ಕೋಲಾರ

ಸಂಸ್ಕರಣ ನೀರಿಗಾಗಿ ಸಹಮತ, ತಾಪಂ ವಿಶೇಷ ಸಭೆಯಲ್ಲಿ ನಿರ್ಣಯ

Published On :

47 ಕೆರೆಗಳಿಗೆ ನೀರನ್ನು ತುಂಬಿಸಲು 1110 ಕೋಟಿ ಯೋಜನೆ
ಕೋಲಾರ: ಅಂತರ್ಜಲ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಗೆ ಬೆಂಗಳೂರು ನಗರದ ಬೆಳ್ಳಂದೂರು ಕೆರೆಯ ಸಮೀಪಿದ ಕೋರಮಂಗಲ ಚಲ್ಲಘಟ್ಟ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ನೀರು ಹರಿಸಲು ರೂಪಿಸಿರುವ ಯೋಜನೆಗೆ ಸೋಮವಾರ ನಡೆದ ತಾಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.
ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ವಿ.ಮಂಜುನಾಥ ಗೌಡ ಅಧ್ಯಕ್ಷೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ವರ್ತೂರ್ ಪ್ರಕಾಶ್, ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಕಾಲಾವಕಾಶ ಬೇಕಾಗಿದೆ. ಇದಕ್ಕೂ ಮುನ್ನ ಕೋರಮಂಗಲ-ಚಲ್ಲಘಟ್ಟ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಸುತ್ತದೆ. ಕೆರೆಗಳಿಗೆ ನೀರು ಹರಿಸುವ ಯೋಜನೆಗಳಿಗೆ ಯಾರ ವಿರೋಧವೂ ಇಲ್ಲ. ತಾಪಂನಲ್ಲಿ ಕೈಗೊಳ್ಳುವ ನಿರ್ಣಯವನ್ನು ಸರ್ಕಾರಕ್ಕೆ ಅದಷ್ಟು ಬೇಗನೆ ಕಳುಹಿಸಿ ಕೆರೆಗಳಿಗೆ ನೀರು ಬರುವಂತೆ ಮಾಡಿ ಎಂದು ಸಲಹೆ ನೀಡಿದರು.
ಸಣ್ಣ ನೀರಾವರಿ ಇಲಾಖೆ ಎಇ ಶ್ರೀರಾಮ್ ಮಾತನಾಡಿ, ಕೋರಮಂಗಲ ಚಲ್ಲಘಟ್ಟ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕದಿಂದ ಲಭ್ಯವಾಗುವ 240 ಎಂಎಲ್‌ಡಿ ಶುದ್ಧೀಕರಿಸಿದ ನೀರನ್ನು ಸಂಪೂರ್ಣವಾಗಿ ಪೈಪ್ ಮೂಲಕ ನಾಲ್ಕು ಸರಣಿಗಳಲ್ಲಿ ಒಟ್ಟು 47 ಕೆರೆಗಳಿಗೆ ನೀರನ್ನು ತುಂಬಿಸಲು 1110 ಕೋಟಿ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧವಾಗಿ ಸವಿಸ್ತಾರವಾಗಿ ಚರ್ಚಿಸಿದ ಬಳಿಕ ಅಂದಾಜು ಮೊತ್ತವನ್ನು ಮಿತಿಗೊಳಿಸಲು ಹಾಗೂ 150 ಎಂಎಲ್‌ಡಿ ಪ್ರಮಾಣದ ನೀರನ್ನು ಒದಗಿಸಲು ಉದ್ದೇಶಿಸಿದ್ದು ಇದಕ್ಕೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.
ಮೊದಲ ಹಂತವಾಗ ಕೆ.ಸಿ.ವ್ಯಾಲಿನಿಂದ ಸಂಸ್ಕರಿಸಿದ 150 ಎಂಎಲ್‌ಡಿ ನೀರನ್ನು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಕೆರೆಯ ಸಮೀಪಿದ ಎತ್ತರದ ಭಾಗಕ್ಕೆ ತಂದು ನಂತರ ಗುರುತ್ವಾಕರ್ಷಣೆ ಬಲದ ಮೂಲಕ 1 ಮತ್ತು 2ನೇ ಸರಣಿಗಳ ಒಟ್ಟು 20 ಕೆರೆಗಳಿಗೆ ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಜಿಪಂ ಅಧ್ಯಕ್ಷ ಜಿ.ಕೆ.ನಾಗರಾಜ್ ಮಾತನಾಡಿ, ಕೋರಮಂಗಲ ಚಲ್ಲಘಟ್ಟ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ಎರಡು ದಿನಗಳ ಹಿಂದೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಾಕಷ್ಟು ಆಧುನಿಕ ತಂತ್ರಜ್ಞಾನವನ್ನು ಬಳಸಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಈ ನೀರು ನಮ್ಮ ಜಿಲ್ಲೆಯ ಕೆರೆಗಳಿಗೆ ಹರಿದು ಬಂದರೆ ಅಂತರ್ಜಲ ಸಮಸ್ಯೆ ಕೊಂಚ ಮಟ್ಟಿಗೆ ನಿವಾರಣೆ ಆಗುತ್ತದೆ. ಜಿಪಂ ಸಹ ಸದರಿ ಯೋಜನೆಗೆ ಒಪ್ಪಿಗೆ ನೀಡಿ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ ಎಂದರು. ತಾಪಂ ಉಪಾಧ್ಯಕ್ಷೆ ಜಿ.ಮುದ್ದುಮಣಿ, ಇಒ ಜಾನಕಿ ರಾಮ್, ತಹಸೀಲ್ದಾರ್ ರಂಗೇಗೌಡ ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.