ಕೋಲಾರ

ಕೋಚಿಮುಲ್ ನೂತನ ಸಾರಥಿ ಜೆ.ಕಾಂತರಾಜ್

Published On :

ಕ.ಪ್ರ.ವಾರ್ತೆ   ಕೋಲಾರ   ಜೂ.7
ಪ್ರತಿಷ್ಠಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೆ.ಕಾಂತರಾಜ್ ಆಯ್ಕೆಯಾಗಿದ್ದಾರೆ.
ಕಳೆದ ಮೇ 25ರಂದು ನಡೆದಿದ್ದ ಕೋಚಿಮುಲ್ ನಿರ್ದೇಶಕರ ಚುನಾವಣೆಯಲ್ಲಿ ಗೌರಿಬಿದನೂರು ತಾಲೂಕಿನಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಬೆಂಬಲಿತ ಜೆ.ಕಾಂತರಾಜ್ ಮತ್ತು ಕೋಲಾರ ತಾಲೂಕಿನಿಂದ ಚುನಾಯಿತರಾಗಿರುವ ಜೆಡಿಎಸ್‌ನ ರಾಮಕೃಷ್ಣೇಗೌಡ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿತ್ತು.
ಜೆ.ಕಾಂತರಾಜ್ ಕಾಂಗ್ರೆಸ್ಸಿನ 5 ಮಂದಿ ನಿರ್ದೇಶಕರು, ಒಬ್ಬ ನಾಮ ನಿರ್ದೇಶಕ, ಹಾಗೂ ಸರ್ಕಾರದ ಮೂವರು ಪ್ರತಿನಿಧಿಗಳು ಸೇರಿ 9 ಮತಗಳು ಪಡೆದರೆ, ಜೆಡಿಎಸ್‌ನ ರಾಮಕೃಷ್ಣೇಗೌಡ ತಮ್ಮ ಪಕ್ಷದ 6 ಹಾಗೂ ಪಕ್ಷೇತರ ಒಬ್ಬ ನಿರ್ದೇಶಕ ಸೇರಿದಂತೆ ಒಟ್ಟು 7 ಮತ ಪಡೆದರು.
ಮತ ತಿರಸ್ಕೃತ: ಜೆಡಿಎಸ್ ಬೆಂಬಲಿತ ನಿರ್ದೇಶಕರೊಬ್ಬರ ಮತ ತಿರಸ್ಕೃತಗೊಂಡಿತು. ಇದರಿಂದಾಗಿ ರಾಮಕೃಷ್ಣೇಗೌಡರಿಗೆ ತಮ್ಮ ಪಕ್ಷದ ಒಂದು ಕಡಿಮೆ ಆಯಿತು. ತಿರಸ್ಕೃತ ಮತ ಯಾರದ್ದು ಎಂಬುದು ಕುತೂಹಲಕ್ಕೆ ಎಡೆ ಮಾಡಿದೆ. ಮುಳಬಾಗಿಲು ತಾಲೂಕಿನ ಮಹಿಳಾ ಸದಸ್ಯೆ ಪಾರ್ವತಮ್ಮ ಇಲ್ಲವೇ ಬಂಗಾರಪೇಟೆಯ ಜಯಸಿಂಹ ಕೃಷ್ಣಪ್ಪ ಮತ ಅಸಿಂಧುಗೊಂಡಿರಬಹುದೆಂಬ ಶಂಕೆ ಜೆಡಿಎಸ್ ವಲಯದಲ್ಲಿ ವ್ಯಕ್ತವಾಗಿದ್ದರೂ ಯಾರೊಬ್ಬರು ಬಾಯಿ ಬಿಡುತ್ತಿಲ್ಲ.
ಮೂರು ದಿನಗಳ ಹಿಂದೆ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ  ಜೊತೆ ನಡೆದ ಸಭೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಲು ಅಶ್ವಥನಾರಾಯಣ ನಿರ್ಧರಿಸಿದ್ದರು. ಆದರೆ, ಮಾಜಿ ಶಾಸಕ ಶ್ರೀನಿವಾಸಗೌಡರ ಮಧ್ಯ ಪ್ರವೇಶದಿಂದಾಗಿ ನಿಲುವು ಬದಲಾಯಿಸಿ ಜೆಡಿಎಸ್ ಪರವಾಗಿ ಮತ ಹಾಕಿದ್ದಾರೆ. ಶನಿವಾರ ಕೋಚಿಮುಲ್ ಅಧ್ಯಕ್ಷರ ಚುನಾವಣೆ ಕೋಲಾರ ಉಪ ವಿಭಾಗಾಧಿಕಾರಿ ಮಂಜುನಾಥ್ ಸಮಕ್ಷಮದಲ್ಲಿ ನಡೆಯಿತು. ಚುನಾವಣೆಯ ಮೂಲಕ ಗೆದ್ದ 13, ಒಬ್ಬ ನಾಮ ನಿರ್ದೇಶಕ ಹಾಗೂ ಸರ್ಕಾರದ ಪರವಾಗಿ ಮೂವರು ಪ್ರತಿನಿಧಿಗಳು ಸೇರಿದಂತೆ ಒಟ್ಟು 16 ಮಂದಿ ಹಾಜರಾಗಿದ್ದರಾದರೂ 16 ಮತಗಳು ಪುರಸ್ಕೃತಗೊಂಡಿತು.
ನೂತನ ಅಧ್ಯಕ್ಷರ ಭರವಸೆ: ಕೋಚಿಮುಲ್ ಆಡಳಿತ ಉತ್ತಮ ರೀತಿಯಲ್ಲಿ ನಡೆಯಲು ಎಲ್ಲ ನಿರ್ದೇಶಕರ ಸಹಕಾರ ಪಡೆಯುತ್ತೇನೆ. ಅಭಿವೃದ್ಧಿ ಹಾಗೂ ರೈತರ ಹಿತಾಸಕ್ತಿ ಕಾಪಾಡಲು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ನೂತನ ಅಧ್ಯಕ್ಷ ಜೆ.ಕಾಂತರಾಜ್ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.