ಕೊತ್ತಪೇಟ ಗ್ರಾಮಕ್ಕೆ ಮುಕ್ತಿ ಎಂದು?
ಪಾ.ಶ್ರೀ. ಅನಂತರಾಮ್
ಕೋಲಾರ: ಶ್ರೀನಿವಾಸಪುರ ಕೇವಲ ವಿಶ್ವಕ್ಕೆ ರುಚಿಕರವಾದ ಬಗೆ ಬಗೆಯ ಮಾವು ನೀಡುತ್ತಿರುವ ಪ್ರದೇಶ ಮಾತ್ರವಲ್ಲ. ರಾಜಕೀಯ ಕ್ಷೇತ್ರಕ್ಕೂ ಘಟಾನುಘಟಿಗಳನ್ನು ಪರಿಚಯಿಸಿರುವ ಹೆಗ್ಗಳಿಕೆ ಹೊಂದಿದೆ.
ಗಡಿ ಪ್ರದೇಶವಾಗಿರುವುದರಿಂದ ರಾಜ್ಯದ ಗಮನ ಸೆಳೆದಿದೆ. ಡಾ. ನಂಜುಂಡಸ್ವಾಮಿ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ಶ್ರೀನಿವಾಸಪುರ ತಾಲೂಕಿನ ಗಡಿ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿದೆ.
ಆದರೆ ಈ ತಾಲೂಕಿನ ಲಕ್ಷ್ಮೀಪುರ ಗ್ರಾಪಂಗೆ ಸೇರಿದ ಕೊತ್ತಪೇಟ ಗ್ರಾಮ ಮಾತ್ರ ಅಭಿವೃದ್ಧಿಯಿಂದ ಹಿಂದೆ ಉಳಿದಿದೆ. ಇದಕ್ಕೆ ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿಯ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬುದು ಈ ಗ್ರಾಮಸ್ಥರ ಆರೋಪ.
ಕೊತ್ತಪೇಟ ಗ್ರಾಮದಲ್ಲಿ 168 ಕುಟುಂಬಗಳಿದ್ದು ಗುಡಿಸಲು ಮುಕ್ತ ಗ್ರಾಮವಾಗಿಸಲು ಸಾಧ್ಯವಾಗಿಲ್ಲ. ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಿಲ್ಲ.
ಗ್ರಾಮದಲ್ಲಿ ಈಗಲೂ ಅನೇಕರ ಮನೆಗಳಲ್ಲಿ ಶೌಚಾಲಯಗಳು ಇಲ್ಲ. ಗುಡಿಸಲು ವಾಸಿಗಳ ಪ್ರದೇಶದಲ್ಲಿ ರಸ್ತೆ, ಚರಂಡಿ ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮೀನ-ಮೇಷ ಎಣಿಸಲಾಗುತ್ತಿದೆ.
ಲಕ್ಷ್ಮೀಪುರ-ಪುಲಗೂರಕೋಟೆ ಮುಖ್ಯ ರಸ್ತೆಯಿಂದ ಕೊತ್ತಪೇಟ ಗ್ರಾಮಕ್ಕೆ 2 ಕಿಲೋ ಮೀಟರ್ ಸಂಪರ್ಕ ರಸ್ತೆ ಇದ್ದು ಈ ರಸ್ತೆಯನ್ನು ಡಾಂಬರಿಕರಣಗೊಳಿಸಲು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅವಧಿಯಲ್ಲಿ ಪಿಎಮ್ಜಿಎಸ್ವೈ ಯೋಜನೆಯಡಿ ಭೂಮಿ ಪೂಜೆ ನೆರವೇರಿಸಲಾಗಿತ್ತಾದರೂ ಇಂದಿಗೂ ಕಾಮಗಾರಿ ಪ್ರಗತಿ ಕಂಡಿಲ್ಲ.
ಜನಪ್ರತಿನಿಧಿಗಳೇ ಗಮನ ಹರಿಸಿ: ಸಂಸದ ಕೆ.ಎಚ್. ಮುನಿಯಪ್ಪ ಅವರ ಸಂಬಂಧಿ ಹಾಗೂ ಗುರುವಾಗಿದ್ದ ದಿವಂಗತ ಕೊಂಡೋಜಿಯವರ ಪುಣ್ಯತಿಥಿಯನ್ನು ಪ್ರತಿ ವರ್ಷ ನವೆಂಬರ್ 26 ರಂದು ಗ್ರಾಮದಲ್ಲಿ ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮಕ್ಕೆ ಕಳೆದ 40 ವರ್ಷಗಳಿಂದ ಸಂಸದ ಕೆ.ಎಚ್. ಮುನಿಯಪ್ಪ ಬಂದು ಹೋಗುತ್ತಿದ್ದರೂ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಲು ಸಾಧ್ಯವಾಗಿಲ್ಲ.
ವಿಧಾನಸಭಾ ಸದಸ್ಯ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಆರ್.ಚೌಡರೆಡ್ಡಿ, ಪ್ರಭಾರ ಜಿಪಂ ಅಧ್ಯಕ್ಷ ನಾಗರಾಜ್ ಶ್ರೀನಿವಾಸಪುರ ತಾಲೂಕಿನವರೇ ಆಗಿದ್ದಾರೆ. ಈ ಹಿಂದೆ ಜಿಪಂ ಅಧ್ಯಕ್ಷರಾಗಿದ್ದ ಎಂ. ಶ್ರೀನಿವಾಸನ್, ತೂಪಲ್ಲಿ ನಾರಾಯಣಸ್ವಾಮಿ, ನಾಗರತ್ನಮ್ಮ, ಮಾಜಿ ಉಪಾಧ್ಯಕ್ಷೆ ರತ್ನಮ್ಮ ಗಣೇಶ್, ಸೋಮಶೇಖರರೆಡ್ಡಿ ಇದೇ ತಾಲೂಕಿನವರೇ ಆಗಿದ್ದರೂ ಕೊತ್ತಪೇಟ ಗ್ರಾಮಕ್ಕೆ ಮುಕ್ತಿ ಸಿಗದಿರುವುದು ದುರ್ದೈವ.
ಕೊತ್ತಪೇಟ ಎಂದರೆ ಹೊಸಪೇಟೆ ಎಂದು ಅರ್ಥ. ಮೂಲ ಸೌಕಾರ್ಯಗಳಿಂದ ವಂಚಿತವಾಗಿರುವ ಕೊತ್ತಪೇಟ ಗ್ರಾಮಕ್ಕೆ ಈಗಲಾದಲೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಕ್ತಿ ದೊರಕಿಸಲಿ ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಅಗತ್ಯ ಕ್ರಮ
ಕೊತ್ತಪೇಟ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶೀಘ್ರವೇ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಬೇಕಾದ ಸೌಲಭ್ಯಕ್ಕೆ ಕ್ರಮ ಕೈಗೊಳ್ಳುತ್ತೇನೆ. ಖಂಡಿತ ಅಧಿಕಾರಿಗಳು ಮತ್ತು ಆ ಭಾಗದ ಜಿಪಂ ಸದಸ್ಯರೊಂದಿಗೂ ಚರ್ಚಿಸಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸುವೆ.
ಟಿ ಜಿ.ಕೆ. ನಾಗರಾಜ್, ಪ್ರಭಾರ ಅಧ್ಯಕ್ಷ, ಜಿಪಂ, ಕೋಲಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

