ಅಕ್ರಮ ಮರಳು: ನಾಲ್ವರ ಬಂಧನ
ಕೆಜಿಎಫ್: ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ರೈತ ಸಂಘದ ಇಬ್ಬರು ಮುಖಂಡರು ಸೇರಿದಂತೆ ನಾಲ್ವರ ವಿರುದ್ಧ ಬೇತಮಂಗಲ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಬೇತಮಂಗಲ ಸಮೀಪದ ರಾಮಸಾಗರ ಕೆರೆಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬೇತಮಂಗಲ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ತಿಮ್ಮಾಪುರ ಗ್ರಾಮದ ವಿಜಯಕುಮಾರ್ ಮತ್ತು ತಿಮ್ಮರಾಯಪ್ಪ ಎಂಬ ಸಹೋದರರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ರೈತ ಸಂಘದ ಮುಖಂಡರಾದ ಗಣೇಶ್ ಮತ್ತು ವಿಜಯಕುಮಾರ್ ಅವರಿಗೆ 2 ಸಾವಿರ ನೀಡಿ ಮರಳು ತೆಗೆಯುತ್ತಿರುವುದಾಗಿ ತಿಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿ ರೈತ ಮುಖಂಡ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ವಿಜಯಕುಮಾರ್ ನಾಪತ್ತೆಯಾಗಿದ್ದಾನೆ. ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಜಲು ಹೋದ ಬಾಲಕರು ಸಾವು
ಗೌರಿಬಿದನೂರು: ಈಜಲು ಹೋದ ಇಬ್ಬರು ಬಾಲಕರು ಹೂಳಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಹೊಸೂರು ಹೋಬಳಿಯ ಹಳೇಉಪ್ಪಾರಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಇದೇ ಗ್ರಾಮದ ಹೇಮಂತ್(15) ಮತ್ತು ಶೆಶಾಂಕ್ (15) ಈಜಲು ಹೋಗಿ ಮೃತಪಟ್ಟಿರುವ ಬಾಲಕರು. ಇತ್ತೀಚೆಗಷ್ಟೇ ಹೊಸಕುಂಟೆಯಲ್ಲಿ ಮಣ್ಣು ತೆಗೆದು ಕಟ್ಟೆ ನಿರ್ಮಾಣ ಮಾಡಿದ್ದು, ರಾತ್ರಿ ಬಂದ ಮಳೆಗೆ ನೀರು ತುಂಬಿಕೊಂಡಿದೆ. ಬೆಳಿಗ್ಗೆ ಈಜು ಬಾರದ ಬಾಲಕರು ನೀರಿಗಿಳಿದ ಪರಿಣಾಮ ಹೂಳಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯ ಎಸೈ ಶಿವಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಗಿಲು ಮುಟ್ಟಿದ ಆಕ್ರಂದನ: ಡೇರಿಗೆ ಹಾಲು ಹಾಕಿ ಮನೆಗೆ ಬಂದಿದ್ದ ಬಾಲಕರು ಅರ್ಧ ಗಂಟೆಯ ನಂತರ ಶವವಾಗಿ ಮನೆಗೆ ಹಿಂದಿರುಗಿದ್ದಾರೆಂದು ಬಾಲಕರ ಪೋಷಕರ ಆಕ್ರಂದ ಮುಗಿಲು ಮುಟ್ಟಿತ್ತು.
ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆ
ಗೌರಿಬಿದನೂರು: ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ದಸ್ತಗಿರಿಸಾಬ್ ವಯೋನಿವೃತ್ತಿ ಹೊಂದಿತ್ತಿರುವುದು ಇಲಾಖೆಗೆ ನಷ್ಟವಾಗಿದೆ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ವಿ.ಟಿ. ವೆಂಕಟೇಶ್ ಹೇಳಿದರು.
ವೈ. ನಾಗರಾಜ್ ರಾವ್ ಮಾತನಾಡಿ, ದಸ್ತಗಿರಿಸಾಬ್ ಅವರು ಶಿಸ್ತಿನ ಸಿಪಾಯಿ. ಇವರ ಸೇವೆ ಉತ್ತಮವಾದುದು ಎಂದರು. ಮುಖ್ಯ ಶಿಕ್ಷಕ ಕೆ. ತಿಮ್ಮಯ್ಯ ಮಾತನಾಡಿ, ಅವರ ಉತ್ತಮ ಸೇವೆಗೆ ರಾಜ್ಯ, ಜಿಲ್ಲಾ ಹಾಗೂ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು. ಶಿಕ್ಷಕರಾದ ಕೆ.ವೈ. ರಾಮಕೃಷ್ಣ, ಚನ್ನಗಂಗಪ್ಪ, ಕಮಲ, ರೇವತಿ, ಸಿಬ್ಬಂದಿ ಇದ್ದರು. ದಸ್ತಗಿರಿಸಾಬ್ ಮಾತನಾಡಿ, ಸುದೀರ್ಘ ಸೇವೆ ತೃಪ್ತಿ ತಂದಿದೆ, ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ನಮನ ತಿಳಿಸಿದರು.
ನಿವೃತ್ತ ಶಿಕ್ಷಕನಿಗೆ ಆತ್ಮೀಯ ಸನ್ಮಾನ
ಚಿಂತಾಮಣಿ: ಸುಮಾರು 33 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಮುಖ್ಯ ಶಿಕ್ಷಕ ಕವಾಲಿ ವೆಂಕಟರವಣಪ್ಪ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾರ್ಗದರ್ಶಕರಾಗಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ ಆರ್.ಪಂಕಜ್ ಹೇಳಿದರು. ಇತ್ತೀಚೆಗೆ ನಿವೃತ್ತರಾದ ವೆಂಕಟರವಣಪ್ಪ ಅವರಿಗೆ ಕರವೇ ಸನ್ಮಾನ ಸಮಾರಂಭ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಪಂಕಜ್, ಗೌತಮ ಬುದ್ಧರಂಥ ಮಹನೀಯರನ್ನು ಸ್ಫೂರ್ತಿಯಾಗಿಸಿಕೊಂಡು, ಅವರಂತೆ ನಡೆದುಕೊಂಡು ವ್ಯಕ್ತಿ ಇವರು ಎಂದರು. ವೆಂಕಟರವಣಪ್ಪ ಅವರಿಗೆ ಮೈಸೂರು ಪೇಟ ತೋಡಿಸಿ, ಗೌತಮ ಬುದ್ಧ ಪ್ರತಿಮೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಯೂನಿಸ್ ಖಾನ್, ಬಿ.ಸಿ.ಜನಾರ್ದನ್, ಸಿ. ಕೃಷ್ಣೋಜಿರಾವ್, ಶಿವಕುಮಾರ್, ಬಿ. ಎಸ್. ಕಾರ್ತಿಕ್, ಅಕ್ರಂ ಪಾಷ, ಪಿ.ರಮೇಶ್, ಎಂ.ಮುರಳಿ ಇದ್ದರು.
ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಗುಡಿಬಂಡೆ: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ತಾಲೂಕಿನಲ್ಲಿ ನಡೆಸುತ್ತಿರುವ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2014-15ನೇ ಶ್ಯೆಕ್ಷಣಿಕ ಸಾಲಿನಲ್ಲಿ 6ನೇತರಗತಿಯಿಂದ 10ನೇ ತರಗತಿ ತನಕ ವ್ಯಾಸಂಗ ಮಾಡುವವರಿಗೆ ಪ್ರವೇಶ ಕಲ್ಪಿಸಲಾಗುವುದು. ಆಸಕ್ತರು ಜೂ.10ರ ಒಳಗೆ ಅರ್ಜಿ ಸಲ್ಲಿಸಬೇಕು. ವಿವರಗಳಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಪತ್ರಕರ್ತರ ನಿರ್ಬಂಧಕ್ಕೆ ಆಕ್ರೋಶ
ಗೌರಿಬಿದನೂರು: ಪುರಸಭೆ ಸಾಮಾನ್ಯ ಸಭೆ ಪ್ರವೇಶಕ್ಕೆ ಪತ್ರಕರ್ತರನ್ನು ನಿರ್ಬಂಧಿಸಿರುವುದನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಮೇ 31 ರಂದು ಪುರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಗೆ ಆಗಮಿಸಿದ್ದ ಪತ್ರಕರ್ತರನ್ನು ಅಧ್ಯಕ್ಷರ ಸೂಚನೆ ಮೇರೆಗೆ ಹೊರಹೋಗುವಂತೆ ತಿಳಿಸಿರುವುದು ಖಂಡಿನಾರ್ಹ. ಲೋಪದೋಷಗಳನ್ನು ಸಾರ್ವಜನಿಕರ ಗಮನಕ್ಕೆ ತರುವ ಜವಾಬ್ದಾರಿ ಪತ್ರಕರ್ತರ ಮೇಲಿದ್ದು, ಗೌಪ್ಯವಾಗಿ ಸಭೆ ನಡೆಸುವ ಉದ್ದೇಶವೇನು ಎಂದು ಸಂಘ ಪ್ರಶ್ನಿಸಿದೆ. ಮುಂದಿನ ದಿನಗಳಲ್ಲಿ ಪುರಸಭೆಯ ಸಮಾರಂಭಗಳಿಗೆ ಬಹಿಷ್ಕಾರ ಹಾಕುವುದಾಗಿ ಪತ್ರಕರ್ತರ ಸಂಘದ ಸದಸ್ಯರು ನಿರ್ಣಯ ಕೈಗೊಂಡಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಜಗನ್ನಾಥರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಂಘದ ಜಿಲ್ಲಾ ಸಮಿತಿ ಸದಸ್ಯ ವಿ.ಡಿ. ಗಣೇಶ್, ಅಧ್ಯಕ್ಷ ದೇವಿಮಂಜುನಾಥ್, ಉಪಾಧ್ಯಕ್ಷ ಸಿದ್ದಪ್ಪ, ಸಹಕಾರ್ಯದರ್ಶಿ ಆದಿಯಪ್ಪ, ಕೆ. ರಾಮಾಂಜಿನೇಯುಲು, ನಂಜುಂಡಪ್ಪ, ಸಾಗಾನಹಳ್ಳಿ ಶಿವಕುಮಾರ್, ಪಠಾಣ್ ಸೈಫುಲ್ಲಾ, ಮುರಳೀಧರ್, ಲೇಪಾಕ್ಷಿ ಸಂತೋಷ್ ರಾವ್, ಎಚ್.ಆರ್. ವೆಂಕಟರಾವ್, ಪಿ.ವಿ. ರಾಜಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.
ಜೀವನದಲ್ಲಿ ಜುಗುಪ್ಸೆ: ಯುವಕ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜುಗುಪ್ಸೆಗೊಂಡ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಮೆಲ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೋಯಸೋನ್ನೇನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್(22) ಆತ್ಮಹತ್ಯೆಗೀಡಾದವ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಕಳೆದ ಭಾನುವಾರ ಮನೆಗೆ ಬಂದಿದ್ದು ಪಕ್ಕದ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವನು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ತಾಯಿ ಸರೋಜಮ್ಮ ಗ್ರಾಮದಲ್ಲೆಲ್ಲಾ ಹುಡುಕುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಶಂಕರಪ್ಪ ಎಂಬುವರು ಬಂದು ತಮ್ಮ ಮಗ ವೆಂಟೇಶ್, ವೆಂಕಟಸ್ವಾಮಿ ಎಂಬುವರ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿ ಭೇಟಿ ನೀಡಿ ಪರಿಶೀಲಿಸಿದ ಬೆಮೆಲ್ನಗರ ಠಾಣಾ ಪೊಲೀಸರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಾಯಿ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಕ್ಷ ಸಂಘಟನೆಗೆ ಬದ್ಧ
ಚಿಂತಾಮಣಿ: ಕಾಂಗ್ರೆಸ್ವನ್ನು ಬೂತ್ ಮಟ್ಟದಿಂದ ನಗರ ಮಟ್ಟದವರೆಗೂ ಸಂಘಟಿಸುವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಉಚಿತ ರಕ್ತದಾನ ಸಂಸ್ಥೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಎಲ್ಲ ವರ್ಗದ ಹಿತಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸುತ್ತಾರೆಂಬ ಆಶಯ ವ್ಯಕ್ತಪಡಿಸಿದರು. ಈ ವೇಳೆ, ಡಾ.ಬಿ.ಆರ್.ಅಂಬೇಡ್ಕರ್ ಉಚಿತ ರಕ್ತದಾನ ಸಂಸ್ಥೆಯ ಶ್ರೀನಿವಾಸ್, ಎಂ. ಜೆಡ್. ಖಾನ್, ಜನಾರ್ದನ, ಜಿ.ಮುನಿರೆಡ್ಡಿ, ಮಣಿ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.
ಮಾನ್ಯತೆ ಪಡೆಯದ ಶಾಲೆಗೆ ಸೇರಿಸಬೇಡಿ
ಗುಡಿಬಂಡೆ: ಪಟ್ಟಣದ ಸೋಫಿಯಾ ಶಾಲೆ 6ಮತ್ತು 7ನೇ ತರಗತಿಗಳನ್ನು ನಡೆಸಲು ಇಲಾಖೆಯಿಂದ ಅನುಮತಿ ಪಡೆದಿರುವುದಿಲ್ಲ. ಆದ್ದರಿಂದ ಪೋಷಕರು ಈ ತರಗತಿಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವ್ಯೆ.ಸಿ. ರವಿಕುಮಾರ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

