ಕೋಲಾರ

ಫಲಿತಾಂಶ ಕುಸಿತಕ್ಕೆ ಸಚಿವ ಕಿಮ್ಮನೆ ಸಿಡಿಮಿಡಿ

Published On :

ಕೋಲಾರ: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿ ಪ್ರಾಂಶುಪಾಲರಿಂದ ಕಾಲೇಜಿನ ಅವ್ಯವಸ್ಥೆಗಳ ಮಾಹಿತಿ ಸಂಗ್ರಹಣೆ ಮಾಡಿದರು.
ಈ ಕಾಲೇಜಿನಲ್ಲಿ ಸುಮಾರು ಎರಡು ಸಾವಿರ ಹೆಣ್ಣು ಮಕ್ಕಳು ಇದ್ದಾರೆ, ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ, ಶೌಚಾಲಯಗಳ ಕೊರತೆ ಇದೆ ಎಂದು ತಿಳಿದು ಬಂದಿತು. ವಿಧಾನಸಭೆಯ ಆಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪವಾದ ಹಿನ್ನಲೆಯಲ್ಲಿ ನಾನೇ ಖುದ್ದು ಪರಿಶೀಲಿನೆ ಮಾಡಿ ಪರಿಹಾರ ಕಲ್ಪಿಸಲು ಬಂದಿರುವುದಾಗಿ ಸಚಿವರು ತಮ್ಮ ಪ್ರವಾಸದ ಉದ್ದೇಶವನ್ನು ಪತ್ರಕರ್ತರಿಗೆ ತಿಳಿಸಿದರು.
ಕಾಲೇಜಿನಲ್ಲಿ ಈಗಿರುವ ಶೌಚಾಲಯಗಳ ಸಂಖ್ಯೆ ಸಾಲದು, ಅದ್ದರಿಂದ 20 ಶೌಚಾಲಯಗಳನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ನಾಳೆಯಿಂದಲೇ ಶೌಚಾಲಯಗಳ ನಿರ್ಮಾಣಕ್ಕೆ ಬೇಕಾದ ಪ್ರಕ್ರಿಯೆ ಆರಂಭಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪದ್ಮನಾಭ್ ಹಾಗೂ ಪಿಯು ಇಲಾಖೆಯ ಉಪ ನಿರ್ದೇಶಕ ದೊರೆಸ್ವಾಮಿ ಅವರಿಗೆ ತಿಳಿಸಿದ್ದೇನೆಂದರು.
ಶಾಲಾ-ಕಾಲೇಜುಗಳಿಗೆ ಬೇಕಾದ ಮೂಲ ಸೌಕರ್ಯಕ್ಕೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ, ಮುಖ್ಯೋಪಾಧ್ಯಯರು ಮತ್ತು ಪ್ರಾಂಶುಪಾಲರು ಕಾಲ ಕಾಲಕ್ಕೆ ಸರ್ಕಾರಕ್ಕೆ ವರದಿ ನೀಡಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು, ಈ ಹಿಂದೆ ಏನಾಗಿದೆ ಎಂದು ಕೇಳಲ್ಲ, ನಮ್ಮ ಸರ್ಕಾರ ಮಾತ್ರ ಶಿಕ್ಷಣ ವಿಚಾರದಲ್ಲಿ ಬದ್ಧತೆಯನ್ನು ಹೊಂದಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ನಿವಾರಣೆಗಾಗಿ ಸಂಬಂಧಪಟ್ಟವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾಲೇಜಿನಲ್ಲಿ ನೀರಿನ ಬವಣೆ ಹೆಚ್ಚಾಗಿರುವುದರಿಂದ ಕೂಡಲೇ ಅಧಿಕಾರಿಗಳು ನಗರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು, ಟ್ಯಾಂಕರ್ ಮೂಲಕ ಇಲ್ಲವೇ ಕೊಳವೆ ಬಾವಿ ಮೂಲಕ ನೀರು ಸಂಗ್ರಹಣೆ ಮಾಡಲು ಟ್ಯಾಂಕಕ್ನಿರ್ಮಿಸಿ, ಕನಿಷ್ಠ 10 ಸಾವಿರ ಲೀಟರ್ ನೀರು ಶೇಖರಣೆ ಮಾಡಿದಲ್ಲಿ ಅನುಕೂಲವಾಗುತ್ತದೆ, ಇದಕ್ಕೆ ಬೇಕಾದ ಅನುದಾನವನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಫಲಿತಾಂಶ ಕುಸಿತಕ್ಕೆ ತರಾಟೆ: ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶ ಕಡಿಮೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಶೌಚಾಲಯ, ನೀರಿನ ಸಮಸ್ಯೆಯಿಂದ ಫಲಿತಾಂಶ ಕುಸಿತ ಸಾಧ್ಯವಿಲ್ಲ. ಇಲ್ಲಿನ ಶಿಕ್ಷಕರು ಬದ್ಧತೆಯಿಂದ ಪಾಠ ಮಾಡದಿರುವುದೇ ಕಾರಣವೆಂದು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.
ಕಾಲೇಜಿನ ಆಡಳಿತ ಸರಿಯಿಲ್ಲವೆಂಬುದು ಕಳಪೆ ಫಲಿತಾಂಶದಿಂದ ಸಾಬೀತು ಆಗಿದೆ, ಸುಧಾರಣೆ ಆಗದಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ, ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಶಿಕ್ಷಕರು ಪರಿಣಾಮಕಾರಿಯಾಗಿ ಪಾಠ ಮಾಡಬೇಕು, ಓದಿನಲ್ಲಿ ಹಿಂದೆ ಉಳಿದಿರುವ ಮಕ್ಕಳಿಗೆ ವಿಶೇಷ ಬೋಧನೆ ಮಾಡಬೇಕು, ಅಗತ್ಯವಿದ್ದಲ್ಲಿ ಭಾನುವಾರ ಮಕ್ಕಳಿಗೆ ಪಾಠ ಹೇಳಿ ಉತ್ತಮ ಫಲಿತಾಂಶ ಬರುವಂತೆ ಎಚ್ಚರವಹಿಸಿ ಎಂದು ತಿಳಿಸಿದರು.
ಕಾಲೇಜಿನ ಸಮಸ್ಯೆ ನಿವಾರಣೆಗೆ ನಾನೇ ಬರಬೇಕೆಂದೇನಿಲ್ಲ, ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬಹುದು. ಕಾಲೇಜಿನ ಅಭಿವೃದ್ಧಿಗೆ ಮಕ್ಕಳಿಗೆ ಬೇಕಾದ ಮೂಲ ಸೌಕರ್ಯಕ್ಕೆ ನಾನು ಬದ್ಧ ಅದೇ ರೀತಿ ನೀವು ಫಲಿತಾಂಶ ಸುಧಾರಣೆ ಮಾಡಲು ವಿಶೇಷ ಗಮನ ನೀಡಬೇಕೆಂದು ಸೂಚಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.