ಕೋಲಾರ

ಕೈವಾರದಲ್ಲಿ ಗುರುಪೌರ್ಣಿಮೆ ಸಂಭ್ರಮ

Published On :

 ಎನ್. ಬಾಬು
ಚಿಂತಾಮಣಿ: ಕಲ್ಲನ್ನೇ ಕರಗಿಸುವ ಶಕ್ತಿ ಸಂಗೀತಕ್ಕಿದೆ ಎನ್ನುತ್ತಾರೆ ಮಹನೀಯರು. ಅಂಥ ಸಂಗೀತ ಮೇಳ ಸದ್ಗುರು ತಾತಯ್ಯನವರ ಸನ್ನಿಧಾನವಿರುವ ಕೈವಾರದಲ್ಲಿ ಆಷಾಢ ಮಾಸದ ಹುಣ್ಣಿಮೆ ಗುರುಪೂಜಾ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗುತ್ತದೆ. ಗುರುಪೌರ್ಣಮಿ ಅಥವಾ ವ್ಯಾಸ ಪೌರ್ಣಮಿ ಗುರುಗಳಿಗೆ ಮೀಸಲಾದ ದಿನ. ಮೂರು ದಿನಗಳ ಕಾಲ ಇಲ್ಲಿ ವಿಜೃಂಭಣೆಯಿಂದ ನಡೆಯುವ ಸಂಗೀತೋತ್ಸವಕ್ಕೆ ಸಾವಿರಾರು ಸಂಗೀತ ಅಭಿಮಾನಿಗಳು ಆಗಮಿಸುತ್ತಾರೆ.
ಶ್ರೀಯೋಗಿ ನಾರೇಯಣ ಯತೀಂದ್ರರ ತಪೋಭೂಮಿ ಚಿಂತಾಮಣಿ ತಾಲೂಕಿನ ಕೈವಾರ. ಕೈವಾರದ ತಾತಯ್ಯ ಎಂದೇ ಪ್ರಸಿದ್ಧಿ ಪಡೆದಿರುವ ಇವರು ಕ್ರಿ.ಶ.1726 ರಲ್ಲಿ ಹುಟ್ಟಿ ಕ್ರಿ.ಶ.1836 ರಲ್ಲಿ ಅಂದರೆ 110 ನೇ ವಯಸ್ಸಿನಲ್ಲಿ ಕೈವಾರದಲ್ಲಿಯೇ ಸಜೀವ ಸಮಾಧಿಯಾದರು.  ಯೋಗಿನಾರೇಯಣರು ಹುಟ್ಟಿದಾಗಿನಿಂದಲೇ ಆಧ್ಯಾತ್ಮದತ್ತ ಒಲವಿತ್ತು. ಇವರು ಸಾಮಾನ್ಯರಂತೆ ಸಂಸಾರಸ್ಥರಾದರೂ ನಾರೇಯಣರು ಆಧ್ಯಾತ್ಮದತ್ತ ಅಪಾರ ಆಸಕ್ತರಾಗಿದ್ದರು. ಒಮ್ಮೆ ಬಳೆ ವ್ಯಾಪಾರಕ್ಕೆ ಚಿತ್ತೂರಿನ ಪ್ರಾಂತ್ಯಕ್ಕೆ ತೆರಳಿದ್ದಾಗ ಮಹಾಪುರುಷರ ದರ್ಶನವಾಗಿ ಅವರು ತಾತಯ್ಯನವರಿಗೆ ಬೆಣಚು ಕಲ್ಲೊಂದನ್ನು ಕೊಟ್ಟು ಇದು ಬಾಯಲ್ಲಿ ಯಾವಾಗ ಕಲ್ಲು ಸಕ್ಕರೆಯಾಗಿ ಮಾರ್ಪಾಡಾಗುತ್ತದೋ ಆಗ ಸಿದ್ಧಿಯಾಯಿತೆಂದು ತಳಿ ಎಂದು ಹೇಳಿ ಅದೃಶ್ಯರಾದರಂತೆ. ನಂತರ ಕೈವಾರಕ್ಕೆ ಹಿಂತಿರುಗಿ, ಸಂಸಾರ ತ್ಯಜಿಸಿ ಕಠಿಣವಾದ ತಪಸ್ಸನ್ನು ಆಚರಿಸಿದರು. ಆಗ ಅವರಿಗೆ ಬಾಯಲ್ಲಿದ್ದ ಬೆಣಕುಕಲ್ಲು ಕಲ್ಲು ಸಕ್ಕರೆಯಾಯಿತು. ಅಂದಿನಿಂದ ಅವರು ತಾತಯ್ಯನೆಂದು ಪ್ರಸಿದ್ಧಿ ಪಡೆದರು. ಯೋಗ ಸಾಧನೆಯ ಮೂಲಕ ಹಲವಾರು ಪವಾಡಗಳನ್ನು ಮಾಡುತ್ತಾ, ಜನರಿಗೆ ಭೋದನೆ, ಕೀರ್ತನೆಗಳನ್ನು ರಚಿಸುತ್ತಾ ನಾದೋಪಾಸಕರಾಗಿದ್ದರು.
ಕಾಲಜ್ಞಾನ ರಚನೆ: ಸಂಕಷ್ಟದಲ್ಲಿರುವ ಜನರಿಗೆ ಜ್ಞಾನದ ಬೆಳಕನ್ನು ತೋರಿಸುವುದೇ ಅವರ ತತ್ವಗಳ ಉದ್ದೇಶ. ಸದ್ಗುರು ತಾತಯ್ಯನವರು ತಮ್ಮ 87 ನೇ ವಯಸ್ಸಿನಲ್ಲಿ ದಿವ್ಯದೃಷ್ಟಿಯಿಂದ ಅಮೂಲ್ಯವಾದ ಭವಿಷ್ಯವಾಣಿ - ಕಾಲಜ್ಞಾನ ರಚಿಸಿದರು. ಇಂಗ್ಲಿಷರ ಆಳ್ವಿಕೆಯಲ್ಲಿ ನರಳುತ್ತಿದ್ದ ಭಾರತೀಯರ ಪಾಲಿಗೆ ಈ ಕೃತಿ ಪ್ರಸಿದ್ಧವಾದುದು.
ಇಲ್ಲಿಗೆ ಬರಲು ಮಾರ್ಗ: ಬೆಂಗಳೂರಿನಿಂದ 60 ಕಿ.ಮೀ. ದೂರವಿರುವ ಕೈವಾರ ಕ್ಷೇತ್ರಕ್ಕೆ ರಾಜಧಾನಿಯಿಂದ ಬರುವ ಪ್ರಯಾಣಿಕರು ಹೊಸಕೋಟೆ ಮಾರ್ಗವಾಗಿ ಚಿಂತಾಮಣಿ ರಸ್ತೆ ಮುಖಾಂತರ ಆಗಮಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.