ಕ್ರಾಂತಿಕಾರಿ ಬದಲಾವಣೆಗೆ ಕೈ ಜೋಡಿಸಿ
ಕೋಲಾರ: ಕೃಷಿ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಜೋಡಿಸಿ, ರೈತರ ಹಿತ ಕಾಪಾಡಬೇಕೆಂದು ಕೃಷಿ ಇಲಾಖೆಯ ಆಯುಕ್ತ ಸುಭೋದ್ ಯಾದವ್ ಮನವಿ ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಅವರು ಕೋಲಾರ ಜಿಲ್ಲೆಯ ಕೃಷಿ ಇಲಾಖೆಯಲ್ಲಿನ ಪ್ರಗತಿ ಪರಿಶೀಲನೆ ಮಾಡಿ, ಇಲಾಖೆಯ ಪ್ರತಿ ಅಧಿಕಾರಿ, ತಾಂತ್ರಿಕ ಸಿಬ್ಬಂದಿ, ಅನುವುಗಾರರು ರೈತರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಹಳೇ ಪದ್ಧತಿಗಳಿಗೆ ಬದಲಾಗಿ ಹೊಸ ತಂತ್ರಜ್ಞಾನದಿಂದ ಪ್ರಗತಿ ಸಾಧಿಸುವುದನ್ನು ಕಲಿಸದಿದ್ದರೆ ರೈತರು ಉದ್ಧಾರವಾಗುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಬಡ ರೈತರ ಹಿತ ಕಾಪಾಡಿ
ರೈತರಿಗೆ ಬೇಕಾದ ಗೊಬ್ಬರ, ಬೀಜ, ಕೀಟ ನಾಶಕಗಳನ್ನು ಒದಗಿಸಬೇಕಾದದ್ದು ಇಲಾಖೆಯ ಕರ್ತವ್ಯ. ಯಾವುದೋ ವ್ಯಕ್ತಿ ಇಲ್ಲವೇ ಸಂಸ್ಥೆಯ ಮರ್ಜಿಗೆ ಅಧಿಕಾರಿಗಳು ಕೆಲಸ ಮಾಡಬೇಡಿ. ಕೃಷಿ ಕ್ಷೇತ್ರಾಧಿಕಾರಿಗಳು, ತಾಂತ್ರಿಕ ವರ್ಗ ರೈತರ ಬಳಿಗೆ ಹೋಗಿ ವಿಚಾರ ವಿನಿಮಯ ಮಾಡಬೇಕು. ರೈತರ ಅಭಿಪ್ರಾಯ ಸರಿಯಿಲ್ಲದಿದ್ದರೆ ಸೂಕ್ತ ಮಾರ್ಗದರ್ಶನ ನೀಡಿ, ಸಕಾಲದಲ್ಲಿ ಪರಿಹಾರ ಸೂಚಿಸಬೇಕು ಎಂದು ತಿಳಿಸಿದರು. ಕಳಪೆ ಬೀಜ, ಗೊಬ್ಬರಕ್ಕೆ ಸಂಬಂಧಿಸಿದ 3 ವರ್ಷಗಳ ಮಾಹಿತಿ ಮಾತ್ರ ತಮ್ಮ ಬಳಿ ಇದೆ. ಈ ಹಿಂದಿನ ಮಾಹಿತಿ ಗೊತ್ತಿಲ್ಲವೆಂದು ಹೆಚ್ಚುವರಿ ಕೃಷಿ ಅಧಿಕಾರಿ ಹೇಳಿದಾಗ, ನನಗೆ ಈ ರೀತಿಯ ಮಾಹಿತಿ ಹಿಡಿಸುವುದಿಲ್ಲ. ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನಿಮ್ಮಲ್ಲಿ ಇರಬೇಕು, ಕೇವಲ ಕಾರಣ ಹೇಳಿ ಕಾಲ ಕಳೆದರೆ ಸಾಲದು, ನನಗೆ ಫಲಿತಾಂಶ ಮುಖ್ಯವೆಂದು ಮಾರ್ಮಿಕವಾಗಿ ಎಂದರು.
ಯೋಜನೆ ಬೇಡವೆಂದರೆ ರದ್ದು
ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಈ ಯೋಜನೆಗಳ ಮಾಹಿತಿ ರೈತರಿಗೆ ಏಕೆ ತಲುಪಿಸಿಲ್ಲ? ನಿಮಗೆ ಸರ್ಕಾರದ ಯೋಜನೆಗಳ ಅನುಷ್ಠಾನ ಕಷ್ಟವೇನಿಸಿದರೆ ತಿಳಿಸಿ, ಕೋಲಾರ ಜಿಲ್ಲೆಗೆ ಯೋಜನೆಗಳನ್ನು ರದ್ದು ಮಾಡಿ ಆಸಕ್ತಿಯಿಂದ ಕೆಲಸ ಮಾಡುವ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುತ್ತೇವೆ. ಬಲವಂತದಿಂದ ಯೋಜನೆ ಜಾರಿಗೆ ತರಬೇಕೆಂಬ ಉದ್ದೇಶ ನಮಗೂ ಇಲ್ಲ. ಜನಪ್ರತಿನಿಧಿಗಳ ಹಾಗೂ ರೈತರೊಂದಿಗೆ ಚರ್ಚಿಸಿ ಸದರಿ ಯೋಜನೆ ಬೇಡವೆಂದು ಪತ್ರ ಬರೆದರೆ ತಕ್ಷಣ ರದ್ದು ಮಾಡುತ್ತೇವೆ. ಆದರೆ, ಸಿಬ್ಬಂದಿ ಕೊರತೆ ಅಥವಾ ಇನ್ಯಾವುದೋ ಕಾರಣ ಹೇಳಿದರೆ ಕೇಳಲು ನಾವು ತಯಾರಿಲ್ಲವೆಂದು ಖಡಕ್ ಆಗಿ ಹೇಳಿದರು. ಸರ್ಕಾರ ನೀಡುವ ಸಬ್ಸಿಡಿಗಳು ಪ್ರತಿಯೊಬ್ಬ ರೈತನಿಗೆ ತಲುಪಬೇಕು. ಜಿಲ್ಲೆಯಲ್ಲಿ ಎಲ್ಲಾ ರೈತರಿಗೆ ಇನ್ನು ಸರ್ಕಾರದ ಸವಲತ್ತು ಸಿಕ್ಕಿಲ್ಲ ಎಂದು ಸುಭೋದ್ ಯಾದವ್ ಅಧಿಕಾರಿಗಳ ವಿರುದ್ಧ ಕೆಂಡಕಾರಿದರು.
ಅನುವುಗಾರರಿಗೆ ಸೂಚನೆ
ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಸಹಾಯ ಮಾಡಲು ನೇಮಿಸಿರುವ ಅನುವುಗಾರರು ರೈತರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯವಿದೆ. ಇನ್ನು ಮುಂದೆಯಾದರೂ ಜಿಲ್ಲೆಯ ಎಲ್ಲಾ ಕೃಷಿ ಅಧಿಕಾರಿಗಳು ಬಡ ರೈತರ ಪರವಾಗಿ ಕಾಳಜಿಯಿಂದ ಕೆಲಸ ಮಾಡಿ ಸರ್ಕಾರದ ಉದ್ದೇಶಗಳನ್ನು ಈಡೇರಿಸಿ ಎಂದರು. ನಿರ್ದೇಶಕ ಧರ್ಮರಾಜನ್, ಹೆಚ್ಚುವರಿ ನಿರ್ದೇಶಕ ಕೆ.ಎಚ್.ಹನುಮಂತಪ್ಪ, ನಾರಾಯಣರೆಡ್ಡಿ, ಜಿಪಂ ಸಿಇಒ ವಿನೋತ್ ಪ್ರಿಯಾ, ಅಪರ ಜಿಲ್ಲಾಧಿಕಾರಿ ಹಾಗೂ ಪ್ರಭಾರ ಡಿಸಿ ನವೀನ್ ಕುಮಾರ್ ರಾಜ್ ಇದ್ದರು. ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಚಿಕ್ಕಣ್ಣ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಅಧಿಕಾರಿಗಳು ಸೇಲ್ಸ್ಮೆನ್ಗಳಲ್ಲ
ರೈತ ಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ರೈತ ಮಿತ್ರರೇ ಹೊರತು ಸೇಲ್ಸ್ಮೆನ್ಗಳಲ್ಲವೆಂದು ಕೃಷಿ ಇಲಾಖೆಯ ಆಯುಕ್ತ ಸುಭೋದ್ ಯಾದವ್ ಪ್ರತಿಪಾದಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರೈತ ಸಂಪರ್ಕ ಕೇಂದ್ರ ರೈತರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು, ಗೊಬ್ಬರ, ಬೀಜ, ಕೀಟನಾಶಕ ಮತ್ತು ಕೃಷಿ ಉಪಕರಣಗಳನ್ನು ಮಾರಾಟ ಮಾಡುವ ಸೇಲ್ಸ್ಮೆನ್ ಆಗಿ ಕೆಲಸ ಮಾಡುವುದು ಸಲ್ಲದು ಎಂದರು.
ಪ್ರತಿಯೊಬ್ಬ ರೈತನಿಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹಾಗೂ ಅನುಗಾರನ ಮೊಬೈಲ್ ನಂಬರ್ ಪ್ರಚುರ ಪಡಿಸಬೇಕು, ಕೃಷಿ ಇಲಾಖೆಯ ಪ್ರತಿಯೊಂದು ಮಾಹಿತಿ ಸಾರ್ವಜನಿಕರಿಗೆ ತಿಳಿಯುವಂತೆ ವ್ಯವಸ್ಥೆ ಜಾರಿಗೆ ತರಬೇಕು, ಗೊಬ್ಬರ, ಬಿತ್ತನೆ ಬೀಜದ ಗುಣಮಟ್ಟದ ಬಗ್ಗೆ ಯಾರಾದರೂ ದೂರು ನೀಡಿದಲ್ಲಿ ತಕ್ಷಣ ಅದನ್ನು ಪ್ರಾಯೋಗಾಲಯಕ್ಕೆ ಕಳುಹಿಸಿ ಫಲಿತಾಂಶ ಬಂದ ಕೂಡಲೇ ರೈತರಿಗೆ ಪ್ರಚೂರ ಪಡಿಸುವ ಮೂಲಕ ರೈತರಲ್ಲಿ ಕೃಷಿ ಇಲಾಖೆಯ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡುವಂತೆ ಕಾರ್ಯ ಪ್ರವೃತ್ತರಾಗಲು ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

