸಮಾಜ ಮತ್ತು ಪೋಷಕರು ಕಾರ್ಯನಿರ್ವಹಿಸಬೇಕಾಗಿದೆ ಹಾಗೂ ಕಾನೂನುಗಳನ್ನು ಅರಿತು ಸರ್ಕಾರದ ಸದಾಶಯಗಳನ್ನು ಸಕಾರಗೊಳಿಸಬೇಕೆಂದರು.
ಮಕ್ಕಳ ರಕ್ಷಣಾ ಸೊಸೈಟಿಯ ಜಂಟಿ ನಿರ್ದೇಶಕಿ ಶಶಿಕಲಾ ಶೆಟ್ಟಿ ಮಾತನಾಡಿ, ಮಕ್ಕಳ ಜವಾಬ್ದಾರಿ ತಮಗೆ ಬರುವುದಿಲ್ಲ ಎಂದು ಯಾವುದೇ ಇಲಾಖೆಗಳು ನುಣಚಿಕೊಳ್ಳುವುತ್ತಿಲ್ಲ, ಮಕ್ಕಳ ರಕ್ಷಣೆ ಮತ್ತು ಭದ್ರತೆ ನೀಡುವುದು ಪ್ರತಿಯೊಂದು ಇಲಾಖೆಯ ಕರ್ತವ್ಯವಾಗಿದೆ ಎಂದರು. ಮಕ್ಕಳ ಜವಾಬ್ದಾರಿ ಇಂದು ಕೇವಲ ಅಂಗನವಾಡಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾತ್ರ ಸೇರಲಿದ್ದು, ತಮ್ಮ ಪಾತ್ರವಿಲ್ಲವೆಂದು ಬೇರೆ ಇಲಾಖೆಗಳು ಸುಮ್ಮನೆ ಕೂರುವತ್ತಿಲ್ಲ ಎಂದ ಹೇಳಿದ ಅವರು, 18 ವರ್ಷದೊಳಗಿನ ಮಕ್ಕಳ ರಕ್ಷಣೆ ಮತ್ತು ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳಿಗೆ ಪ್ರತಿಯೊಬ್ಬ ಇಲಾಖೆ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.
ಪೋಕ್ಸೋ ಕಾಯ್ದೆ 2002ರಲ್ಲಿ ಜಾರಿಗೆ ಬಂದ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ಕಾನೂನಿನ ಸಂಘರ್ಷ ಎದುರಿಸುವ ಮಕ್ಕಳಿಗೆ ರಕ್ಷಣೆ ನೀಡುವಂತಹ ನಿಯಮ ಬಂದಿದೆ ಎಂದರು.
ಕೋಲಾರ ಜಿಲ್ಲೆಯ ಗಡಿ ಭಾಗದಲ್ಲಿ ಸಾಕಷ್ಟು ಬಾಲಕಾರ್ಮಿಕರು ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ ಪೋಷಕರು ಭಾಗಿಯಾಗಿದ್ದಾರೆ ಎಂದ ಅವರು, ಮಕ್ಕಳು ವಿದ್ಯಾಭ್ಯಾಸವನ್ನು ಕಡಿತಗೊಳಿಸಿ ಹಣ ಸಂಪಾದನೆ ಮಾಡಲು ಮಕ್ಕಳನ್ನು ದುಡಿಮೆಗೆ ತಳ್ಳುತ್ತಿರುವುದು ಬೇಸರದ ಸಂಗತಿ ಎಂದರಲ್ಲದೆ, ಈ ಪಿಡುಗು ನಿವಾರಿಸಲು ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಬೇಕಾಗಿದೆ ಎಂದರು.
ಮಕ್ಕಳ ರಕ್ಷಣಾ ಸೊಸೈಟಿಯ ಸದಸ್ಯ ಶ್ರೀಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶಕುಂತಲಾ, ಜಿಲ್ಲಾ ಆರೋಗ್ಯಾಧಿಕಾರಿ ಪಯಾಜ್ ಖಾನ್, ಇದ್ದರು. ರೇಣುಕಾ ನಿರೂಪಿಸಿ, ಅನುಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.