ಕೋಲಾರ

ಜಾತಿ ಗಣತಿ ಮಾಹಿತಿ ಪ್ರಕಟಿಸಲು ಸೂಚನೆ

Published On :

ಕೋಲಾರ: ಸಾಮಾಜಿಕ,ಆರ್ಥಿಕ ಮತ್ತು ಜಾತಿ ಗಣತಿ-2011 ಮಾಹಿತಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಬಂದಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಲೋಪ ದೋಷ ಸರಿಪಡಿಸಬೇಕೆಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝುಲ್ಫೀಖಾರ್ ಉಲ್ಲಾ ತಿಳಿಸಿದರು.
ಜಿ.ಪಂ. ಸಭಾಂಗಣದಲ್ಲಿ ಗುರುವಾರ ಅವರು ಗ್ರಾ.ಪಂ. ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿಗೆ ಸಂಬಂಧಿಸಿದ ಮಾಹಿತಿಗಳು ಅತ್ಯಂತ ಮಹತ್ವವಾಗಿರುವುದರಿಂದ ಯಾವುದೇ ಲೋಪ ಇಲ್ಲದಂತೆ ಅಖೈರುಗೊಳಿಸಿ ಸರ್ಕಾರದ ಆಶಯದಂತೆ ಆಯಾ ಪ್ರದೇಶಕ್ಕೆ ಸಲ್ಲಬೇಕಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಸಹಕಾರ ನೀಡಿ ಎಂದರು.
ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಹಕ್ಕು ಬಾಧ್ಯತಾ ಮತ್ತು ಆಕ್ಷೇಪ ಅರ್ಜಿಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸುವ ಬಗ್ಗೆ ತರಬೇತುದಾರ ನಾಗರಾಜಾಚಾರ್ ಮಾಹಿತಿ ನೀಡಿದರು. ಕರಡು ಪಟ್ಟಿಯನ್ನು ಇಂದೇ ತಾಪಂ ಇಒಗಳಿಂದ ಪಡೆಯಬೇಕು, ಪ್ರತಿ ತಾಲೂಕಿನಲ್ಲೂ ಅರ್ಜಿಗಳನ್ನು ಸ್ವೀಕರಿಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಕೂಡಲೇ ಕರಡು ಪ್ರತಿಯನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಪಂ ಹಾಗೂ ಗ್ರಾಪಂ ಕಚೇರಿಯಲ್ಲಿ ಪ್ರಕಟಿಸುವಂತೆ ತಿಳಿಸಿದರು.
ಕರಡು ಪಟ್ಟಿ ಸಂಬಂಧ ಆಕ್ಷೇಪಣೆ ಸಲ್ಲಿಸಲು  ಜ.23 ಕಡೇ ದಿನವಾಗಿದ್ದು, ಫೆ.24ರಂದು ಅಂತಿಮ ಗಣತಿ ಪಟ್ಟಿ ಪ್ರಕಟವಾಗಬೇಕಾಗಿದೆ ಎಂದರು.
ಅರ್ಜಿಗಳನ್ನು ವಿಲೇವಾರಿಗೊಳಿಸಲು ಫೆ. 8  ಅಂತಿಮ ದಿನವಾಗಿದೆ.  ಗಣತಿ ಪಟ್ಟಿಯನ್ನು ಫೆ. 24ರಂದು ಪ್ರಕಟಿಸಬೇಕು. ತಿದ್ದುಪಡಿಗಳ ಪಟ್ಟಿಯನ್ನು ಮಾ. 24 ರಂದು ಪ್ರಕಟಿಸಬೇಕಾಗಿರುವುದರಿಂದ ಅಧಿಕಾರಿಗಳು ನಿಗದಿತ ವೇಳೆಗೆ ತಮಗೆ ವಹಿಸಿರುವ ಕೆಲಸ ಮುಗಿಸಬೇಕೆಂದರು.
ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಸಿಇಒ ಜುಲ್ಪಿಖಾರ್ ಉಲ್ಲಾ,  ವಸತಿ ಸಚಿವ ಅಂಬರೀಷ್ ಜಿಲ್ಲೆಗೆ ಭೇಟಿ ನೀಡಿ ಹೋದ ನಂತರದಲ್ಲಿ ವಸತಿ ಯೋಜನೆ ಸ್ವಲ್ಪ ಚುರುಕು ಪಡೆದುಕೊಂಡಿದೆ. ಪ್ರಗತಿಯಲ್ಲಿ ತೀರಾ ಹಿಂದುಳಿದ 10 ಜಿಲ್ಲೆಗಳ ಹೆಸರಲ್ಲಿ ಕೋಲಾರ ಸೇರಿಲ್ಲವೆಂದು ಸಂತಸ ವ್ಯಕ್ತಪಡಿಸಿದರು.
ವಿವಿಧ ವಸತಿ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿದ್ದ ಮನೆಗಳ ಪೈಕಿ ಈಗಾಗಲೇ 13 ಸಾವಿರ ಮನೆಗಳು ವಾಪಸಾಗಿದೆ.  ಈ ಬಾರಿ ಒಂದು ಮನೆ ಕೂಡ ಸರ್ಕಾರಕ್ಕೆ ವಾಪಸಾದರೆ 1.25 ಲಕ್ಷ ರು. ವಾಪಸ್ ಹೋದಂತಾಗುತ್ತದೆ. ಇದರಿಂದ ಜಿಲ್ಲೆಗೆ ಮತ್ತು ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುವುದರಿಂದ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಆದೇಶಿಸಿದರು.
ಬಸವ ವಸತಿ ಯೋಜನೆಯಡಿ 3500 ಮನೆಗಳು ಮಂಜೂರಾಗಿದ್ದು, ಜಿಪಿಎಸ್ನಲ್ಲಿ ದಾಖಲಿಸುತ್ತಿಲ್ಲ. ಬಂಗಾರಪೇಟೆಗೆ 2150 ಮನೆ, ಮಾಲೂರು- 98, ಕೋಲಾರ- 140 , ಮುಳಬಾಗಲು- 290 ಹಾಗೂ ಶ್ರೀನಿವಾಸಪುರ- 220 ಮನೆಗಳ ಪ್ರಗತಿ ಕುರಿತು ಜಿಪಿಎಸ್ನಲ್ಲಿ ದಾಖಲಿಸಲು ಬಾಕಿ ಇದೆ ಎಂದು ಅಧಿಕಾರಿ ಸುಬ್ರಮಣಿ ಸಭೆಯ ಗಮನಕ್ಕೆ ತಂದರು.
ಬಂಗಾರಪೇಟೆಗೆ ಮನೆಗಳೂ ಹೆಚ್ಚು ಮಂಜೂರಾಗಿದೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿರುವ ಬಗ್ಗೆ ದೂರು ಇದೆ.  ಜಿಪಿಎಸ್ ಮಾಹಿತಿಗಳನ್ನು ನೋಡಲ್ ಅಧಿಕಾರಿಗಳು ದಾಖಲಿಸುತ್ತಿದ್ದಾಗ  ಪ್ರಕ್ರಿಯೆ ಇದಕ್ಕಿಂತ ಬೇಗ ಆಗುತ್ತಿತ್ತು. ಪಿಡಿಒಗಳಿಗೆ ಜವಾಬ್ದಾರಿ ವಹಿಸಿದ ಮೇಲೆ ಇನ್ನಷ್ಟು ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಕುರಿತು ಮಾಹಿತಿ ನೀಡಿದ ಅಧಿಕಾರಿ ರವಿರಾಜ್, ಗ್ರಾಪಂನ  ಉದ್ಯೋಗ ಖಾತ್ರಿಯ ಖಾತೆಯಲ್ಲಿ 40 ಸಾವಿರ ರು. ಮೇಲ್ಪಟ್ಟು ಹಣ  ಇದ್ದಲ್ಲಿ ಅದನ್ನು ಇಂದೇ ಜಿಲ್ಲಾ ಖಾತೆಗೆ ವರ್ಗಾಯಿಸುವಂತೆ ಸರ್ಕಾರ ಸೂಚನೆ ನೀಡಿದೆ. ಅಧ್ಯಕ್ಷರು ಸಹಿ ಹಾಕಲು ನಿರಾಕರಿಸಿದರೆ  ಉದ್ಯೋಗ ಖಾತರಿ ಕಾಯಿದೆ ಸೆಕ್ಷನ್ 25ರ ಅಡಿ ಹಾಗೂ  ಆರ್.ಡಿ.ಪಿ.ಆರ್ ಕಾಯಿದೆಯನ್ವಯ  ಅಧ್ಯಕ್ಷರ ವಿರುದ್ಧ ಕ್ರಮ ಜರುಗಿಸಲು ಅವಕಾಶ ಇದೆ ಎಂದು ತಿಳಿಸಿದರು.
ಜಿ.ಪಂ. ಉಪಕಾರ್ಯದರ್ಶಿ ಬದನೂರು, ಮುಖ್ಯ ಯೋಜನಾಧಿಕಾರಿ ಆರೋಕ್ಯಸ್ವಾಮಿ, ಸಹಾಯಕ  ಯೋಜನಾಧಿಕಾರಿ  ಮೋಹನ್ಕುಮಾರ್, ನಿರ್ಮಲ ಭಾರತ್ ಅಭಿಯಾನದ ಅಧಿಕಾರಿ ಮುನಿಸ್ವಾಮಿ ನಾಯ್ಡು, ಜಿಲ್ಲಾಧಿಕಾರಿ ಕಚೇರಿಯ  ಅಧಿಕಾರಿ   ರಾಜೇಶ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.