ಭಾಗ್ಯಲಕ್ಷ್ಮಿಗೆ ವಿವಾಹ ನೋಂದಣಿ ಅಡ್ಡಿ
ಚಿಕ್ಕಬಳ್ಳಾಪುರ: ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಗೆ ವಿಳಂಬ, ಗರ್ಭಿಣಿಯರ ಮನೆಗೆ ತೆರಳಿ ಪೌಷ್ಟಿಕತೆ, ಆರೋಗ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ತಾತ್ಸಾರ ತೋರುತ್ತಿರುವುದರ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿದ್ದು, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತ್ ಪ್ರಸಾದ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ತಮ್ಮ ಇಲಾಖೆಯಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಪರಿಶೀಲಿಸಿದ ಅವರು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಗತ್ಯವಿರುವ ಸಲಹೆ ಸೂಚನೆಗಳನ್ನು ನೀಡಿ ಸ್ಪಂದಿಸುವುದರ ಮೂಲಕ ಶಿಶು ಮತ್ತು ತಾಯಿ ಮರಣ ದರವನ್ನು ನಿಯಂತ್ರಿಸಲು ಒತ್ತು ಕೊಡಬೇಕೆಂದು ತಿಳಿಸಿದರು.
ಕೌಶಲ್ಯ ತರಬೇತಿ: ಪ್ರಸ್ತುತ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಪ್ರಕರಣಗಳು, ಅದರಲ್ಲೂ ಬಾಲ್ಯ ವಿವಾಹದಂತಹ ಪ್ರಕರಣಗಳನ್ನು ತಡೆಯಲು ಸರ್ಕಾರ ಬದ್ಧವಾಗಿದೆ. ಮಹಿಳೆಯರ ಜೊತೆಗೆ ಮಂಗಳಮುಖಿಯರಿಗೂ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗವಕಾಶಗಳನ್ನು ದೊರಕಿಸಿಕೊಟ್ಟು ಸ್ವಾವಲಂಬಿಗಳಾಗುವಂತೆ ಮಾಡಲಾಗುತ್ತಿದೆ ಎಂದರು.
ಬಾಂಡ್ಗೆ ಹೊಸ ಅಡ್ಡಿ: ಪ್ರಸ್ತುತ ಭಾಗ್ಯಲಕ್ಷ್ಮೀ ಬಾಂಡ್ ಪಡೆಯಲು ಮಗುವಿನ ತಂದೆ ತಾಯಿ ಕಡ್ಡಾಯವಾಗಿ ತಮ್ಮ ವಿವಾಹ ನೋಂದಣಿಯನ್ನು ಮಾಡಿಸಬೇಕು. ಆನ್ ಲೈನ್ನಲ್ಲಿ ತ್ವರಿತವಾಗಿ ಅರ್ಜಿಯನ್ನು ಸಲ್ಲಿಸಲು ಆದೇಶಿಸಲಾಗಿದೆ. ಆದರೆ, ಬಹಳಷ್ಟು ಮಂದಿ ತಮ್ಮ ವಿವಾಹ ನೋಂದಣಿಯನ್ನು ಮಾಡಿಸಿಲ್ಲ ಎಂದರು.
ಈಗ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಲು ಕೆಲ ತೊಡಕುಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಬಾಂಡ್ಗಾಗಿ ಅರ್ಜಿಯನ್ನು ಸಲ್ಲಿಸಲು ವಿಳಂಬವಾಗುತ್ತಿದೆ ಎಂಬ ಆರೋಪ ಸಭೆಯಲ್ಲಿ ಆರೋಪಿಸಲಾಯಿತು.
ಜಿಲ್ಲಾಧಿಕಾರಿ ಡಾ. ಆರ್.ವಿಶಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

