ಚಿಕೂನ್ ಗುನ್ನ, ಡೆಂಘೀ ಡೇಂಜರ್
ಎನ್ .ವೆಂಕಟೇಶ್
ಚಿಕ್ಕಬಳ್ಳಾಪುರ: ಸ್ವಚ್ಛತೆಯ ಅರಿವು, ಸಾಂಕ್ರಾಮಿಕ ಕಾಯಿಲೆಗಳ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಚಾರ ಮಾಡುತ್ತಿರುವುದರ ನಡುವೆಯೂ ಎರಡು ಗ್ರಾಮಗಳಲ್ಲಿ ಚಿಕುನ್ ಗುನ್ಯಾ, ವಿಷಮ ಶೀತ ಜ್ವರ ವ್ಯಾಪಕವಾಗಿ ಹರಡಿ ಅನೇಕ ಕುಟುಂಬಗಳನ್ನು ಬಾಧಿಸುತ್ತಿದೆ. ಈಗಾಗಲೇ ಹಲವರು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಗ್ರಾಮಗಳಲ್ಲಿ ಆತಂಕ ಮೂಡಿದೆ.
ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಪಂ ವ್ಯಾಪ್ತಿಯ ದೊಡ್ಡನೆಂಚರ್ಲು, ಕಾಲುವಗಡ್ಡ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಲುಷಿತ ನೀರಿನ ಸೇವನೆ ಮತ್ತು ಸೊಳ್ಳೆಗಳ ಮಹಿಮೆಯಿಂದ ಸುಮಾರು 80ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿಯೇ 38 ಜನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆ ಪ್ರಾರಂಭದಲ್ಲಿ ಕೆಲವರಿಗೆ ಸುಸ್ತು, ರಾತ್ರಿ ಸಮಯದಲ್ಲಿ ಚಳಿ ಕಾಣಿಸಿಕೊಂಡಿದ್ದು ನಂತರ ಬಿಟ್ಟು ಬಿಟ್ಟು ಜ್ವರ ಬಂದಿದೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದರೂ ವಾಸಿಯಾಗಿಲ್ಲ. ಬರು ಬರುತ್ತಿದ್ದಂತೆ ಒಬ್ಬೊಬ್ಬರಾಗಿಯೇ ತೀವ್ರ ಜ್ವರಕ್ಕೆ ತುತ್ತಾಗಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಕಂಗಲಾಗಿದ್ದು ಪರಿಸ್ಥಿತಿ ಇನ್ನೂ ಸರಿ ಹೋಗಿಲ್ಲ. ದಿನೇ ದಿನೇ ಜ್ವರಕ್ಕೆ ಗುರಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ತುರ್ತು ಕ್ರಮ: ಗ್ರಾಮಗಳಲ್ಲಿ ತೀವ್ರವಾಗಿ ಹರಡುತ್ತಿರುವ ಜ್ವರವನ್ನು ನಿಯಂತ್ರಿಸುವ ಸಲುವಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ತಾಲೂಕು ಆರೋಗ್ಯಾಧಿಕಾರಿ, ಸಿಬ್ಬಂದಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನೀರಿನ ಟ್ಯಾಂಕರ್ಗಳು ಮತ್ತು ಪೈಪ್ಲೈನ್ ದುರಸ್ತಿಪಡಿಸುವುದು, ತ್ಯಾಜ್ಯ ವಿಲೇವಾರಿ, ಚರಂಡಿಗಳಲ್ಲಿ ಸ್ವಚ್ಛತೆ ಕಾಪಾಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಗ್ರಾಮಸ್ಥರಿಗೆ ಕಾಯಿಸಿ ಆರಿಸಿದ ನೀರನ್ನು ಸೇವಿಸಲು, ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಲಾಗುತ್ತಿದೆ. ಅಗತ್ಯವಿರುವ ಔಷಧಿಗಳನ್ನು ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನಿಟ್ಟುಕೊಂಡು ವಿತರಿಸಲಾಗುತ್ತಿದೆ. ಅಧಿಕಾರಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ.
ಕಲುಷಿತ ನೀರು, ಸೊಳ್ಳೆ ಕಾರಣ
ಗ್ರಾಮಗಳಲ್ಲಿ ಸರಬರಾಜಾದ ಕಲುಷಿತ ನೀರಿನ ಸೇವನೆಯೇ ಜ್ವರ ಹರಡಲು ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೇ ಇದಕ್ಕೆ ಹಲವೆಡೆ ನೈರ್ಮಲ್ಯ ಹದಗೆಟ್ಟಿರುವುದು, ಸೊಳ್ಳೆಗಳು ಜೊತೆಯಾಗಿವೆ. ಗ್ರಾಮಗಳಲ್ಲಿ ಕೊಳವೆ ಬಾವಿಗಳಿಂದ ನೀರು ಸ್ವಚ್ಛತೆಯಿಲ್ಲದ ಟ್ಯಾಂಕರ್, ಪೈಪ್ಲೈನ್ ಮೂಲಕ ಸರಬರಾಜಾಗಿದ್ದು ಕೆಲವೆಡೆ ಶಿಥಿಲವಾಗಿರುವ ಕಡೆ ಚರಂಡಿಯ ನೀರು ಕುಡಿಯುವ ನೀರಿನಲ್ಲಿ ಮಿಶ್ರಣವಾಗಿದೆ. ಈ ಕಲುಷಿತ ನೀರನ್ನೇ ಗ್ರಾಮಸ್ಥರು ಸೇವಿಸಿದ್ದಾರೆ. ಇದರಿಂದ ಜನರಿಗೆ ವಿಷಮಶೀತ ಜ್ವರ ಬಂದಿದೆ. ಈಗಾಗಲೇ 3 ಮಂದಿಗೆ ರಕ್ತಪರೀಕ್ಷೆ ನಡೆಸಿದಾಗ ಥೈಪಾಯಿಡ್ ಇದೆ ಎನ್ನುವುದು ದೃಢಪಟ್ಟಿದೆ. ಬೇರೆ ಬೇರೆ ಪ್ರಕರಣಗಳಲ್ಲಿ ಕೆಲವರಿಗೆ ಮಲೇರಿಯಾ, ಚಿಕುನ್ ಗುನ್ಯಾ ಇರುವುದು ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಇತರರಿಗೆ ಡೆಂಘೀ ಜ್ವರವೇನಾದರೂ ಬಂದಿರಬಹುದೇ ಎನ್ನುವುದನ್ನೂ ಪರೀಕ್ಷಿಸುವ ಕೆಲಸವಾಗುತ್ತಿದೆ. ಈಗಾಗಲೇ ಹಲವರ ರಕ್ತದ ಸ್ಯಾಂಪಲ್ ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ದೊಡ್ಡನೆಂಚರ್ಲು ಮತ್ತು ಕಾಲುವೆಗಡ್ಡ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಚಿಕುನ್ ಗುನ್ಯಾ, ಥೈಪಾಯಿಡ್ ಹರಡಿರುವುದು ವರದಿಯಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಈ ಬಗ್ಗೆ ಲಿಖಿತ ವರದಿ ನೀಡಲು ಗುಡಿಬಂಡೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
ಟಿ ರಂಗಸ್ವಾಮಿ,
ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಧಿಕಾರಿ, ಚಿಕ್ಕಬಳ್ಳಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

