ಕೋಲಾರ

ಹಾಲು ಕುಡಿಯಿರಿ ಆರೋಗ್ಯವಾಗಿರಿ

Published On :

ಕೋಲಾರ: ಹಾಲು ಸಂಗ್ರಹಣೆಯಲ್ಲಿ ಕೋಚಿಮುಲ್ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ಗುಣಮಟ್ಟದಲ್ಲಿ ಇನ್ನೂ ಸುಧಾರಿಸಬೇಕಾಗಿದ್ದು, ಹೊರ ದೇಶಗಳಿಂದ ತಿರಸ್ಕೃತವಾಗುತ್ತಿದೆ ಎಂದು ಕೋಚಿಮುಲ್ ಅಧ್ಯಕ್ಷ ಕೆ.ಗುಡಿಯಪ್ಪ ವಿಷಾದ ವ್ಯಕ್ತಪಡಿಸಿದರು.
ನಗರದ ಸರ್ವಜ್ಞ ಪಾರ್ಕಿನ ಬಳಿ ಇರುವ ನಂದಿನಿ ಹಾಲಿನ ಕೇಂದ್ರದ ಮುಂದೆ ಕೋಚಿಮುಲ್ ವತಿಯಿಂದ ಸೋಮವಾರ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಹಾಗೂ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೋಚಿಮುಲ್ ಉಳಿಯಬೇಕಾದರೆ ರೈತರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು. ಕೇಂದ್ರ ಸರ್ಕಾರ ಹೈನುಗಾರಿಕೆಯ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 7 ಸಾವಿರ ಕೋಟಿ ಒದಗಿಸಿದೆ. ಕರ್ನಾಟಕ ಸರ್ಕಾರ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಪ್ರತಿ ಲೀ. ಹಾಲಿಗೆ 4 ನೀಡುತ್ತಿದೆ. ಈ ಯೋಜನೆಗಾಗಿ 818 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು. ಕೋಚಿಮುಲ್‌ಗೆ 31 ವರ್ಷಗಳ ಕಾಲ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಹೊಸ ಆಡಳಿತ ಮಂಡಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.
ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ ಮಾತನಾಡಿ, ಹಾಲು ಒಕ್ಕೂಟಕ್ಕೆ ರೈತರು ಮತ್ತು ಗ್ರಾಹಕರು ಎರಡು ಕಣ್ಣುಗಳು. ಸಂಸ್ಥೆಯ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಕೋಚಿಮುಲ್ ಕಾರ್ಯ ನಿರ್ವಾಹಕ ನಿರ್ದೇಶಕ  ಗೋಪಾಲ್ ಅವರು ವಿಶ್ವ ಹಾಲು ದಿನಾಚರಣೆ ಮತ್ತು ಏಳು ದಿನಗಳ ನಂದಿನಿ ಸಿಹಿ ಉತ್ಸವಕ್ಕೆ ಸಂಬಂಧಿಸಿದಂತೆ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ(ಮಾರುಕಟ್ಟೆ)ಎಂ.ರಘುನಂದನ್ ಸ್ವಾಗತಿಸಿ, ನಿರೂಪಿಸಿದರು, ವ್ಯವಸ್ಥಾಪಕರಾದ ಆರ್.ರಂಗನಾಥ್, ಡಾ.ವಿ.ಎಂ.ರಾಜು ಹಾಗೂ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಜನಿಯರ್‌ಗಳು, ಉಪ ವ್ಯವಸ್ಥಾಪಕರುಗಳು ಇದ್ದರು. ಕಾರ್ಯಕ್ರಮದ ನಂತರ ನಂದಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಯಿತು. ಸಿಹಿ ಉತ್ಸಹ ಜೂ.7ರವರೆಗೆ ನಡೆಯಲಿದೆ.

ನಂದಿನಿ ಹಾಲನ್ನೇ ಖರೀದಿಸಿ
ಶಿಡ್ಲಘಟ್ಟ: ನಂದಿನಿ ಹಾಗೂ ಗುಡ್‌ಲೈಫ್ ಖರೀದಿ ಮಾಡಿ ಸಹಕಾರ ಸಂಘಗಳ ಉಳಿವಿಗಾಗಿ ಜನತೆ ಸಹಕಾರ ನೀಡಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ಪ್ರತಿ ಕುಟುಂಬವೂ ಉತ್ತಮ ಗುಣಮಟ್ಟದ ಹಾಲು ಖರೀದಿಸಿದರೆ ಆ ಹಣ ರೈತರಿಗೆ ತಲುಪುತ್ತದೆ. ಆ ಮೂಲಕ ಸಹಕಾರ ಸಂಘ ಬೆಳವಣಿಗೆಯಾಗುತ್ತದೆ ಎಂದು ಅವರು ಹೇಳಿದರು.
ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಈ ವಾರ ಹಾಲಿನ ಉತ್ಪನ್ನಗಳ ಸಿಹಿತಿಂಡಿಗಳನ್ನು ಶೇ.10 ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಕೋಚಿಮುಲ್ ತಾಲೂಕು ಒಕ್ಕೂಟದ ಉಪವ್ಯವಸ್ಥಾಪಕ ಗೋಪಾಲರಾವ್, ಮುಖಂಡರಾದ ಓ.ಟಿ.ಮುನಿಕೃಷ್ಣಪ್ಪ, ಪುರಸಭಾ ಸದಸ್ಯ ಅಪ್ಸರಾ ಪಾಷಾ, ಷಫಿವುಲ್ಲಾ, ಮಾಜಿ ಪುರಸಭಾ ಸದಸ್ಯ ಶ್ರೀನಿವಾಸ್, ಮುಖಂಡರಾದ ರಮೇಶ್, ಮಂಜುನಾಥ್, ಶ್ರೀನಾಥ್, ಮುಂತಾದವರು ಹಾಜರಿದ್ದರು.

ಖಾಸಗಿ ಡೈರಿಗಳಿಂದ ಕಳಪೆ ಹಾಲು ಪೂರೈಕೆ: ಡಾ. ರಾಘವೇಂದ್ರ
ಚಿಂತಾಮಣಿ: ಹಲವು ಖಾಸಗಿ ಹಾಲು ಡೈರಿ ಕಂಪನಿಗಳು ಕಳಪೆ ಹಾಲು ಪೂರೈಸುತ್ತಿವೆ. ಎಚ್ಚರ ವಹಿಸಿ. ಶುದ್ಧ ನಂದಿನಿ ಹಾಲನ್ನೇ ಬಳಸಿ ಎಂದು ಡಾ. ರಾಘವೇಂದ್ರ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋಚಿಮುಲ್ ವತಿಯಿಂದ ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.  ಹಲವು ಪರರಾಜ್ಯ ಖಾಸಗಿ ಹಾಲು ಡೈರಿ ಕಂಪನಿಗಳು ರಾಸಾಯನಿಕ ಮಿಶ್ರಣದ ಹಾಲು ತಯಾರಿಸಿ ಗ್ರಾಹಕರಿಗೆ ಪೂರೈಸುತ್ತಿವೆ. ಇಂಥ ಡೊಂಗಿ ಹಲವು ಖಾಸಗಿ ಡೈರಿಗಳಿಗೆ ಕಡಿವಾಣ ಹಾಕಬೇಕು. ಅಲ್ಲದೆ, ಶುದ್ಧ ಹಾಲು ಪೂರೈಸುತ್ತಿರುವ ಕೋಚಿಮುಲ್ ಹಾಲನ್ನೇ ಗ್ರಾಹಕರು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.
ನಂತರ ನೂತನ ಕೋಮುಲ್ ನಿರ್ದೇಶಕ ಅಶ್ವತ್ಥ ನಾರಾಯಣ ಮಾತನಾಡಿರು. ಕಾರ್ಯಕ್ರಮಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಹಾಲು ವಿತರಿಸಲಾಯಿತು. ಈ ವೇಳೆ, ಡಾ.ಜಯಂತಿ, ಡಾ.ಮಂಜುಳ, ಇಸಿಓ ಕೃಷ್ಣಮೂರ್ತಿ, ಡಾ.ಮಾಧವನ್, ಆನಂದ್‌ರಾವ್, ಅಕ್ಷರ ದಾಸೋಹ ರಾಮಕೃಷ್ಣಪ್ಪ, ಉಪ ತಹಸೀಲ್ದಾರ್ ನಾರಾಯಣಸ್ವಾಮಿ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.

ಹಾಲು ಪೌಷ್ಟಿಕಾಂಶ, ಬಳಕೆಯ ಅರಿವು ಕಾರ್ಯಕ್ರಮ
ಚಿಕ್ಕಬಳ್ಳಾಪುರ: ಕಳಪೆ ಗುಣಮಟ್ಟದ ಹಾಲನ್ನು ಸೇವಿಸುವುದು ಬಿಟ್ಟು, ಕೆಎಂಎಫ್  ಸರಬರಾಜು ಮಾಡುವ ನಂದಿನಿ ಹಾಲನ್ನು ಉಪಯೋಗಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಸಲಹೆ ನೀಡಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಹಾಲಿನ ಪೌಷ್ಟಿಕತೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ನಂದಿನಿ ಗುಡಲೈಫ್  ಹಾಲನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಲಿನಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆದರೆ, ಪೌಷ್ಟಿಕಾಂಶ ಹಾಲನ್ನು ಸೇವಿಸಬೇಕೇ ಹೊರತು ರಾಸಾಯಾನಿಕ ಮಿಶ್ರಣಗಳಿಂದ ಕೂಡಿದ ಹಾಲನಲ್ಲ. ಕೆಲ ಖಾಸಗಿ ಸಂಸ್ಥೆಗಳು ಸ್ವಾರ್ಥ ಲಾಭಕ್ಕಾಗಿ ಹಾಲಿನಲ್ಲಿ ಯೂರಿಯಾ, ವೈಟ್ ಪೌಡರ್ ಸೇರಿದಂತೆ ಇನ್ನಿತ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಮಾರುತ್ತಿವೆ ಎಂದು ಆರೋಪಿಸಿದುರ. ರಾಜ್ಯದಲ್ಲಿ ಕೆಎಂಎಫ್  ನಿಂದ 60 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 40 ಲಕ್ಷ ಲೀಟರ್  ಮಾರಾಟ ಮಾಡಿ, ಉಳಿದ 20 ಲಕ್ಷ ಲೀಟರ್ ಹಾಲನ್ನು ರಫ್ತು ಮಾಡಲಾಗುತ್ತದೆ. ಜಿಲ್ಲೆಯಲ್ಲಿ 8.50 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದು, ಸುಮಾರು 3 ಲಕ್ಷ ಲೀಟರ್  ಹಾಲನ್ನು ಮಾರಾಟ ಮಾಡಲಾಗುತ್ತದೆ. ಸಿಹಿ ತಿಂಡಿಗಳಾದ ಮೈಸೂರ್ ಪಾಕ್, ಪೇಡಾ, ಜಾಮೂನು, ರಸಗುಲ್ಲ ಸೇರಿದಂತೆ ಅನೇಕ ಉತ್ಪನ್ನಗಳನ್ನು ವಿಶ್ವ ಕ್ಷೀರ ದಿನಾಚರಣೆ ಅಂಗವಾಗಿ ಮಾರುಕಟ್ಟೆ ದರದ ಮೇಲೆ ಶೇ.10 ರಷ್ಟು ಕಡಿತ ಮಾಡಿ ಒಂದು ವಾರದ ಮಟ್ಟಿಗೆ ಮಾರಲಾಗುತ್ತದೆ ಎಂದರು.
ವೈದ್ಯಾಧಿಕಾರಿ ಶರಣಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಪಗೌಡ, ನಾರಾಯಣಪ್ಪ, ಅಶ್ವತ್ಥಪ್ಪ ಮುಂತಾದವರು ಉಪಸ್ಥಿತರಿದ್ದರು.

ಸರ್ಕಾರಿ ಅಸ್ಪತ್ರೆ ರೋಗಿಗಳಿಗೆ ನಂದಿನಿ ಹಾಲು ವಿತರಣೆ
ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಮತ್ತು ಸಿಹಿಯನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಹಂಚುವ ಮೂಲಕ ವಿಶ್ವ ಹಾಲು ದಿನಾಚರಣೆ ಆಚರಿಸಿದರು.
ಕೋಚಿಮುಲ್ ತಾಲೂಕು ಉಪ ವ್ಯವಸ್ಥಾಪಕ ಡಾ. ವೀರಭದ್ರರೆಡ್ಡಿ ಮಾತನಾಡಿ, ನಂದಿನಿ ಅಸಂಖ್ಯಾತ ಗ್ರಾಹಕರಿಗೆ ಹಾಲು ಮಾತ್ರವಲ್ಲದೇ ಆರೋಗ್ಯಕರವಾದ ಸಿಹಿ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದರು. ನಂದಿನಿ ಸಿಹಿ ಉತ್ಸವ ಜೂ.1 ರಿಂದ ಜೂ.7 ರವರೆಗೆ ಆಚರಿಸಲು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಸಿದ್ಧತೆ ಮಾಡಿಕೊಂಡಿದ್ದು ಗ್ರಾಹಕರಿಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಶೇ.10 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕೋಮುಲ್ ಸಹಾಯಕ ವ್ಯವಸ್ಥಾಪಕ ಡಿ.ಎನ್. ಚಿನ್ನಪರೆಡ್ಡಿ, ಡಿ.ಎಂ. ಮದನಗೋಪಾಲ, ವಿಸ್ತೀರ್ಣಾಧಾಕಾರಿ ಕೆ.ಎಂ. ಮುನಿಸ್ವಾಮಿರೆಡ್ಡಿ, ಆರ್.ಬಯ್ಯಪರೆಡ್ಡಿ, ತಾಲೂಕು ಸಂಚಾರಿ ಪಶು ವ್ಯೆದ್ಯಾಧಿಕಾರಿ ಡಾ. ರಾಧಿಕ, ನೀತುಸುದರ್ಶನ್, ಷಮೀಮ್, ಸರ್ಕಾರಿ ಆಸ್ಪತ್ರೆಯ ಡಾ. ರಘುನಂದನ ಇದ್ದರು.
ಹಾಲು ಆರೋಗ್ಯಕರ ಪೇಯ
ಮಾಲೂರು: ಆರೋಗ್ಯಕರ ಪಾನೀಯವಾಗಿರುವ ಹಾಲನ್ನು ಪ್ರತಿಯೂಬ್ಬರು ದಿನನಿತ್ಯ ಸೇವಿಸಬೇಕು ಎಂದು ಕೋಚಿಮುಲ್ ನಂಜೇಗೌಡ ಹೇಳಿದರು. ವಿಶ್ವ ಹಾಲು ದಿನಾಚರಣೆ ಅಂಗವಾಗಿ ಸೋಮವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ವಿತರಿಸಿ ಮಾತನಾಡಿ, ತಾಲೂಕಿನಲ್ಲಿ ಹೈನುಗಾರಿಕೆ ಹೆಚ್ಚಿಸುವ ಜತೆಯಲ್ಲಿ ಹಾಲು ಉತ್ಪಾನಗಳು ತಾಲೂಕಿನ ಪ್ರತಿಗ್ರಾಮಗಳಲ್ಲೂ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಹಾಲು ಒಕ್ಕೂಟದ ತಾಲೂಕು ಘಟಕದ ವ್ಯವಸ್ಥಾಪಕ ಡಾ.ವಿಶ್ವನಾಥ್ ಮಾತನಾಡಿದರು. ಸಹ ವ್ಯವಸ್ಥಾಪಕ ಶ್ರೀಧರ್, ಡಾ.ಚೇತನ್, ಪ್ರಕಾಶ್, ನಾರಾಯಣಸ್ವಾಮಿ, ವೇಣು, ಶಿವಕುಮಾರ್, ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಇದ್ದರು.

ಈಗೀಗ ಹಾಲಿಗೆ ತಿರಸ್ಕಾರ: ವಿಷಾದ
ಬಂಗಾರಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲು ವಿತರಿಸುವ ಮೂಲಕ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಯಿತು. ಕೋಲಾರ ಹಾಲು ಒಕ್ಕೂಟದ ತಾಲೂಕು ಉಪ ವ್ಯವಸ್ಥಾಪಕ ಚಂದ್ರಮೋಹನ್ ಹಾಲಿನ ಪ್ಯಾಕೆಟ್ ವಿತರಿಸಿ ಮಾತನಾಡಿ, ಪೌಷ್ಟಿಕಾಂಶವಿರುವ ಹಾಲವನ್ನು ಕೆಲವರು ದಿಕ್ಕರಿಸುತ್ತಿದ್ದಾರೆ. ಪ್ರತಿ ನಿತ್ಯ ಎರಡು ಲೋಟ ಶುದ್ಧ ಹಾಲು ಕುಡಿದರೆ ಯಾವುದೇ ರೋಗಗಳು ಹರಡುವುದಿಲ್ಲ ಎಂದು ಹೇಳಿದರು. ನಂದಿನ ಹಾಲಿಗೆ ಹೊರ ದೇಶಗಳಲ್ಲೂ ಬೇಡಿಕೆ ಇದೆ. ಆದ್ದರಿಂದ ರೈತರು ಶುದ್ಧ ಹಾಲನ್ನೇ ಡೈರಿಗೆ ಪೂರೈಸಬೇಕು ಎಂದು ಮನವಿ ಮಾಡಿದರು. ಈ ವೇಳೆ, ಉಪ ವ್ಯವಸ್ಥಾಪಕ ಡಾ.ವೆಂಕಟರಮಣಪ್ಪ, ದೇವೇಂದ್ರಪ್ಪ, ಪ್ರಕಾಶ್, ಚಂದ್ರಶೇಖರ ರಾಜು, ಡಾ.ರಾಜಶೇಖರ್, ವಿಜಯಲಕ್ಷ್ಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.