ಕೋಲಾರ

ಕರಿಮದ್ದು ಸ್ಫೋಟ: ನಾಲ್ವರಿಗೆ ಗಾಯ

Published On :

ಕ.ಪ್ರ.ವಾರ್ತೆ  ಶಿಡ್ಲಘಟ್ಟ  ಜ.1
ಜಮೀನನ್ನು ಹಾಳುವ ಮಾಡುವ ಹಂದಿಗಳು ಹಾಗೂ ಇತರೆ ಪ್ರಾಣಿಗಳನ್ನು ಕೊಲ್ಲಲು ಇಟ್ಟಿದ್ದ ಕರಿಮದ್ದು ಸ್ಫೋಟಗೊಂಡು ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ದೇವರ ಮಳ್ಳೂರಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಗಾಯಾಳುಗಳನ್ನು ಜಮೀನಿನ ಮಾಲೀಕ ಶ್ರೀನಾಥ್ (38), ಸಹಾಯಕ ಅಕಲಪ್ಪ (45), ಲಕ್ಷ್ಮಯ್ಯ ಮತ್ತು ಮೋಹನ್ ಎಂದು ಗುರುತಿಸಲಾಗಿದೆ.
ದೇವರ ಮಳ್ಳೂರು ಗ್ರಾಮದ ಶ್ರೀನಾಥ್ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದು, ಇದಕ್ಕಾಗಿ ಎಲ್ಲಿ ಕೊಳವೆ ಬಾವಿ ಕೊರೆದರೆ ನೀರು ಸಿಗುತ್ತದೆ ಎನ್ನುವುದನ್ನು ಪರೀಕ್ಷಿಸಲು ಅಕಲಪ್ಪ ಅವರನ್ನು ತಮ್ಮ ಜಮೀನಿಗೆ ಕರೆದುಕೊಂಡು ಹೋಗಿದ್ದರು. ಜಮೀನಿನಲ್ಲಿ ಪಾಯಿಂಟ್ ಹುಡುಕುತ್ತ ಅಡ್ಡಾಡುವಾಗ ಒಂದು ದಾರದಿಂದ ಕಟ್ಟಿದ್ದ ಪೊಟ್ಟಣ ಸಿಕ್ಕಿದೆ. ಕುತೂಹಲದಿಂದ ಅದನ್ನು ಬಿಚ್ಚಲು ಯತ್ನಿಸಿದರೂ ಸಾಧ್ಯವಾಗದ ಕಾರಣ ಚಾಕು ತೆಗೆದುಕೊಂಡು ಕತ್ತರಿಸಿದ್ದಾರೆ. ಆ ಕ್ಷಣ ಪೊಟ್ಟಣದಲ್ಲಿದ್ದ ಕರಿಮದ್ದು ಸ್ಫೋಟಗೊಂಡಿದೆ. ಇದರಿಂದ ಸ್ಥಳದಲ್ಲಿದ್ದ ಮೋಹನ್  ಕೈ ಬೆರಳುಗಳು ಸುಟ್ಟು ಹೋಗಿವೆ. ಇನ್ನೂ ಅಕ್ಕಲಪ್ಪ, ಲಕ್ಷ್ಮಯ್ಯ, ಶ್ರೀನಾಥ್‌ಗೆ ಸ್ಫೋಟದಿಂದ ಸಣ್ಣಪುಟ್ಟ ಗಾಯಗಳಾಗಿದ್ದು ಕಿವಿಗಳಿಗೆ ಪೆಟ್ಟಾಗಿದೆ. ತಕ್ಷಣ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ತೀವ್ರ ಗಾಯಗೊಂಡಿರುವ ಮೋಹನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈತರು ಬೆಳೆದ ಬೆಳೆಗಳನ್ನು ಹಂದಿಗಳು ಬಂದು ನಾಶ ಮಾಡಿ ನಷ್ಟವನ್ನುಂಟು ಮಾಡುತ್ತಿದ್ದರಿಂದ ಸಿಡಿಯುವ ಕರಿಮದ್ದನ್ನು ಜಮೀನಿನಲ್ಲಿ ಹುದುಗಿಡಲಾಗುತ್ತದೆ.ಇದನ್ನು ಅರಿಯದೇ ಪ್ರಾಣಿಗಳು ತುಳಿದ ತಕ್ಷಣ ಸ್ಫೋಟಗೊಂಡು ಸ್ಥಳದಲ್ಲಿಯೇ ಸಾಯುತ್ತವೆ. ಇದಲ್ಲದೇ ಕರಿಮದ್ದನ್ನು ಕೊಳವೆ ಬಾವಿಗಳಿಗೆ ಕೊರೆದ ಸಂದರ್ಭದಲ್ಲಿ ಒಳಗೆ ಹಾಕಿದಾಗ ಗಲೀಜು ಹೊರಗಡೆಗೆ ಬಂದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಕರಿಮದ್ದಿನ ಬಳಕೆಯನ್ನು ಕೆಲ ರೈತರು ಹಿಂದೆ ಹೆಚ್ಚಿಗೆ ಬಳಕೆ ಮಾಡುತ್ತಿದ್ದರು.ಆದರೆ, ಇತ್ತೀಚೆಗೆ ಅವೈಜ್ಞಾನಿಕ ಮತ್ತು ಅಪಾಯಕಾರಿ ಪದ್ದತಿಯಾಗಿರುವುದರಿಂದ ಇದನ್ನು ಕೈ ಬಿಟ್ಟಿದ್ದು ಹಿಂದೆ ಹುದುಗಿಸಿಟ್ಟಿದ್ದ ಕರಿಮದ್ದು ಬುಧವಾರ ಕಂಡು ಬಂದಿದೆ. ಇಲ್ಲವೇ ಪ್ರಾಣಿಗಳೋ ಅಥವಾ ಮನುಷ್ಯರೋ ತಂದು ಜಮೀನಿನಲ್ಲಿ ಹಾಕಿರಬಹುದು.ಇದನ್ನು ತಿಳಿಯದೇ ತೆಗೆಯಲು ಯತ್ನಿಸಿದ್ದೇ ದುರ್ಘಟನೆ ನಡೆಯಲು ಕಾರಣವಾಯಿತು ಎನ್ನಲಾಗಿದೆ.ಅದರಲ್ಲೂ ಕಬ್ಬಿಣದ ಚಾಕುವಿನಿಂದ ಕುಯ್ಯಲು ಮುಂದಾದ ಘರ್ಷಣೆಯಿಂದ ಬಿಸಿ ಬಂದು ಕರಿಮದ್ದು ಸ್ಫೋಟಿಸಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಮೋಹನ್ ನನ್ನು ಹೊರತು ಪಡಿಸಿ ಉಳಿದವರು ಚಿಕಿತ್ಸೆ ಪಡೆದು ಮನೆಗಳಿಗೆ ವಾಪಸ್ ಆಗಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.