ಕೋಲಾರ

ಹಾಲು ಉತ್ಪಾದಕರಿಗೆ ಕೋಚಿಮುಲ್ ಕೊಡುಗೆ

Published On :

ಕ.ಪ್ರ.ವಾರ್ತೆ  ಕೋಲಾರ  ಜ.2
ಗ್ರಾಹಕರ ಜೇಬಿಗೆ ಕತ್ತರಿ ಹಾಕದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ದರ 2 ರು. ನೀಡಲು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತೀರ್ಮಾನ ಕೈಗೊಳ್ಳುವ ಮೂಲಕ ಸಂಕ್ರಾಂತಿ ಹಬ್ಬದ ಕೊಡುಗೆ ಪ್ರಕಟಿಸಿದೆ.
ಒಕ್ಕೂಟದ ಅಧ್ಯಕ್ಷ ಕೆ. ಗುಡಿಯಪ್ಪನವರ ಅಧ್ಯಕ್ಷತೆಯಲ್ಲಿ ಗುರುವಾರ ಆಡಳಿತ ಮಂಡಳಿಯ ಸಭೆ ನಡೆಸಿ ಜ.1 ರಿಂದಲೇ ಜಾರಿಗೆ ಬರುವಂತೆ ಹಾಲು ಉತ್ಪಾದಕರಿಗೆ ಪಾವತಿಸುತ್ತಿರುವ ಪ್ರತಿ ಲೀಟರ್ ಹಾಲಿಗೆ ವಿಶೇಷ ದರವಾಗಿ 2 ರು. ಹೆಚ್ಚಿಸಿ ಸದರಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಶೇ.3.5 ರಿಂದ ಶೇ.3.7 ಜಿಡ್ಡಿನಾಂಶವಿರುವ ಹಾಲನ್ನು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ 22 ರು. ಪಾವತಿಸಲು ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.
ಉತ್ಪಾದಕರಿಗೆ ವಿಶೇಷ ದರ ಜ.1 ರಿಂದ ಮಾ.31ರವರೆಗೆ ಜಾರಿಯಲ್ಲಿರುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಹಾಲು ಉತ್ಪಾದಕರ ಸಂಘಗಳಿಂದ ಒಕ್ಕೂಟಕ್ಕೆ ಮೂಲ ಸೌಲಭ್ಯ ನಿದಿಯಾಗಿ ಪಡೆಯುತ್ತಿದ್ದ ಪ್ರತಿ ಕೆಜಿಗೆ 20 ಪೈಸೆಯನ್ನು ರದ್ದುಪಡಿಸಿ 5 ಪೈಸೆಯನ್ನು ರೈತರ ಕಲ್ಯಾಣ ಟ್ರಸ್ಟೆಗೆ, 5 ಪೈಸೆಯನ್ನು ಎನ್.ಡಿ.ಪಿ ಯೋಜನೆಗಳ ಕಾರ್ಪ್‌ಸ್ ನಿಧಿಗೆ, 5 ಪೈಸೆಯನ್ನು ಸಂಘದ ಸಿಬ್ಬಂದಿ ಪ್ರೋತ್ಸಾಹ ಧನಕ್ಕೆ ಹಾಗೂ 5 ಪೈಸೆಯನ್ನು ಸಂಘದ ಮಾರ್ಜಿನ್ ಹಣ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಈ ನಿರ್ಧಾರದಿಂದಾಗಿ ಹಾಲು ಉತ್ಪಾದಕರ ಸಂಘಗಳಿಗೆ ಪಾವತಿಸುವ ಮಾರ್ಜಿನ್ ಪ್ರತಿ ಕೆಜಿಗೆ 50 ಪೈಸೆ, ಸಂಘದ ಸಿಬ್ಬಂದಿಗೆ  ಪಾವತಿಸುವ ಪ್ರೋತ್ಸಾಹಧನ ಪ್ರತಿ ಕೆಜಿಗೆ 51 ಪೈಸೆ ನಿಗದಿಪಡಿಸುವ ಮೂಲಕ ಉತ್ಪಾದಕರಿಗೆ ಸಂಕ್ರಾಂತಿ ವಿಶೇಷ ಕೊಡುಗೆ ಪ್ರಕಟಿಸಲಾಗಿದೆ.
ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಒಟ್ಟು ಹಾಲಿನಲ್ಲಿ ಶೇ.63 ರಷ್ಟು ಮಾತ್ರ 8.5 ಕ್ಕಿಂತ ಹೆಚ್ಚಿಗೆ ಎಸ್.ಎನ್.ಎಫ್ ಅಂಶವುಳ್ಳ ಗುಣಮಟ್ಟದ ಹಾಲಾಗಿದ್ದು, ಗುಣಮಟ್ಟದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿರುವುದಿಲ್ಲ. ಆಹಾರ ಸುರಕ್ಷತಾ ಕಾಯಿದೆ ರೀತ್ಯಾ ಗುಣಮಟ್ಟದ ಹಾಲು ಶೇಖರಣೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವುದು ಅನಿವಾರ್ಯ ಹಾಗೂ ಅವಶ್ಯಕವಾಗಿರುತ್ತದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ. ಗುಡಿಯಪ್ಪ ತಿಳಿಸಿದರು.
ಗುಣಮಟ್ಟ ಸುಧಾರಣೆ ಆದಲ್ಲಿ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದಿದ್ದು ಇದರಿಂದ ಉತ್ಪಾದಕರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ, ಉತ್ಪಾದಕರಿಗೆ ಗುಣಮಟ್ಟದ ಆಧಾರದಲ್ಲಿ ಹಣ ಪಾವತಿಸಿ ಪ್ರೋತ್ಸಾಹಿಸಲು ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರ ಸಹಕಾರ ನೀಡಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಒಕ್ಕೂಟದ ನಿರ್ವಹಕ ನಿರ್ದೇಶಕ ಹಾಗೂ ಸಿಬ್ಬಂದಿ ಹಾಜರಿದ್ದರು.
25 ಕೋಟಿ ರು. ಅವಶ್ಯಕ: ಕೋಚಿಮುಲ್ ಆಡಳಿತ ಮಂಡಳಿಯು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2 ರು. ವಿಷೇಷ ದರ ನೀಡಲು ತೀರ್ಮಾನ ಕೈಗೊಂಡಿರುವುದರಿಂದ ಜ.1ರಿಂದ ಮಾರ್ಚ್ 31ವರೆಗೆ 25 ಕೋಟಿ ರು. ಬೇಕಾಗುತ್ತದೆ.
ಪ್ರಸ್ತುತ ಒಕ್ಕೂಟಕ್ಕೆ 8.62 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದ್ದು 2 ರು. ವಿಶೇಷ ದರ ನೀಡುವುದರಿಂದ 13.24 ಕೋಟಿ ಹಾಗೂ ಹಾಗೂ ಮೂಲ ಸೌಕರ್ಯಕ್ಕೆ 11.76 ಕೋಟಿ ಸೇರಿ ಒಟ್ಟು 25 ಕೋಟಿ ರು.ಅವಶ್ಯಕತೆ ಇರುವುದಾಗಿ ಒಕ್ಕೂಟದ ಅಧ್ಯಕ್ಷ ಕೆ.ಗುಡಿಯಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.
ಬೆಂಗಳೂರಿನಲ್ಲಿ ಕೋಚುಮುಲ್ ಹಾಲಿಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆಯಾದರೆ ಹೆಚ್ಚಿನ ಲಾಭ ಸಿಗುತ್ತದೆ. ಈಗ ಕೇವಲ 2.50 ಲಕ್ಷ ಲೀಟರ್ ಹಾಲು ಬೆಂಗಳೂರಿಗೆ ಸರಬರಾಜು ಆಗುತ್ತಿದೆ, ಜೊತೆಗೆ ಟೆಟ್ರಾಪ್ಯಾಕ್ ಹಾಲು 2.50 ಲಕ್ಷ ಸೇರಿ ಒಟ್ಟು 5 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದ್ದು ಕನಿಷ್ಠ ಇನ್ನು 2.50 ಲಕ್ಷ ಲೀಟರ್ ಹಾಲು ಮಾರಾಟಕ್ಕೆ ಅವಕಾಶ ಸಿಕ್ಕಿದಲ್ಲಿ ನಮ್ಮ ಒಕ್ಕೂಟದ ಅಭಿವೃದ್ಧಿ ಹೆಚ್ಚುತ್ತದೆ ಎಂದರು.
ಕೋಲಾರ ಒಕ್ಕೂಟದಿಂದ ಹೆಚ್ಚಿನ ಹಾಲು ಬೆಂಗಳೂರಿನಲ್ಲಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇದು ಈಡೇರಿದರೆ ಉತ್ಪಾದಕರಿಗೆ ಅನುಕೂಲವಾಗುತ್ತದೆ, ಪ್ರಸ್ತುತ ನಮ್ಮ ಒಕ್ಕೂಟ 16 ಕೋಟಿ ರು.ನಿವ್ವಳ ಲಾಭದಲ್ಲಿದ್ದು ಕೆಎಂಎಫ್ ಮೂಲ ಸೌಕರ್ಯಕ್ಕಾಗಿ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ 2 ರು.ಗಳನ್ನು ನಾವು ರೈತರಿಗೆ ವಿಶೇಷ ದರವಾಗಿ ನೀಡಲು ನಿರ್ಧರಿಸಿದ್ದೇವೆಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.