ಯಡಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ಬೇಡ
ಕೋಲಾರ: ತಾಲೂಕಿನ ಯಡಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬಾರದೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಸುಮಾರು ಒಂದು ಗಂಟೆ ಕಾಲ ರಸ್ತೆ ತಡೆ ಮಾಡಿ ಒತ್ತಾಯಿಸಿದರು. ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹಣೆ ಆಗುವ ಕಸವನ್ನು ವಿಲೇವಾರಿ ಮಾಡಲು ಯಡಹಳ್ಳಿಯಲ್ಲಿ ಘಟಕ ಸ್ಥಾಪನೆ ಮಾಡಲು ನಗರಸಭೆಯಿಂದ ಪ್ರಯತ್ನ ನಡೆದಿದೆ ಎಂಬ ಸುದ್ದಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಮೂರಂಡಹಳ್ಳಿ ಗೇಟ್ ಬಳಿ ರಸ್ತೆ ತಡೆ ಮಾಡಿ, ಜನತೆಯ ಭಾವನೆಗಳನ್ನು ಧಿಕ್ಕರಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಿದರೆ ಬೆಂಗಳೂರಿನ ಮಂಡೂರು ಗ್ರಾಮಸ್ಥರ ಮಾದರಿಯಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಆತಂಕ: ತಾಲೂಕಿನ ಯಡಹಳ್ಳಿ, ತೊರದೇವಂಡಹಳ್ಳಿ, ವೀರಾಪುರ, ಮೂರಂಡಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಸವಿಲೇವಾರಿ ಘಟಕಕ್ಕೆ ಸುಮಾರು 4.5ಎಕರೆ ಜಮೀನನ್ನು ಗುರ್ತಿಸಿದ್ದು, ಇದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ರೋಗ ಹರಡುವ ಆತಂಕ ಉಂಟಾಗಿದೆ. ನಗರಸಭೆಯವರು ತಮ್ಮ ನಿರ್ಧಾರ ಹಿಂದಕ್ಕೆ ಪಡೆದು ಜನ-ಜಾನುವಾರುಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು. ಈಗಾಗಲೇ ಕೋಡಿಕಣ್ಣೂರು ಕೆರೆಯಲ್ಲಿ ಮತ್ತು ಸುತ್ತಮುತ್ತಲ ಬಯಲು ಪ್ರದೇಶದಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ಅವೈಜ್ಞಾನಿಕವಾಗಿ ಸುರಿಯುತ್ತಿರುವುದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ನಾಯಿ, ಕಾಗೆ, ಹದ್ದುಗಳ ಕಾಟ ಹೆಚ್ಚಾಗಿದೆ. ಜನನಿಬಿಡ ಪ್ರದೇಶವಾದ ಯಡಹಳ್ಳಿಯಲ್ಲಿ ಕಸ ವಿಲೇವಾರಿ ಘಟಕವಾದರೆ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ಅಂತರ್ಜಲ ಮತ್ತಷ್ಟು ಕಲುಷಿತವಾಗುವುದರಿಂದ ನಿರ್ಧಾರ ಕೈಬಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಅಧ್ಯಕ್ಷರ ಭರವಸೆ: ಸ್ಥಳಕ್ಕೆ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು ಭೇಟಿ ನೀಡಿ ಘಟಕ ಸ್ಥಾಪನೆ ಮಾಡುವುದಿಲ್ಲವೆಂದು ಭರವಸೆ ನೀಡಬೇಕೆಂದು ಪಟ್ಟು ಹಿಡಿದಿರುವ ವಿಚಾರ ಗೊತ್ತಾಗಿ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಯಡಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಚಿಂತನೆ ನಡೆಸಿದ್ದು ನಿಜ. ಯೋಜನೆ ಅನುಷ್ಠಾನಕ್ಕಾಗಿ ಹಣ ಮೀಸಲಿಟ್ಟಿರುವುದು ಸತ್ಯ. ಆದರೆ. ಜಮೀನು ಸ್ವಾಧೀನಕ್ಕೆ ಸರ್ಕಾರ ನಿಗದಿ ಮಾಡಿರುವ ಬೆಲೆಯನ್ನು ಜಮೀನುದಾರರು ಒಪ್ಪದಿರುವುದರಿಂದ ಭೂಮಿ ಖರೀದಿ ಪ್ರಕ್ರಿಯೆ ಕೈಬಿಡಲಾಗಿದೆ ಎಂದು ತಿಳಿಸಿದರು. ತಪ್ಪು ಮಾಹಿತಿಯಿಂದ ರಸ್ತೆ ತಡೆ ಮಾಡುವುದು ಸರಿಯಲ್ಲ. ಗ್ರಾಮದಲ್ಲಿ ಕಸ ಹಾಕುವುದಿಲ್ಲ ಎಂದು ಅಧ್ಯಕ್ಷ ಮುಬಾಕರ್ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಪ್ರತಿಭಟನೆ ನೇತೃತ್ವವನ್ನು ತೊರದೇವಂಡಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ವೆಂಕಟರಾಮಯ್ಯ, ಮಾಜಿ ಅಧ್ಯಕ್ಷ ಶಂಕರೇಗೌಡ, ನಾರಾಯಣಗೌಡ, ನಂಜುಂಡಗೌಡ, ಶಶಿಧರ್, ಮಂಜುನಾಥ್, ಲೋಕೇಶ್, ವೇಣು ಗೋಪಾಲ್, ಹರೀಶ್, ವೆಂಕಟಚಲಪತಿ ವಹಿಸಿದ್ದರು. ರಸ್ತೆತಡೆಯಿಂದ ಸುಮಾರು ಒಂದು ಗಂಟೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಗ್ರಾಮಾಂತರ ಪಿಎಸ್ಐ ದೇವೇಂದ್ರಪ್ಪ ಹಾಗೂ ಸಿಬ್ಬಂದಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

