ಅಂತೂ ಸಿಕ್ಕಿತು ಮಗಳ ಸಾವಿಗೆ ನ್ಯಾಯ!
ಕೋಲಾರ: ಎಂಟು ವರ್ಷಗಳ ಸತತ ಹೋರಾಟದ ಪರಿಣಾಮವಾಗಿ ದುಃಖತಪ್ತ ತಾಯಿಗೆ ಗ್ರಾಹಕರ ವೇದಿಕೆಯಿಂದ ನ್ಯಾಯ ದೊರಕಿದೆ.
ಮಗಳನ್ನು ಕಳೆದುಕೊಂಡ ತಾಯಿ ಇಟಿಸಿಎಂ ಆಸ್ಪತ್ರೆಯ ಇಎನ್‌ಟಿ ಸ್ಪೆಷಲಿಸ್ಟ್ ಡಾ.ಪಾಲ್ ಹಾಗೂ ಆಗಿನ ಆಧೀಕ್ಷಕರಾಗಿದ್ದ ಡಾ.ರಾಜದಾಸ್ ಅವರ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಕೋಲಾರದ ಲಕ್ಷ್ಮಮ್ಮ ಎಂಬವರು ವೈದ್ಯಕೀಯ ನಿರ್ಲಕ್ಷ್ಯದಿಂದ ಮಗಳು ಮೃತಪಟ್ಟಿದ್ದಾಳೆ ಎಂದು ದೂರು ನೀಡಿದ್ದರು. 2006ರಲ್ಲಿ ಪ್ರಕರಣ ದಾಖಲಿಸಿದ್ದು ಗ್ರಾಹಕರ ವೇದಿಕೆಯು ಡಾ.ಪಾಲ್ ಹಾಗೂ ಡಾ.ರಾಜದಾಸ್ ಜಂಟಿಯಾಗಿ 4.5 ಲಕ್ಷ ದಂಡವನ್ನು ಶೇ.9ರ ಬಡ್ಡಿಯೊಂದಿಗೆ ನೀಡುವಂತೆ ಆದೇಶಿಸಿದೆ. ಜೊತೆಗೆ 1.5 ಲಕ್ಷ ಮೃತ ಲಕ್ಷ್ಮೀದೇವಿಯ ಎರಡು ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಠೇವಣಿ ಇಡುವಂತೆ ಸೂಚಿಸಲಾಗಿದೆ.
ದೂರಿನಲ್ಲಿ ಲಕ್ಷ್ಮಮ್ಮ ತನ್ನ ಮಗಳಾದ ಲಕ್ಷ್ಮೀದೇವಿ ಎಂಬವರನ್ನು 2006, ಅ.27ರಂದು ಹೆರಿಗೆಗಾಗಿ ಇಟಿಸಿಎಂ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಇಎನ್‌ಟಿ ಸ್ಪೆಷಲಿಸ್ಟ್ ಡಾ.ಪಾಲ್ ಅವರು ಲಕ್ಷ್ಮೀದೇವಿಗೆ ಸಿ-ಸೆಕ್ಷನ್ ಮಾಡುವುದರ ಮೂಲಕ ಲಕ್ಷ್ಮೀದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಸಿ-ಸೆಕ್ಷನ್ ಆದ ನಂತರ ಲಕ್ಷ್ಮೀದೇವಿ ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ ಉಂಟಾದ ಪರಿಣಾಮ ಮಗಳನ್ನು ಅದೇ ವರ್ಷ ನ.1ರಂದು ಆರ್‌ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ದೂರಿದ್ದರು. ಇಟಿಸಿಎಂ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಕೊರತೆಯಿಂದಾಗಿ ಮತ್ತು ಅಗತ್ಯ ರಕ್ತದ ವ್ಯವಸ್ಥೆಯನ್ನು ಏರ್ಪಾಟು ಮಾಡಿಕೊಳ್ಳದೆ ಜೊತೆ ಆಕೆಗೆ ಸರಿಯಾದ ರೀತಿಯಲ್ಲಿ ಅರಿವಳಿಕೆಯನ್ನು ನೀಡದೆ ಹೆರಿಗೆ ಆದ ನಂತರ ಟುಬಾಕ್ಟಮಿಯನ್ನು ಸಹ ಮಾಡಿದ್ದಾರೆಂದು ಆರೋಪಿಸಿದ್ದರು. ಇಟಿಸಿಎಂ ಆಸ್ಪತ್ರೆಯಲ್ಲಿಯೇ ಲಕ್ಷ್ಮೀದೇವಿ ಮೃತಪಟ್ಟಿರುವ ಬಗ್ಗೆ ಲಕ್ಷ್ಮಮ್ಮ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರನಿತ್ತು ದೂರು ವಜಾಗೊಂಡ ನಿಮಿತ್ತ ಜಿಲ್ಲಾಧಿಕಾರಿಗಳಿಗೆ ಪುನಃ ಪರಿಶೀಲನೆಗಾಗಿ ಮನವಿ ಮಾಡಿಕೊಂಡಿದ್ದರು. ಅಂದಿನ ಜಿಲ್ಲಾಧಿಕಾರಿಗಳು ಕೋಲಾರ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಿಗೆ ಅರ್ಜಿಯನ್ನು ವರ್ಗಾಯಿಸಿ ಪೂರ್ಣ ವಿವರ ನೀಡುವಂತೆ ತಿಳಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕರ ವರದಿಯಂತೆ ಲಕ್ಷ್ಮೀದೇವಿಯ ಮರಣ ಡಾ.ಪಾಲ್ ಹಾಗೂ ಡಾ.ರಾಜದಾಸ್ ಅವರ ವೈಫಲ್ಯದಿಂದಲ್ಲೇ ಆಗಿರುವುದಾಗಿ ಬಂದಿತ್ತು. ಇದರ ಆಧಾರದ ಮೇಲೆ ಗ್ರಾಹಕರ ವೇದಿಕೆ ಪ್ರಕರಣ ಕೈಗೆತ್ತಿಕೊಂಡು ತಪ್ಪಿತಸ್ಥರಿಗೆ ದಂಡ ವಿಧಿಸಿದೆ.
ವರದಕ್ಷಿಣೆ ಭೂತಕ್ಕೆ
ತಾಯಿ-ಮಗು ಬಲಿ
ಕೋಲಾರ/ಶ್ರೀನಿವಾಸಪುರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚಿಲ್ಲವಾರ್ಲಪಲ್ಲಿ ಗ್ರಾಮದಲ್ಲಿ ವರದಕ್ಷಿಣೆಗಾಗಿ ಗಂಡ ನೀಡುತ್ತಿದ್ದ ಹಿಂಸೆ ತಾಳಲಾರದೆ ಪತ್ನಿ ತನ್ನ ಒಂಬತ್ತು ತಿಂಗಳ ಗಂಡು ಮಗುವನ್ನು ಕೊಲೆ ಮಾಡಿ ನಂತರ ತಾನು ನೇಣಿಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ಶ್ಯಾಮಲ ವರದಕ್ಷಿಣೆ ಭೂತಕ್ಕೆ ಪ್ರಾಣ ಕಳೆದುಕೊಂಡ ಗೃಹಿಣಿ ಆಗಿದ್ದು ಕಳೆದ ಐದು ವರ್ಷಗಳ ಹಿಂದೆ ಕೃಷ್ಣ ಎಂಬುವರೊಂದಿಗೆ ಮದುವೆ ಆಗಿದ್ದರು. ಇಬ್ಬರು ಗಂಡು ಮಕ್ಕಳ ತಾಯಿ ಆಗಿರುವ ಶ್ಯಾಮಲ ಗಂಡನ ಮನೆಯವರು ನೀಡುತ್ತಿದ್ದ ಹಿಂಸೆ ತಾಳಲಾಗದೆ ಮೊದಲ ಮಗನನ್ನು ತನ್ನ ತವರು ಮನೆಯಲ್ಲಿ ಬಿಟ್ಟಿದ್ದರು. ಮೃತಳ ತಂದೆ ನೀಡಿದ ದೂರಿನ ಮೇರೆಗೆ ಆಳಿಯ ಕೃಷ್ಣ ವಿರುದ್ಧ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಕುಡಿಯಲು ನೀರು ಕೇಳಿ ಸರ ಅಪಹರಿಸಿದ
ಮುಳಬಾಗಲು: ಪಟ್ಟಣದ ಶಿವಕೇಶವನಗರದಲ್ಲಿ ನೀರು ಕೇಳಲು ಬಂದ ಯುವಕನೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿ ಸರ ಅಪಹರಿಸಿರುವ ಘಟನೆ ನಡೆದಿದೆ. ಶಿವರುದ್ರಪ್ಪ ಎಂಬುವರ ಮನೆಯಲ್ಲಿ ಸೋಮವಾರ ಈ ಪ್ರಕರಣ ನಡೆದಿದೆ. ಅವರ ಪತ್ನಿ ಕಲ್ಯಾಣಿಯವರನ್ನು ನೀರು ಕೇಳಲು ಬಂದ ಯುವಕ ಏಕಾಕಿ ಹಲ್ಲೆ ನಡೆಸಿ 40 ಗ್ರಾಂ ಬಂಗಾರದ ಸರ ಅಪಹರಿಸಿ ಪರಾರಿಯಾಗಿದ್ದಾನೆ. ಆರೋಪಿಯನ್ನು ತಾಲೂಕಿನ ಕುರುಬರಹಳ್ಳಿ ಗ್ರಾಮದ ಪವನ್ ಎಂದು ಗುರಿತಿಸಲಾಗಿದೆ. ಈತ ಕಲ್ಯಾಣಿಯವರ ಪುತ್ರನ ಸ್ನೇಹಿತ ಎನ್ನಲಾಗಿದೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವವಿವಾಹಿತ ಆತ್ಮಹತ್ಯೆ
ಶಿಡ್ಲಘಟ್ಟ: ಜೀವನದಲ್ಲಿ ಜಿಗುಪ್ಸೆಗೂಂಡ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಶಶಿ(21) ಆತ್ಮಹತ್ಯೆಗೆ ಶರಣಾದ ನತದೃಷ್ಟ. ತಾಲೂಕಿನ ರಾಳಕುಂಟೆ (ಗಂಬೀರನ ಹಳ್ಳಿ) ಯ ನಿವಾಸಿಯಾದ ಈತ 2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಕೌಟುಂಬಿಕ ಕಲಹಗಳಿಂದ ಬೇಸತ್ತ ಶಶಿ ಮನೆಯಲ್ಲೇ ವಿಷ ಕುಡಿದು ಅಸ್ವಸ್ಥನಾಗಿದ್ದ ಶಶಿಯನ್ನು ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಲಾಯಿತಾದರೂ ಪಲಕಾರಿಯಾಗಲಿಲ್ಲ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

