ಕೋಲಾರ

ಮೂವರು ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿತು ನ್ಯಾಯ

Published On :

ಕೋಲಾರ: ದಾಖಲಾತಿ ಅನುಮೋದನೆಯಾಗದೇ ಶೈಕ್ಷಣಿಕ ಭವಿಷ್ಯ ಹಾಳಾಗುವ ಆತಂಕದಲ್ಲಿದ್ದ ನಗರದ ಮಹಿಳಾ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮುಖಂಡರ ಮಧ್ಯಪ್ರವೇಶದಿಂದಾಗಿ ಬೆಂಗಳೂರು ವಿವಿ ನ್ಯಾಯ ಒದಗಿಸಿದೆ.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಳೆದ ಒಂದು ವರ್ಷದ ಹಿಂದೆ ಪ್ರಥಮ ಬಿಕಾಂಗೆ ದಾಖಲಾಗಿದ್ದ ವಿದ್ಯಾರ್ಥಿನಿಯರಾದ ಎಸ್. ಸಿಂಧು, ಎಸ್. ಅಶ್ವನಿ, ಮುನಿಷಾ ಎಂಬುವವರ ದಾಖಲಾತಿ ಅನುಮೋದನೆಯಾಗದ ಕಾರಣ ಅವರು ದ್ವಿತೀಯ ವರ್ಷಕ್ಕೆ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲವೆಂಬ ಒಂದು ವರ್ಷದ ಶೈಕ್ಷಣಿಕ ಭವಿಷ್ಯಕ್ಕೆ ಕುತ್ತು ಬರುವ ಆತಂಕ ಎದುರಾಗಿತ್ತು. ಈ ನಡುವೆ ವಿದ್ಯಾರ್ಥಿ ಮುಖಂಡ ಬಿ. ಸುರೇಶ್‌ಗೌಡ ಮತ್ತಿತರರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದರಲ್ಲದೇ ಬುಧವಾರ ಸಂಜೆ ಖುದ್ದು ಬೆಂಗಳೂರು ವಿವಿ ಉಪಕುಲಪತಿ ಡಾ. ತಿಮ್ಮೇಗೌಡ, ಹಾಗೂ ಕುಲಸಚಿವರಾದ ಸೀತಮ್ಮರನ್ನು ವಿದ್ಯಾರ್ಥಿಗಳೊಂದಿಗೆ ಹೋಗಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪ್ರಥಮ ವರ್ಷದ ದಾಖಲಾತಿಗೆ ಶುಲ್ಕ ಪಾವತಿ, 1,2ನೇ ಸೆಮಿಸ್ಟರ್ ಪರೀಕ್ಷೆ ತೆಗೆದುಕೊಂಡಿರುವುದು ಸೇರಿದಂತೆ ಪೂರಕ ದಾಖಲೆಗಳನ್ನು ಕುಲಪತಿಗಳ ಗಮನಕ್ಕೆ ತರಲಾಯಿತು. ಇದನ್ನು ಪರಿಶೀಲಿಸಿದ ಅವರು, ವಿದ್ಯಾರ್ಥಿನಿಯರಿಗೆ ಅನ್ಯಾಯವಾಗದಂತೆ ದಾಖಲಾತಿ ಅನುಮೋದನೆ ನೀಡುವುದಾಗಿ ಭರವಸೆ ನೀಡಿ, ಕಾಲೇಜು ಹಂತದಲ್ಲಿ ದ್ವಿತೀಯ ವರ್ಷಕ್ಕೆ ದಾಖಲಿಸಿಕೊಂಡು ಪ್ರಸ್ತಾವನೆ ಸಲ್ಲಿಸಲು ಸೂಚಿಸುವುದಾಗಿ ಭರವಸೆ ನೀಡಿದರು.
ಈ ಅನ್ಯಾಯ ಮತ್ತೊಮ್ಮೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿದಲ್ಲಿ ಮತ್ತೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ ವಿದ್ಯಾರ್ಥಿ ಮುಖಂಡ ಸುರೇಶ್‌ಗೌಡ ಮತ್ತಿತರರ ಆಗ್ರಹಕ್ಕೆ ಒಪ್ಪಿದ ವಿವಿ ಕುಲಪತಿಗಳು ಈ ಬಗ್ಗೆ ಕಾಲೇಜಿಗೆ ನೋಟಿಸ್ ಜಾರಿ ಮಾಡುವುದಾಗಿಯೂ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಭರವಸೆ ನೀಡಿದರು.
ಕಾಲೇಜಿನ ಕಡೆಯಿಂದ ಈ ಕುರಿತು ತಮ್ಮ ಗಮನಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ ಎಂದು ತಿಳಿಸಿದ ಕುಲಸಚಿವರು, ಈ ಬಗ್ಗೆ ಅಗತ್ಯ ಮಾಹಿತಿ ಪಡೆದು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಕಿಶೋರ್, ವಿದ್ಯಾರ್ಥಿನಿಯರಾದ ಅಶ್ವಿನಿ, ಸಿಂಧು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.