ಸರ್ಕಾರಿ ಆಸ್ಪತ್ರೆಗೆ ಡಿಎಚ್ಒ ಭೇಟಿ
ಮಾಲೂರು: ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಫಯಾಜ್ಖಾನ್ ಇಲ್ಲಿನ ಸರ್ಕಾರಿ ಆಸ್ವತ್ರೆಗೆ ದಿಢೀರ್ ಭೇಟಿ ನೀಡಿ ಕರ್ತವ್ಯಕ್ಕೆ ತಡವಾಗಿ ಹಾಜರಾದ ಅಧಿಕಾರಿ ಹಾಗೂ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಡಿಎಚ್ಒ ಅವರು ಬೆಳಗ್ಗೆ 10 ಗಂಟೆಗೆ ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿದಾಗ ತಾಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿ ಹಾಜರಾತಿ ಪುಸ್ತಕ ಹಿಡಿದು ಕುಳಿತರು. ಹಾಜರಾತಿ ಪುಸ್ತಕಗಳ ಜವಾಬ್ದಾರಿ ಹೊತ್ತಿದ್ದ ಪ್ರಥಮ ದರ್ಜೆ ಸಿಬ್ಬಂದಿ ಬಾಲಾಜಿಯನ್ನು ತರಾಟೆಗೆ ತೆಗೆದುಕೊಂಡರು. 11 ಗಂಟೆಯಾದರೂ ತಾಲೂಕು ವೈದ್ಯಾಧಿಕಾರಿ ಹಾಗೂ ಆಸ್ವತ್ರೆ ವೈದ್ಯಾಧಿಕಾರಿ ಹಾಜರಾಗದ ಹಿನ್ನೆಲೆಯಲ್ಲಿ ಹಾಜರಾತಿ ಪುಸ್ತಕದ ಅವರ ಹೆಸರಿನ ಭಾಗದಲ್ಲಿ ಅಕ್ಷೇಪಣೆ ವ್ಯಕ್ತ ಪಡಿಸುವ ಟಿಪ್ಪಣಿ ಬರೆದ ಡಿಎಚ್ಒ ನಂತರ ಮಾತನಾಡಿ, ನಿಗಧಿತ ವೇಳೆಗೆ ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡು ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಡಾ. ಜಗದೀಶ್, ತಾಪಂ ಸದಸ್ಯ ಎಸ್.ವಿ. ಲೋಕೇಶ್ ಇದ್ದರು.
ಗ್ರಾಪಂ ಅಧ್ಯಕ್ಷರ ಆಯ್ಕೆ
ಮಾಲೂರು: ತಾಲೂಕಿನ ಜಯಮಂಗಲ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಸುಧಾ ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದೆ ಅಧ್ಯಕ್ಷರಾಗಿದ್ದ ಮಂಗಳಾ ಗುರುಮೂರ್ತಿ ಪಕ್ಷದ ಅಂತರಿಕ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ನೀಡಿದ ರಾಜಿನಾಮೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಜಯಸುಧಾ ಜಗದೀಶ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೈಗಾರಿಕಾ ವಿಸ್ತರಣಾಧಿಕಾರಿ ಸೈಯದ್ ಖುರೇಷಿ ಅವಿರೋಧ ಆಯ್ಕೆ ಘೋಷಿಸಿದರು. ಎಂ. ನಾರಾಯಣಸ್ವಾಮಿ, ಸದಸ್ಯ ರಾಮಾಂಜನೇಯ, ಮುನಿರಾಜು, ತಿಮ್ಮರಾಯಪ್ಪ, ವೆಂಕಟಲಕ್ಷಮ್ಮ, ನಾರಾಯಣ ಸ್ವಾಮಿ, ಪದ್ಮನಾಭ್, ಟಿ.ಬಿ. ಕೃಷ್ಣಪ್ಪ, ಇದ್ದರು.
ನಾಳೆಯಿಂದ ಶ್ರೀಗಳ ಆರಾಧನೆ
ಮುಳಬಾಗಲು: ಕನ್ನಡ ದಾಸಸಾಹಿತ್ಯದ ಅಗ್ರಗಣ್ಯರಾದ ಶ್ರೀಪಾದರಾಜರ ಆರಾಧನೋತ್ಸವ ಜೂನ್ 11ರಿಂದ 13ರವರೆವಿಗೂ ನಡೆಯಲಿದೆ. 16ನೇ ಶತಮಾನದಲ್ಲಿ ಜೀವಿಸಿದ್ದ ಶ್ರೀಪಾದರಾಜರು ತಿರುಪತಿಯ ಅನ್ನಮಯ್ಯನವರ ಸಮಕಾಲೀನರು. 16ನೇ ಶತಮಾನದಲ್ಲಿ ದೇವರ ನಾಮಗಳು ಸಂಸ್ಕೃತದಲ್ಲಿಯೇ ಓದಬೇಕಾದ ಕಾಲ, ಹಾಗಾಗಿ ಶ್ರೀಸಾಮಾನ್ಯರಿಗೆ ಇದರ ಸಂಪರ್ಕವಿರಲಿಲ್ಲ. ಸಂಸ್ಕೃತದಿಂದ ಸ್ವತಹ ದೇವರ ನಾಮಗಳನ್ನು ಕನ್ನಡಕ್ಕೆ ತರ್ಜುಮೆಗೊಳಿಸಿ, ತಾವು ಕನ್ನಡದಲ್ಲಿ ಹಲವಾರು ದೇವರ ನಾಮಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿ, ಕನ್ನಡ ದಾಸಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು ಶ್ರೀಪಾದರಾಜರು. ಅವರ ಬೃಂದಾವನ ಭಕ್ತಾಧಿಗಳ ಕೋರಿಕೆಗಳನ್ನು ತೀರಿಸುವಂತಾಹುದಾಗಿದೆ. ನರಸಿಂಹತೀರ್ಥದಲ್ಲಿ ಶ್ರೀಪಾದ ಮಠಧೀಶರಾದ ಕೇಶವನಿಧಿ ತೀರ್ಥರ ನೇತೃತ್ವದಲ್ಲಿ ಜೂನ್ 11, 12 ಮತ್ತು 13ರಂದು ಆರಾಧನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 12ರಂದು ರಥೋತ್ಸವ ಕಾರ್ಯಕ್ರಮಗಳಿಗೆ ಪೂರಕವಾಗಿ ಸ್ವರ್ಣವರ್ಣತೀರ್ಥ ವಿಧ್ವತ್ ಸಭಾ ಹಾಗೂ ಸರ್ವ ಮೂಲಗ್ರಂಥ ಪಾರಾಯಣ, ಸಂಸ್ಥಾನಪೂಜೆ ಕಾರ್ಯಕ್ರಮಗಳು ನಡೆಯಲಿದೆ.
ಪೊಲೀಸ್ ವರ್ಗಾವಣೆ
ತುಮಕೂರು: ಜಿಲ್ಲೆಯ 2014 ರ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಪಟ್ಟಂತೆ ಜೂನ್ 30 ಕ್ಕೆ ಕೊನೆಗೊಳ್ಳುವಂತೆ 185 ಸಿವಿಲ್ ಪೊಲೀಸ್ ಕಾನ್ಸ್ಸ್ಟೇಬಲ್, ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್, 26 ಸಿವಿಲ್ ಹೆಡ್ ಕಾನ್ಸ್ಸ್ಟೇಬಲ್, ಮಹಿಳಾ ಹೆಡ್ ಕಾನ್ಸ್ಸ್ಟೇಬಲ್ ಮತ್ತು 11 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ಗಳನ್ನು ಪೊಲೀಸ್ ಸಿಬ್ಬಂದಿ ಮಂಡಳಿ ಸಮ್ಮುಖದಲ್ಲಿ ಕೌನ್ಸೆಲಿಂಗ್ ಮೂಲಕ ಪಾರದರ್ಶಕತೆಯಿಂದ ಅವರು ಕೋರಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

