ಕಟ್ಟಡಗಳಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ!
ಶಿಡ್ಲಘಟ್ಟ: ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರ ಜನರ ತೆರಿಗೆ ಹಣದಿಂದ ಕಟ್ಟಿಸಿದ ಕಟ್ಟಡಗಳು ಬಳಕೆ ಮಾಡದೆ ದುರುಪಯೋಗವಾಗುತ್ತಿವೆ.
ವಿವಿಧ ಇಲಾಖೆಗಳಿಗೆ ಸೇರಿದ ಸರ್ಕಾರಿ ಕಟ್ಟಡಗಳು ಉದ್ಘಾಟನೆಯಾಗದೆ, ಕೆಲವೆಡೆ ಉದ್ಘಾಟನೆಯಾದರೂ ಸಾರ್ವಜನಿಕರ ಸೇವೆಗೆ ಸಿಗದೆ ಪುಂಡ ಪೋಕರಿಗಳ ಅಡ್ಡೆಗಳಾಗಿ ಪರಿವರ್ತನೆಯಾಗಿವೆ.
ಪಟ್ಟಣದ ಸಂತೆ ಮೈದಾನದಲ್ಲಿರುವ ಸುಸಜ್ಜಿತ ನೊತನ ಕಟ್ಟಡ ಕೃಷಿ ಮಾರುಕಟ್ಟೆ ವತಿಯಿಂದ ಹಲವು ಲಕ್ಷ ರು.ಗಳ ವೆಚ್ಚದಲ್ಲಿ 12 ವರ್ಷಗಳ ಹಿಂದೆಯೇ ನಿರ್ಮಾಣಗೊಂಡರೂ ಇಲ್ಲಿ ಕಚೇರಿ ತೆಗೆಯದೆ ಕೃಷಿ ಮಾರುಕಟ್ಟೆ ಅಸಡ್ಡೆ ತೋರಿದ ಕಾರಣ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಸುಮಾರು 30 ಲಕ್ಷ ರು. ವೆಚ್ಚದಲ್ಲಿ ಹಳೆ ರೇಷ್ಮೆಗೂಡಿನ ಮಾರುಕಟ್ಟೆ ಮುಂಭಾಗದಲ್ಲಿ ಮಿನಿ ಬಸ್ ನಿಲ್ದಾಣ ನಿರ್ಮಿಸಿ 10 ವರ್ಷವಾದರೂ ಸಾರ್ವಜನಿಕ ಉಪಯೋಗಕ್ಕೆ ಸಿಕ್ಕಿಲ್ಲ. ಜಿಲ್ಲಾ ಕೈಗಾರಿಕೆ ಇಲಾಖೆಯಿಂದ ಲಕ್ಷಾಂತರ ರು.ಗಳ ವೆಚ್ಚದಲ್ಲಿ ತಾಲೂಕಿನಾದ್ಯಂತ ಕೈಗಾರಿಕಾ ಶೆಡ್‌ಗಳನ್ನು ನಿರ್ಮಿಸಲಾಗಿದ್ದರೂ ಇವು ಕೇಳುವವರಿಲ್ಲದೆ ಕಂಡವರ ಪಾಲಾಗಿವೆ. ಪಟ್ಟಣಕ್ಕೆ ಕೇವಲ 1 ಕಿ.ಮೀ ದೂರದಲ್ಲಿರುವ ಹಂದಿಗನಾಳ ಗ್ರಾಮದ ಕೈಗಾರಿಕಾ ಶೆಡ್ ಹಾಲು ಶೇಖರಣಾ ಕೇಂದ್ರವಾಗಿದೆ. ವರದನಾಯಕನ ಹಳ್ಳಿ ಗೇಟ್ ಮುಂಭಾಗದ ಕೈಗಾರಿಕಾ ಪ್ರಾಂಗಣದಲ್ಲಿನ ಶೇ.95 ರಷ್ಟು ಶೆಡ್‌ಗಳಲ್ಲಿ ವಿವಿಧ ಚಟುವಟಿಕಗೆಳು ನಡೆಯುತ್ತಿದ್ದು, ಇಲ್ಲಿ ಅನಧೀಕೃತ ಫಲಹಾರ ಮಂದಿರ ಮತ್ತು ಬಲಾಢ್ಯರ ಮರಳು ದಾಸ್ತಾನು ಕೊಠಡಿಗಳಾಗಿ ಪರಿವರ್ತಿಸಲಾಗಿದೆ. ಈ ಆವರಣದಲ್ಲಿ ನಿರ್ಮಿಸಲಾಗಿದ್ದ ಕೊಳವೆ ಬಾವಿ, ಇದಕ್ಕೆ ಅಳವಡಿಸಲಾಗಿದ್ದ ಪಂಪು ಮತ್ತು ನೀರಿನ ಪೈಪುಗಳು ಧನದಾಹಿಗಳ ಪಾಲಾಗಿವೆ. ಇದರ ಬಾಗಿಲುಗಳನ್ನೇ ನಾಪತ್ತೆ ಮಾಡಲಾಗಿದೆ.
ದಿಬ್ಬೂರಹಳ್ಳಿಯಲ್ಲಿರುವ ಕೈಗಾರಿಕಾ ಶೆಡ್‌ನಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಸಮೀಪದ ಗಂಜಿಗುಂಟೆ ಕೈಗಾರಿಕಾ ಶೆಡ್‌ನಲ್ಲಿ ಕೆಲವು ವರ್ಷಗಳ ಹಿಂದೆ ಖಾಸಗಿ ಶಾಲೆಯೊಂದು ವಶಪಡಿಸಿಕೊಂಡಿತ್ತಾದರೂ ನಂತರ ತೆರವುಗೊಳಿಸಿದ್ದು, ಶೆಡ್‌ನ ಕಿಟಕಿ ಬಾಗಿಲು, ಸಿಮೆಂಟ್ ಶೀಟಿನ ಛಾವಣೆ ಕಂಡವರ ಪಾಲಾಗಿದೆ. ಈ ಬಗ್ಗೆ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ವಿಚಾರಿಸಲು ಕಚೇರಿ ಹುಡುಕಲು ಹಲವು ಗಂಟೆಗಳೇ ಬೇಕಾಯಿತು. ಊರಿನ ಹೊರವಲಯದ ಅತ್ಯಂತ ಕಿರಿದಾದ ರಸ್ತೆಯ ಖಾಸಗಿ ಮನೆಯ ಮೇಲ್ಬಾಗದಲ್ಲಿರುವ ಸಣ್ಣ ಕಟ್ಟಣಡಕ್ಕೆ ಸದಾ ಬೀಗ ಜಡಿಯಲಾಗಿರುತ್ತದೆ. ದೂರವಾಣಿ ಮೂಲಕ ಸಂಕಪರ್ಕಿಸಿದಾಗ ಬಾಗೇಪಲ್ಲಿ ತಾಲೂಕಿನ ಅದಿಕಾರಿಯಾಗಿಯೂ ಇವರೇ ಕಾರ್ಯನಿರ್ವಹಿಸುತ್ತಿರುವುದರಿಂದ ಬಾಗೇಪಲ್ಲಿಯಲ್ಲಿ ವಿಚಾರಿಸಿದರೆ ಶಿಡ್ಲಘಟಕ್ಕೆ ಹೋಗಿದ್ದಾರೆಂದು, ಇಲ್ಲಿ ವಿಚಾರಿಸಿದರೆ ಬಾಗೇಪಲ್ಲಿಯಲ್ಲಿದ್ದಾರೆಂಬ ಸಿದ್ಧ ಉತ್ತರ ದೊರೆಯುತ್ತದೆ.
ಆರೊಗ್ಯ ಇಲಾಖೆಗೆ ಸೇರಿದ ಪಟ್ಟಣದ ಹೃದಯ ಭಾಗದಲ್ಲಿರುವ ಹಲವಾರು ಮನೆಗಳನ್ನು ಅತಿಕ್ರಮಿಸಿಕೊಂಡಿದ್ದು ಬ್ರಹ್ಮ ಕುಮಾರಿ ಪ್ರಾರ್ಥನಾ ಮಂದಿರ, ಸಾರ್ವಜನಿಕ ಗ್ರಂಥಾಲಯ, ವರ್ಕ್ ಶಾಪ್‌ಗಳಾಗಿ ಪರಿವರ್ತಿಸಲಾಗಿದೆ.
ತಾಲೂಕು ಕಂದಾಯ ಇಲಾಖೆ ಮತ್ತು ಜಲಾನಯನ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಗೌಡನ ಕೆರೆ ಮತ್ತು ಅಮ್ಮನ ಕೆರೆ ಅಂಗಳದ ವ್ಯಾಪ್ತಿಯಲ್ಲಿ ಈಗಾಗಲೇ ಮನೆಗಳನ್ನು ಕಟ್ಟಿದ್ದರೂ ಈವರೆಗೆ ಕನಿಷ್ಠ ದಾಖಲೆಗಳನ್ನು ಪರಿಶೀಲಿಸಿ ನೋಟಿಸ್ ನೀಡದೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದು ಕೂಡಲೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕ ಕಟ್ಟಡಗಳ ಸದುಪಯೋಗವಾಗುವ ಕೆಲಸ ಆಗಲೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

