ಸಂಘರ್ಷ ತಡೆಗೆ ಕ್ಷಿಪ್ರ ಕಾರ್ಯ ಪಡೆ
ಕೋಲಾರ: ಸಂಭವನೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸದ್ದಿಲ್ಲದೆ ಸಮೀಕ್ಷೆ (ಆರ್ಎಎಫ್) ರ್ಯಾಪಿಡ್ ಆಕ್ಷನ್ ಫೋರ್ಸ್ ಪಡೆಯಿಂದ ನಡೆಯುತ್ತಿದೆ. ಕೋಮುಗಲಬೆ, ರಾಜಕೀಯ ಘರ್ಷಣೆ, ಗಡಿ-ನೀರು-ಭಾಷೆ ವಿವಾದದ ಸಂಘರ್ಷ, ಆಂತರಿಕ ದಂಗೆ, ಹಿಂಸಾಚಾರ ಮತ್ತಿತರ ಸಮಸ್ಯೆಗಳನ್ನು ಎದುರಿಸಲು ಆರ್ಎಎಫ್ ವಿಶೇಷ ದಳವನ್ನು ಅತ್ಯಾಧುನಿಕವಾಗಿ ಸಜ್ಜುಗೊಳಿಸಲಾಗುತ್ತಿದೆ. ಸಿಆರ್ಪಿಎಫ್ನಿಂದ ಆಯ್ದ ಯೋಧರನ್ನು ಆರ್ಎಎಫ್ಗೆ ಭರ್ತಿ ಮಾಡಿಕೊಂಡು ವಿಶೇಷ ತರಬೇತಿ ನೀಡಲಾಗಿದ್ದು, ಇಂತಹ 105ನೇ ಬೆಟಾಲಿಯನ್ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶದ ಚಿತ್ತೂರು ವ್ಯಾಪ್ತಿಯಲ್ಲಿ ನಿಯೋಜಿಸಲಾಗಿದೆ.
ಈ ತುಕಡಿ ಆಯಾ ರಾಜ್ಯಗಳ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಡಿ.ಸಿ ಮತ್ತು ಎಸ್.ಪಿ ಅವರ ಅನುಮತಿ ಪಡೆದು ಪೊಲೀಸ್ ಠಾಣಾವಾರು ಭೇಟಿಕೊಟ್ಟು, ಆಯಾ ವ್ಯಾಪ್ತಿಯ ವಿಸ್ತೀರ್ಣ, ಜನಸಂಖ್ಯೆ, ರಸ್ತೆ ಹಾಗೂ ಇತರೆ ಮಾರ್ಗಗಳು, ವಿವಿಧ ಬಗೆಯ ಅಪರಾಧ ಪ್ರಕರಣಗಳ ಶೇಕಡವಾರು ಸಂಖ್ಯೆ, ಗಂಭೀರ ಪ್ರಕರಣಗಳ ಹಿನ್ನಲೆ ಹಾಗೂ ಸಂಭವನೀಯ ಘಟನೆಗಳ ಬಗ್ಗೆ ಸಮಗ್ರ ಅಂಕಿ ಅಂಶಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕೇಂದ್ರ ಗೃಹ ಇಲಾಖೆ ಅಡಿಯಲ್ಲಿ ಬರುವ ಆರ್ಎಎಫ್ ಅತಿ ಸೂಕ್ಷ್ಮ ಪ್ರದೇಶಗಳನ್ನು ಗಮದಲಿಟ್ಟುಕೊಂಡು ಈ ಬಗ್ಗೆ ಸರ್ವೇ ನಡೆಸಿ, ಇವುಗಳನ್ನು ಕಂಪ್ಯೂಟರೀಕರಣಗೊಳಿಸಿ ಆಯಾ ನಗರ ಪ್ರದೇಶದ ಬಗ್ಗೆ ಫೊಟೋಗ್ರಫಿ ಪಡೆಯಲಾಗುತ್ತಿದೆ. ಸ್ಥಳಿಯ ಪೊಲೀಸರಿಂದ ನಿಯಂತ್ರಿಸಲಾಗದಷ್ಟು ಮಿತಿಮೀರಿದ ಸಮಸ್ಯಾತ್ಮಕ ಸ್ಥಳಕ್ಕೆ ಕರೆ ಬಂದ ತಕ್ಷಣ ಆಗಮಿಸಿ ಆಯಾ ಸ್ಥಳೀಯ ಭಾಷೆಯಲ್ಲಿ ಮೊದಲು ಮೌಖಿಕ ಭಾಷೆಯಲ್ಲಿ ಮತ್ತು ಅದೇ ಭಾಷೆಯ ಬರಹದ ನಾಮಫಲಕದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.
ಅಲ್ಲಿಗೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ರಭಸದಲ್ಲಿ ನೀರು ಚಿಮ್ಮಿಸುವುದು, ಅಶ್ರುವಾಯು ಪ್ರಯೋಗ, ಲಘು-ಲಾಠಿ ಪ್ರಹಾರ, ಗಾಳಿಯಲ್ಲಿ ಗುಂಡು ಕೊನೆಗೆ ಪರಿಸ್ಥಿತಿ ನೋಡಿ ನೇರ ಗುಂಡು ಹಾರಿಸುವ ಕಾರ್ಯಾಚರಣೆ ಇವರದ್ದಾಗಿದೆ. ಆರ್ಎಎಫ್ನ ಕಮಾಂಡೆಂಟ್ ಪಿ.ಪಿ. ಪೋಲೆ ಮಾರ್ಗದರ್ಶನದಲ್ಲಿ ಉಪ ಕಮಾಂಡೆಂಟ್ ಸುನೀಲ್ ಕುಮಾರ್ ಸಾರಥ್ಯದಲ್ಲಿ ಈ ತುಕಡಿ ಈಗಾಗಲೆ ಜಿಲ್ಲೆಗೆ ಆಗಮಿಸಿದ್ದು, ಕೋಲಾರ ನಗರ ಹಾಗೂ ಗಲ್ಪೇಟೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಕಡೆಯಿಂದ ಮಾಹಿತಿ ಕಲೆಹಾಕಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

