ಕೋಲಾರ

ತಂಬಾಕು ನಿಷೇಧ ದಿನಾಚರಣೆ

Published On :

ಬಂಗಾರಪೇಟೆ: ತಂಬಾಕು ಚಟ ಮನುಷ್ಯನನ್ನು ಚಟ್ಟಕ್ಕೆ ಏರಿಸುತ್ತದೆ. ಆದ್ದರಿಂದ ತಂಬಾಕನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಎಂದು ವೃತ್ತ ನಿರೀಕ್ಷಕ ವೆಂಕಟಾಚಲಪತಿ ಹೇಳಿದರು. ಪಟ್ಟಣದ ಸಂತೋಷ್ ವಿದ್ಯಾ ಸಂಸ್ಥೆಯಲ್ಲಿ ತಂಬಾಕು ನಿಷೇಧ ಕುರಿತು ಪೊಲೀಸ್ ಇಲಾಖೆ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿ, ಅಪಘಾತದ ನಂತರ ಅತಿ ಹೆಚ್ಚು ಜನ ತಂಬಾಕು ಸೇವನೆಯಿಂದ ಅಸುನೀಗುತ್ತಿದ್ದಾರೆ. ಯುವಕರು ಶೋಕಿಗೆಂದು ಧೂಮಪಾನ ಕಲಿಯುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ಹೇಳಿದರು. ಸಬ್ ಇನ್ಸ್‌ಪೆಕ್ಟರ್ ಯೋಗಾನಂದ ಸೋನಾರ್ ಸಾರ್ವಜನಿಕ ಸ್ಥಳಗಳ ಪಟ್ಟಿ ವಾಚಿಸಿದರು. ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋವಿಂದರಾಜು, ಕವನ, ಚುಟುಕುಗಳ ಮೂಲಕ ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಅರಿವು ಮೂಡಿಸಿದರು. ಸಾರ್ವಜನಿಕ ಆರೋಗ್ಯ ಸಂಸ್ಥೆ ಸಂಪರ್ಕ ಅಧಿಕಾರಿ ಅಮಿತ್ ಮಾತನಾಡಿದರು. ಪಟ್ಟಣದ ಅಂಗಡಿ ಮಾಲೀಕರು, ಶಾಲಾ ಮುಖ್ಯಸ್ಥರು, ವಿವಿಧ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.

ಜೂಜು: ಆರು ಜನರ ಬಂಧನ
ಟೇಕಲ್: ಕೊಂಡಶೆಟ್ಟಹಳ್ಳಿಯ ಸಮೀಪದ ಬೈರತ್ನಹಳ್ಳಿಯ ಇಸ್ಮಾಯಿಲ್ ಖಾನ್ ನೀಲಗಿರಿ ತೋಪಿನಲ್ಲಿ ಭಾನುವಾರ ಸಂಜೆ ಅಂದರ್ ಬಾಹರ್ ಆಡುತ್ತಿದ್ದ ಮುನಿರಾಜು, ಅಪ್ಸರ್, ಚಲಪತಿ, ಚಂದ್ರಶೇಖರ್, ಬಾಳಪ್ಪ ಸೇರಿ 6 ಮಂದಿಯನ್ನು ಪೊಲೀಸರು ದಸ್ತಗಿರಿ ಮಾಡಿ, 8100 ಹಾಗೂ 3 ಬೈಕ್ ವಶಪಡಿಸಿಕೊಂಡಿದ್ದಾರೆ.  ದಾಳಿಯಲ್ಲಿ ಪಿಎಸ್‌ಐ ಸಿದ್ದಪ್ಪ, ಮುಖ್ಯ ಪೇದೆ ಎಸ್.ಟಿ.ನಾರಾಯಣಸ್ವಾಮಿ, ಎಎಸ್‌ಐ ಚಂದ್ರಶೇಖರ್, ಪೇದೆಗಳಾದ ವೆಂಕಟೇಶ್, ಮಣಿಯಪ್ಪ, ಸುರೇಶ್, ಯಶವಂತ್‌ರಾವ್, ಆನಂದ್, ಶಿವಶಂಕರ್, ಬಾಬು, ಸೀತಾರಾಮು ಭಾಗವಹಿಸಿದ್ದರು.

ಬಾಲಕಿಯ ಮೇಲೆ ವೃದ್ಧ ಅತ್ಯಾಚಾರ
ಟೇಕಲ್: ಮನೆ ಬಳಿ ಹೂವ ಬಿಡಿಸಲು ಬರುತ್ತಿದ್ದ 10 ವರ್ಷದ ಪುಟ್ಟ ಬಾಲಕಿ ಮೇಲೆ 65 ವರ್ಷದ ವೃದ್ಧ ಅತ್ಯಾಚಾರವೆಸಗಿದ ಘಟನೆ ಮಾಸ್ತಿ ಪೋಲಿಸ್ ಠಾಣಾ ವ್ಯಾಪ್ತಿಯ ಸುಗ್ಗೊಂಡನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಗ್ರಾಮದ ತಿಮ್ಮರಾಯಪ್ಪನ (65) ಮನೆ ಬಳಿ ಪ್ರತಿದಿನ ಹೂವು ಬಿಡಿಸಲು ಬರುತ್ತಿದ್ದ ಅದೇ ಗ್ರಾಮದ 10 ವರ್ಷದ ತನುಜಾ (ಹೆಸರು ಬದಲಾಯಿಸಲಾಗಿದೆ)ಳನ್ನು ಪುಸಲಾಯಿಸಿ ಆಕೆಯ ಮೇಲೆ ಬಲತ್ಕಾರ ನಡೆಸಿದ್ದಾನೆ. ಈ ಸಮಯದಲ್ಲಿ ಆ ಮಗು ಕೂಗಿಕೊಂಡಾಗ ಅಕ್ಕಪಕ್ಕದವರು ಬಂದು ಧಾವಿಸಿ ಆಕೆಯನ್ನು ರಕ್ಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಾಸ್ತಿ ಪಿಎಸ್‌ಐ ಸಿದ್ದಪ್ಪ ತಿಮ್ಮರಾಯಪ್ಪನನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದ ಚಿಕಿತ್ಸೆ ನೀಡಲಾಗುತ್ತಿದೆ.

ಕೋಚಿಮುಲ್‌ನ ನೂತನ ನಿರ್ದೇಶಕಗೆ ಸನ್ಮಾನ
ಟೇಕಲ್: ಮಾಲೂರು ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಕೋಚಿಮುಲ್‌ನ ನೂತನ ನಿರ್ದೇಶಕ ಕೊಮ್ಮನಹಳ್ಳಿಯ ಮಾಜಿ ತಾ.ಪಂ. ಅಧ್ಯಕ್ಷ ಕೆ.ವೈ.ನಂಜೇಗೌಡರು ತಿಳಿಸಿದರು.  ಕೊಮ್ಮನಹಳ್ಳಿ ಗ್ರಾಮದಲ್ಲಿ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಗಳು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು, ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ನೂತನ ಯೋಜನೆಗಳನ್ನು ರೂಪಿಸುವ ಭರವಸೆ ನೀಡಿದರು. ಈ ವೇಳೆ, ವೆಂಕಟಪ್ಪ, ರಾಮಚಂದ್ರಪ್ಪ, ವಿ.ಎಸ್.ಕೃಷ್ಣಪ್ಪ, ತಿಮ್ಮರಾಯಪ್ಪ, ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ದಯಾನಂದ್, ತಾಲ್ಲೂಕಿನ ರಾಮಕೃಷ್ಣಪ್ಪ, ತಿಮ್ಮನಾಯಕನಹಳ್ಳಿ ಟಿ.ಆರ್.ಮುನಿರಾಜು ಮತ್ತು ಸೀನಪ್ಪ ಮುಂತಾದವರು ಉಪಸ್ಥಿತರಿದ್ದರು.

ಕೊಳವೆ ಬಾವಿ ಕೊರೆಸಿದ ಸದಸ್ಯ
ಶಿಡ್ಲಘಟ್ಟ: ಕುಡಿಯುವ ನೀರಿಗಾಗಿ ಸರ್ಕಾರ ಪುರಸಭೆ ಮೂಲಕ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದ್ದರೆ, ಇಲ್ಲಿ ಪುರಸಭಾ ಸದಸ್ಯರೆ ಬೋರ್ವೆಲ್ ಕೊರೆಸಿ ನೀರು ಒದಗಿಸಲು ಮುಂದಾಗಿದ್ದಾರೆ. ಪಟ್ಟಣದ 1 ನೇ ವಾರ್ಡ್‌ನ ಸದಸ್ಯ ಲಕ್ಷ್ಮಯ್ಯ, ನೀರಿನ ಸಮಸ್ಯೆ ನೀಗಿಸಲು ರು. 10 ಲಕ್ಷವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್ ಲೈನ್ ಕೆಲಸ ಕೈಗೆತ್ತಿಕೊಂಡಿದ್ದಾರೆ.

ವಿಪ್ರ ನೌಕರರ ಸಮಾವೇಶ
ತುಮಕೂರು: ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಮಟ್ಟದ 14ನೇ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರವನ್ನು ಜುಲೈ 13 ರಂದು ಹಮ್ಮಿಕೊಳ್ಳಲಾಗಿದೆ.ಈ ಪ್ರತಿಭಾ ಪುರಸ್ಕಾರಕ್ಕೆ ಜಿಲ್ಲೆಯ ಎಲ್ಲಾ ಬ್ರಾಹ್ಮಣ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ 2014ರ ವಾರ್ಷಿಕ ಪರೀಕ್ಷೆಯಲ್ಲಿ ತುಮಕೂರು ನಗರದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶೇ. 90 ಮತ್ತು ಹೆಚ್ಚು ಅಂಕಗಳು ಮತ್ತು ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶೇ. 85 ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿರುವವರು ಅರ್ಜಿ ಸಲ್ಲಿಸಬಹುದು.ಸ್ವಅರ್ಜಿ ಹಾಗೂ ದೃಢೀಕೃತ ನಕಲು ಅಂಕಪಟ್ಟಿ ಹಾಗೂ ದಾಖಲೆಗಳೊಂದಿಗೆ ಜೂನ್ 20 ರೊಳಗೆ ಎಚ್.ಎಸ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ,  ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘ, ಮಲ್ಲಾರಿ ಕೃಪ, 3ನೇ ಮುಖ್ಯ ರಸ್ತೆ, ಶಿವಮೂಕಾಂಬಿಕ ನಗರ, ಉಪ್ಪಾರಹಳ್ಳಿ ತುಮಕೂರು ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ.

ಕೋಳಿ ಸಾಕಾಣಿಕೆ ತರಬೇತಿ ನಾಳೆ
ತುಮಕೂರು: ಇಲ್ಲಿನ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಲ್ಲಿ ಜೂ. 4 ರಿಂದ ಎರಡು ದಿವಸಗಳ ಕಾಲ ಎಲ್ಲಾ ವಯೋವುತಿಯ ಆಸಕ್ತ ಸಾರ್ವಜನಿಕರಿಗೆ ಕೋಳಿ ಸಾಕಾಣಿಕೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಯಾವುದೇ ಭತ್ಯೆ ಇರುವುದಿಲ್ಲ. ಆಸಕ್ತರು ಉಪನಿರ್ದೇಶಕರ ಕಚೇರಿ, ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ತುಮಕೂರು ಇಲ್ಲಿ ಜೂನ್ 4 ರಂದು ಬೆಳಗ್ಗೆ 10.30 ಕ್ಕೆ ಹಾಜರಾಗಲು ಉಪನಿರ್ದೇಶಕರು ತಿಳಿಸಿದ್ದಾರೆ.

ತನಿಖೆಗೆ ಜಿ.ಕೆ. ಶ್ರೀನಿವಾಸ್ ಆಗ್ರಹ
ತುಮಕೂರು: ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಹಾಗೂ ಚರಂಡಿ ನಿರ್ಮಾಣದಲ್ಲಿ ಅನೇಕ ಕಡೆ ಲೋಪವಾಗಿದೆ. ಇದನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಟೂಡಾ ಮಾಜಿ ಸದಸ್ಯ ಹಾಗೂ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಿ.ಕೆ. ಶ್ರೀನಿವಾಸ್ ಆಗ್ರಹಿಸಿದ್ದಾರೆ.ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಎಸ್‌ಬಿಎಂ ಯಿಂದ ಹೆಚ್‌ಎಂಎಸ್ ಪಾಲಿಟೆಕ್ನಿಕ್‌ವರೆಗೆ ಎರಡೂ ಕಡೆಗಳಲ್ಲಿ ಅಳತೆಯಲ್ಲಿ ವ್ಯತ್ಯಾಸವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಈ ರೀತಿ ನಿರ್ಮಾಣವಾದರೆ ಮುಂದೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ ಎಂದಿದ್ದಾರೆ.ಸಿಡಿಪಿಯಲ್ಲಿ ಅನುಮತಿ ಪಡೆದಿರುವ ರಸ್ತೆಗಳನ್ನು ಆ ಅಳತೆ ಪ್ರಕಾರವೇ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಇದರಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲದೆ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸುವುದು ಮುಖ್ಯ ಎಂದು ಆಯುಕ್ತರಿಗೆ ಜಿ.ಕೆ. ಶ್ರೀನಿವಾಸ್ ಕೋರಿದ್ದಾರೆ.

ಮಹಿಳೆ ಆತ್ಮಹತ್ಯೆ
ಪಾವಗಡ: ಜೀವನದಲ್ಲಿ ಜಿಗುಪ್ಸೆ ಹೊಂದಿ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾಪನ್ನಪ್ಪಿದ ಘಟನೆ ಸೋಮವಾರ ಪಟ್ಟಣದ ಬೋವಿ ಕಾಲೊನಿಯಲ್ಲಿ ನಡೆದಿದೆ.ನೇಣಿಗೆ ಬಿಗಿದುಕೊಂಡು ಸಾಪನ್ನಪ್ಪಿದವರು ಜಯಶ್ರೀ (22)ಎಂಬುವರು. ಪಟ್ಟಣದ ಬೋವಿ ಕಾಲೊನಿಯಲ್ಲಿ ವಾಸವಾಗಿದ್ದ ಮಂಜುನಾಥ ಎಂಬುವರ ಪತ್ನಿ ಜಯಶ್ರೀ ಎಂಬುವರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ 2ನೇ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದಿದ್ದು ಈಕೆ ಬೆಳಿಗ್ಗೆ ಯಾರು ಇಲ್ಲದ ಸಮಯದಲ್ಲಿ ತಮಗೆ ಸೇರಿದ ಮಹಡಿ ಮನೆಗೆ ಹತ್ತಿ ಮಹಡಿ ಮನೆಯ ಮೇಲ್ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದಿದೆ. ಜಿಗುಪ್ಸೆ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದಿದ್ದು ಈಕೆಯ ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.