ಕೋಲಾರ

ಪ್ಲಾಸ್ಟಿಕ್ ನಿಷೇಧ ಅತ್ಯಗತ್ಯ: ಡಿಸಿ

Published On :

ಕೋಲಾರ: ನಲವತ್ತು ಮೈಕ್ರಾನ್ ಪ್ಲಾಸ್ಟಿಕ್ ಬಳಕೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಕಾರಣಾಂತರಗಳಿಂದ ಅನುಮತಿ ನೀಡಿರಬಹುದು, ಆದರೆ ಕೋಲಾರದ ನಾಳಿನ ಭವಿಷ್ಯ ಮತ್ತು ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸಲು ಎಲ್ಲ ಬಗೆಯ ಪ್ಲಾಸ್ಟಿಕ್ ಚೀಲಗಳ ನಿಷೇಧ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಕಾಳಜಿ ವ್ಯಕ್ತಪಡಿಸಿದರು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಗರಸಭೆ ಹಮ್ಮಿಕೊಂಡಿರುವ ಸ್ವಚ್ಛತಾ ಅಂದೋಲನ ಸಲುವಾಗಿ ಜನತೆಯಲ್ಲಿ ಅರಿವು ಮೂಡಿಸಲು ಏರ್ಪಡಿಸಿದ್ದ ಬೀದಿ ನಾಟಕಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಕಸ ಮುಕ್ತ ನಗರವನ್ನು ಮಾಡಲು ನಗರಸಭೆ ಹಮ್ಮಿಕೊಂಡಿರುವ ಸ್ವಚ್ಛತಾ ಆಂದೋಲನ ಯಶಸ್ವಿನ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಂಡು ನಗರಕ್ಕೆ ಒಳ್ಳೆಯ ಹೆಸರು ತರಬೇಕೆಂದು ನಗರಸಭೆಗೆ ಕಿವಿಮಾತು ಹೇಳಿದರು.
ಕೋಲಾರವನ್ನು ಕಸ ಮುಕ್ತ ನಗರವನ್ನಾಗಿ ಮಾಡುವುದಾಗಿ ನಗರಸಭೆ ಪ್ರಕಟಿಸಿದಾಗ ಯಾರು ನಂಬಲು ಸಾಧ್ಯವಿರಲಿಲ್ಲ, ಆದರೆ ಕಾರ್ಯಕ್ಷಮತೆಯ ಮೂಲಕ ನಗರಸಭೆ ತನ್ನ ಬದ್ಧತೆ ಪ್ರದರ್ಶಿಸುತ್ತಿದೆ. ಕಳೆದ ಜೂ.30ರಿಂದ ಈವರೆಗೆ ನಡೆದ ಪ್ರಯತ್ನಗಳಿಂದ ಸಾಕಷ್ಟು ಬದಲಾವಣೆ ಕಾಣುವಂತಾಗಿದೆ ಎಂದು ನಗರಸಭೆಯನ್ನು ಶ್ಲಾಘಿಸಿದರು.
ಕಸ ಮುಕ್ತ ನಗರವನ್ನಾಗಿ ಮಾಡುವುದು ಕೇವಲ ನಗರಸಭೆ ಒಂದರಿಂದ ಸಾಧ್ಯವಿಲ್ಲ, ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಮಾತ್ರ ಸಾಧ್ಯವೆಂದರು. ಪ್ಲಾಸ್ಟಿಕ್ ಚೀಲಗಳ ನಿಷೇಧ ಜಾರಿ ಮಾಡಿದಾಗ ಅನೇಕ ವರ್ತಕರು ತಮ್ಮ ಬಳಿ ಬಂದು ಸುಪ್ರೀಂ ಕೋರ್ಟಿನ ಪ್ರಕಾರ 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ವರ್ತಕರ ನಿಯೋಗಕ್ಕೆ ನಗರದ ನಾಳಿನ ಭವಿಷ್ಯ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸುವುದು ಎಲ್ಲರ ಕರ್ತವ್ಯವೆಂದು ಹೇಳಿದಾಗ ವರ್ತಕರು ಸಹಕಾರ ನೀಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಖಂಡಿತ ಕೋಲಾರ ರಾಜ್ಯದಲ್ಲೇ ಮಾದರಿ ನಗರವಾಗುವುದರಲ್ಲಿ ಅನುಮಾನವಿಲ್ಲವೆಂದರು.
ಆಧುನಿಕ ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಪ್ಲಾಸ್ಟಿಕ್ ಕವರ್‌ಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿ ಪರ್ಯಾಯವಾಗಿ ಬಟ್ಟಿ ಮತ್ತು ಪೇಪರ್ ಕವರ್‌ಗಳನ್ನು ಉಪಯೋಗಿಸಿ ಉತ್ತಮ ವಾತಾವರಣ ನಿರ್ಮಾಣ ಮಾಡುವಂತೆ ನಗರದ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಮಾತನಾಡಿ, ಜನತೆಯ ಸಹಕಾರದಿಂದ ತಕ್ಕಮಟ್ಟಿಗೆ ಕೋಲಾರ ಕಸ ಮುಕ್ತ ನಗರವಾಗುತ್ತಿದೆ. ಎಲ್ಲಾ ವಾರ್ಡುಗಳಲ್ಲಿ ಜನತೆ ನಗರಸಭೆಯ ಸ್ವಚ್ಛತಾ ಆಂದೋಲನಕ್ಕೆ ಸಹಕಾರ ನೀಡಿದಲ್ಲಿ ನಮ್ಮ ಆಶಯ ಈಡೇರುತ್ತದೆ ಎಂದರು. ನಗರಸಭೆ ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ಮುರಳೀಗೌಡ, ಪ್ರಸಾದ್ ಬಾಬು, ರವೀಂದ್ರ, ರೌತ್ ಶಂಕರಪ್ಪ, ನದೀಮ್, ಮುಖೇಶ್, ರಾಧಕೃಷ್ಣ, ಗಾಂಧಿನಗರ ನಾರಾಯಣಸ್ವಾಮಿ, ಕಾಶಿ ವಿಶ್ವನಾಥ, ಸೋಮಶೇಖರ್, ಆಯುಕ್ತ ಜಗದೀಶ್, ಆರೋಗ್ಯ ನಿರೀಕ್ಷಕ ರಮೇಶ್ ಇದ್ದರು. ಭೂಮಿ ಪೂಜೆ ಜನಪದ ಕಲಾ ತಂಡದಿಂದ ಪ್ರದರ್ಶಿಸಲ್ಪಟ್ಟ ಬೀದಿ ನಾಟಕ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.