ಆರ್ಟಿಇ ಸದ್ಬಳಕೆಯಾಗಲಿ: ಡಿಡಿಪಿಐ
ಚಿಕ್ಕಬಳ್ಳಾಪುರ: ವಯೋವುತಿಯ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೆರೆಹೊರೆಯ ಶಾಲೆಯಲ್ಲಿ ಒದಗಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಆರ್ಟಿಇ ಕಾಯ್ದೆಯಡಿ 2014-15 ನೇ ಸಾಲಿಗೆ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಜ.7 ರಿಂದ ಚಾಲನೆ ಪಡೆಯಲಿದೆ.
ಈ ಬಾರಿ ನೂರಕ್ಕೆ ನೂರು ಯಶಸ್ಸನ್ನು ಸಾಧಿಸುವ ಗುರಿಯನ್ನು ವ್ಯಕ್ತಪಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ಸೌಲಭ್ಯವನ್ನು ಪೋಷಕರು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದೆ.
ಆರ್ಟಿಈ ಕಾಯ್ದೆಯಡಿ ಅನನುಕೂಲ, ದುರ್ಬಲ ವರ್ಗದ ಮಕ್ಕಳಿಗೆ ಅನುದಾನ ರಹಿತ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ( ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ) ಕನಿಷ್ಠ 25 ರಷ್ಟು ಸೀಟುಗಳನ್ನು ಉಚಿತ ದಾಖಲಾತಿಗಾಗಿ ಮೀಸಲಿಡಬೇಕು.
ಸೀಟುಗಳ ವಿವರ: ಜಿಲ್ಲೆಯಲ್ಲಿ ಆರ್ಟಿಈ ಕಾಯ್ದೆಯಡಿ ಒಟ್ಟು 217 ( ಪೂರ್ವ ಪ್ರಾಥಮಿಕ 9 ಮತ್ತು 1 ನೇ ತರಗತಿಗೆ ದಾಖಲು ಮಾಡಿಕೊಳ್ಳುವ 208 ಶಾಲೆಗಳು) ಶಾಲೆಗಳಲ್ಲಿ 2,095 ( ಪೂರ್ವ ಪ್ರಾಥಮಿಕ 103 ಮತ್ತು 1 ನೇ ತರಗತಿಗೆ 1992 )ಸೀಟುಗಳನ್ನು ಗುರುತಿಸಲಾಗಿದೆ. ಬಾಗೇಪಲ್ಲಿ ತಾಲೂಕಿನಲ್ಲಿ 6 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ 77 ಸೀಟುಗಳು, 1 ನೇ ತರಗತಿ ದಾಖಲು ಮಾಡಿಕೊಳ್ಳುವ 35 ಶಾಲೆಗಳಲ್ಲಿ 257 ಸೀಟುಗಳು, ಚಿಕ್ಕಬಳ್ಳಾಪುರದಲ್ಲಿ 1 ನೇ ತರಗತಿ ದಾಖಲು ಮಾಡಿಕೊಳ್ಳುವ 46 ಶಾಲೆಗಳಲ್ಲಿ 408 ಸೀಟುಗಳು, ಚಿಂತಾಮಣಿಯಲ್ಲಿ 54 ಶಾಲೆಗಳಲ್ಲಿ 669 ಸೀಟುಗಳು, ಗೌರಿಬಿದನೂರಿನ 2 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ 16 ಸೀಟುಗಳು, 1 ನೇ ತರಗತಿಗೆ ದಾಖಲು ಮಾಡಿಕೊಳ್ಳುವ 33 ಶಾಲೆಗಳಲ್ಲಿ 302, ಗುಡಿಬಂಡೆ 1 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ 10 ಸೀಟುಗಳು, 1 ನೇ ತರಗತಿಗೆ ದಾಖಲು ಮಾಡಿಕೊಳ್ಳುವ 9 ಶಾಲೆಗಳಲ್ಲಿ 52, ಶಿಡ್ಲಘಟ್ಟದಲ್ಲಿ 31 ಶಾಲೆಗಳಲ್ಲಿ 304 ಸೀಟುಗಳನ್ನು ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಆರ್ಟಿಇ ಕಾಯ್ದೆಯಡಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಜ.7 ರಿಂದ ಫೆ.8 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅನುದಾನ ರಹಿತ ಅನುದಾನಿತ ಶಾಲೆಗಳು, ಕ್ಷೇತ್ರ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಸಿಗಲಿವೆ. ಪೋಷಕರಿಂದ ಸ್ವೀಕರಿಸಿದ ಅರ್ಜಿಗಳನ್ನು ಶಾಲೆಗಳು ಪರಿಶೀಲಿಸಿ ತಯಾರಿಸಿದ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಲಿದ್ದು ಅಂತಿಮವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದನೆಗೊಂಡ ಪಟ್ಟಿಯನ್ನು ಫೆ.17 ರಂದು ಪ್ರಕಟಿಸಲಾಗುತ್ತದೆ. ಇದರಂತೆ ಮಾ.3 ರಿಂದ ಶಾಲಾ ಮಕ್ಕಳ ದಾಖಲಾತಿ ನಡೆಯಲಿದೆ. ಸಾರ್ವಜನಿಕರು ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ www.schooleducation. karnataka.nic.in, ಟೋಲ್ ಫ್ರೀನಂಬರ್ 1800425-11014, ಜಿಲ್ಲಾ ಕಚೇರಿ 08156-273395 ಅನ್ನು ಸಂಪರ್ಕಿಸಬಹುದು.
ಹಿಂದಿನ ಸಾಧನೆ: 2012-13 ನೇ ಸಾಲಿನಿಂದ ಆರ್ ಟಿ ಈ ಕಾಯ್ದೆ ಕಾರ್ಯ ರೂಪಕ್ಕೆ ಬಂದಿದ್ದು ಜಿಲ್ಲೆಯಲ್ಲಿ 243 ಶಾಲೆಗಳಲ್ಲಿ 1 ನೇ ತರಗತಿಗೆ 1,881 ಮಕ್ಕಳು ಮತ್ತು ಪೂರ್ವ ಪ್ರಾಥಮಿಕ ಶಾಲೆಗೆ 61 ಮಕ್ಕಳು ಸೇರಿದಂತೆ ಒಟ್ಟು 1942 ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಮಂಜೂರಾತಿ ಸಿಕ್ಕಿದ್ದು ಒಂದನೇ ತರಗತಿಗೆ 1,784 ಮಕ್ಕಳು ಅರ್ಜಿಯನ್ನು ಸಲ್ಲಿಸಿದ್ದರು. ಇದರಲ್ಲಿ 1,383 ಮಂದಿ (1 ನೇ ತರಗತಿ) ಮತ್ತು ಮತ್ತು ಪೂರ್ವ ಪ್ರಾಥಮಿಕ ಶಾಲೆಗೆ 42 ಮಕ್ಕಳು ಸೇರಿದಂತೆ 1425 ಮಂದಿ ದಾಖಲಾತಿಯನ್ನು ಪಡೆದುಕೊಂಡಿದ್ದಾರೆ.
ಸದ್ಬಳಕೆಗೆ ಸಾರ್ವಜನಿಕರಲ್ಲಿ ಮನವಿ: ಪ್ರತಿ ಮಗುವು ಶಿಕ್ಷಣದಿಂದ ವಂಚಿತರಾಗದಂತೆ ಸಹಕಾರಿಯಾಗಿರುವ ಆರ್ಟಿಇ ಕಾಯ್ದೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್ ಪ್ರಸಾದ್ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ಟಿಇ ಕಾಯ್ದೆಯನ್ನು ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಜಾರಿಗೆ ತರಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲೂ ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣವನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಪೋಷಕರಲ್ಲಿ ತಿಳಿವಳಿಕೆ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.
ಆರ್ಟಿಇ ಕಾಯ್ದೆಯನ್ನು ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಜಾರಿಗೆ ತರಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲೂ ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣವನ್ನು ಪಡೆಯಬಹುದಾಗಿದೆ.
-ಅಜಿತ್ ಪ್ರಸಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

